
ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಭೆಯಲ್ಲಿ ಚರ್ಚಿಸಿದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಇ-ಸ್ವತ್ತು ಕಾಲ್ ಸೆಂಟರ್
ಸಾರ್ವಜನಿಕರಿಂದ ಬರುವ ದೂರುಗಳನ್ನು ವಿಶೇಷ ಆಸಕ್ತಿ ವಹಿಸಿ, ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು ಮತ್ತು ಅರ್ಜಿದಾರರಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಇ-ಸ್ವತ್ತು ಸೌಲಭ್ಯವನ್ನು ಜಾರಿಗೊಳಿಸುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಭೆಯಲ್ಲಿ ಚರ್ಚಿಸಿದರು.
ಗ್ರಾಮೀಣ ಜನರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದು, ಸಾರ್ವಜನಿಕರಿಂದ ಬರುವ ದೂರುಗಳ ಬಗ್ಗೆ ವಿಶೇಷ ಆಸಕ್ತಿವಹಿಸಿ ಬಗೆಹರಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇ-ಸ್ವತ್ತು ತಂತ್ರಾಂಶದಲ್ಲಿನ ಕೆಲವು ಲೋಪಗಳ ಬಗ್ಗೆ ಕೆಲವು ಸಿಇಒಗಳು ಮಾಹಿತಿ ನೀಡಿದರು. ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಸಚಿವರು ತಿಳಿಸಿದರು. ತಂತ್ರಾಂಶವನ್ನು ಎನ್.ಐ.ಸಿ ಸಿದ್ಧಪಡಿಸಿದ್ದು ಲೋಪಗಳನ್ನು ಸರಿಪಡಿಸಲು ವಿಳಂಬಗೊಂಡಿತೆಂಬ ವಿಷಯ ಪ್ರಸ್ತಾಪವಾಯಿತು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಕಾಲ್ ಸೆಂಟರ್ ಸಂಖ್ಯೆಗಳನ್ನು ಪ್ರದರ್ಶಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಇ-ಸ್ವತ್ತು ಬಗ್ಗೆ ಬರುವ ಯಾವುದೇ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಿ ಅರ್ಜಿದಾರರಿಗೆ ಮಾಹಿತಿ ನೀಡಬೇಕೆಂದು ನಿರ್ದೇಶಿಸಿದರು.
ಸಭೆಯಲ್ಲಿ ಇಲಾಖೆಯಯ ಕಾರ್ಯದರ್ಶಿ ಡಿ.ರಂದೀಪ್, ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಪಾಲ್ಗೊಂಡಿದ್ದರು.
ಏನಿದು ಇ ಸ್ವತ್ತು ಯೋಜನೆ?
ಇ-ಸ್ವತ್ತು ಸೌಲಭ್ಯ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರಂಭಿಸಿದ ಮಹತ್ವದ ಡಿಜಿಟಲ್ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶಗಳ ಆಸ್ತಿ ದಾಖಲೆಗಳನ್ನು ಪಾರದರ್ಶಕ ಹಾಗೂ ಆನ್‌ಲೈನ್ ವ್ಯವಸ್ಥೆಯ ಮೂಲಕ ಲಭ್ಯವಾಗುವಂತೆ ಮಾಡುವುದು. ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ಜಮೀನು, ಕಟ್ಟಡ ಸೇರಿದಂತೆ ಎಲ್ಲಾ ಆಸ್ತಿ ಮಾಹಿತಿಯನ್ನು ಈ ತಂತ್ರಜ್ಞಾನದ ಅಡಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ.
ಇ-ಸ್ವತ್ತು ವ್ಯವಸ್ಥೆಯಿಂದ ಆಸ್ತಿ ದಾಖಲೆಗಳಲ್ಲಿ ನಿಖರತೆ ಹಾಗೂ ಭದ್ರತೆ ಹೆಚ್ಚಾಗುವ ಜೊತೆಗೆ ನಕಲಿ ದಾಖಲೆಗಳ ಸಮಸ್ಯೆ ಕಡಿಮೆಯಾಗಲಿದೆ. ನಾಗರಿಕರಿಗೆ ಆಸ್ತಿ ವರ್ಗಾವಣೆ, ತೆರಿಗೆ ಪಾವತಿ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗುತ್ತಿದೆ. ಎನ್‌ಐಸಿ ಸಹಯೋಗದಲ್ಲಿ ರೂಪುಗೊಂಡಿರುವ ಈ ತಂತ್ರಾಂಶವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ.

