
ಸಿದ್ದರಾಮಯ್ಯ
ಜಾತಿಗಣತಿ | ಮನುವಾದಿ ಮನಸ್ಥಿತಿಯೇ ಬಿಜೆಪಿ ನಾಯಕರ ವಿರೋಧದ ಮೂಲ: ಸಿಎಂ
ಈ ಸಮೀಕ್ಷೆ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಸಮಗ್ರ ಸ್ಥಿತಿ-ಗತಿ ತಿಳಿದುಕೊಳ್ಳಲು ಹಾಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಸಾಧಿಸಲು ಸರ್ಕಾರ ಈ ಕಾರ್ಯ ಆರಂಭಿಸಿದೆ.
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಿಜೆಪಿ ನಾಯಕರು ರಾಜಕೀಯ ಕಾರಣಗಳಿಂದ ವಿರೋಧಿಸುತ್ತಿದ್ದು, ಇದಕ್ಕೆ ಅವರ ಮನವಾದಿ ಮನಸ್ಥಿತಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಮೀಕ್ಷೆ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಸಮಗ್ರ ಸ್ಥಿತಿ-ಗತಿ ತಿಳಿದುಕೊಳ್ಳಲು ಹಾಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಸಾಧಿಸಲು ಸರ್ಕಾರ ಈ ಕಾರ್ಯ ಆರಂಭಿಸಿದೆ. ಇದು ಯಾರ ವಿರೋಧಕ್ಕೂ ಅಲ್ಲ, ಎಲ್ಲರ ಪರವಾಗಿರುವ ಸಮೀಕ್ಷೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರ ಮೇಲೆ ಕಿಡಿ
ಬಿಜೆಪಿ ನಾಯಕರ ನಿಲುವು ಮನುವಾದಿ ಮನಸ್ಥಿತಿಯ ಪ್ರತೀಕ. ಸಂಪ ತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಯಥಾಸ್ಥಿತಿಯಲ್ಲೇ ಉಳಿಯಬೇಕು ಎಂಬುದು ಅವರ ಆಂತರಿಕ ಧೋರಣೆ ಎಂದು ಸಿಎಂ ಟೀಕಿಸಿದ್ದಾರೆ. ಬಿಹಾರ ಮತ್ತು ತೆಲಂಗಾಣದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಸಹಕರಿಸಿದ ಬಿಜೆಪಿ, ಕರ್ನಾಟಕದಲ್ಲಿ ಮಾತ್ರ ವಿರೋಧಿಸುತ್ತಿರುವುದು ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಈಗ ಜಾತಿಗಣತಿ ನಡೆಸಲು ಮುಂದಾಗಿದೆ. ಹಾಗಾದರೆ, ಬಿಜೆಪಿ ನಾಯಕರು ಕೇಂದ್ರದ ಜಾತಿಗಣತಿಗೂ ವಿರೋಧಿಸುತ್ತಾರಾ, ಪ್ರಧಾನಿಯ ಎದುರು ಮಾತನಾಡುವ ಧೈರ್ಯ ಇದೆಯೇ? ಎಂದು ಪ್ರಶ್ನಿಸಿದರು.
ಜನತೆಗೆ ಕರೆ
ಬಿಜೆಪಿ ನಾಯಕರ ಹೇಳಿಕೆಗಳನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಜನತೆಗೆ ಮನವಿ ಮಾಡಿದ ಸಿದ್ದರಾಮಯ್ಯ ಅವರು, ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮಗ್ರ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಕರೆ ನೀಡಿದರು.