
ಕರ್ನಾಟಕ ಜಾತಿ ಗಣತಿ: 13 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣ
ಯಾವುದೇ ಕಾರಣಕ್ಕೂ ಅಕ್ಟೋಬರ್ 7ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಅಧಿಕಾರಿಗಳಿಗೆ ಕಾರ್ಯ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ್ದರು.
ರಾಜ್ಯಾದ್ಯಂತ ತೀವ್ರ ರಾಜಕೀಯ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿರುವ, "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ" (ಜಾತಿ ಗಣತಿ) ಕಾರ್ಯವು ಚುರುಕುಗೊಂಡಿದ್ದು, ಸೆಪ್ಟೆಂಬರ್ 27ರ ಸಂಜೆಯ ವೇಳೆಗೆ ರಾಜ್ಯಾದ್ಯಂತ ಒಟ್ಟು 13 ಲಕ್ಷ ಕುಟುಂಬಗಳ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಅಕ್ಟೋಬರ್ 7ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಅಧಿಕಾರಿಗಳಿಗೆ ಕಾರ್ಯ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ್ದರು.
ಸೆಪ್ಟೆಂಬರ್ 22ರಂದು ಆರಂಭವಾದ ಈ ಬೃಹತ್ ಸಮೀಕ್ಷೆಯಲ್ಲಿ, ಸುಮಾರು 1.75 ಲಕ್ಷ ಗಣತಿದಾರರು (ಹೆಚ್ಚಾಗಿ ಸರ್ಕಾರಿ ಶಾಲಾ ಶಿಕ್ಷಕರು) ರಾಜ್ಯದ 7 ಕೋಟಿ ಜನರನ್ನು ಮತ್ತು 2 ಕೋಟಿ ಕುಟುಂಬಗಳನ್ನು ತಲುಪುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 420 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ.
ಗಣತಿದಾರರು ಮೊಬೈಲ್ ಆ್ಯಪ್ ಮೂಲಕ 60 ಪ್ರಶ್ನೆಗಳಿರುವ ಡಿಜಿಟಲ್ ನಮೂನೆಯನ್ನು ಬಳಸುತ್ತಿದ್ದಾರೆ. ಪ್ರತಿ ಮನೆಗೂ ವಿದ್ಯುತ್ ಮೀಟರ್ ಸಂಖ್ಯೆ ಬಳಸಿ ಜಿಯೋ-ಟ್ಯಾಗ್ ಮಾಡಿ, ವಿಶಿಷ್ಟ ಗುರುತಿನ ಸಂಖ್ಯೆ (UHID) ನೀಡಲಾಗುತ್ತಿದೆ. ನಕಲು ತಪ್ಪಿಸಲು ಆಧಾರ್, ಪಡಿತರ ಚೀಟಿ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಲಾಗುತ್ತಿದೆ. ಸಮೀಕ್ಷೆ ಆರಂಭವಾದ ಮೊದಲ ದಿನಗಳಲ್ಲಿ ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಈ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಲಾಗಿದ್ದು, ಸಮೀಕ್ಷೆ ಇದೀಗ ವೇಗ ಪಡೆದುಕೊಂಡಿದೆ.
ಸಮೀಕ್ಷೆಯ ಉದ್ದೇಶ ಮತ್ತು ಸರ್ಕಾರದ ನಿಲುವು
2015ರಲ್ಲಿ ನಡೆದಿದ್ದ ಕಾಂತರಾಜು ವರದಿಯನ್ನು "ಅವೈಜ್ಞಾನಿಕ" ಎಂದು ಪರಿಗಣಿಸಿ, ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಕಲ್ಯಾಣ ಯೋಜನೆಗಳು ಅರ್ಹರಿಗೆ ತಲುಪುತ್ತಿವೆಯೇ ಎಂದು ತಿಳಿಯಲು ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಈ ಸಮೀಕ್ಷೆ ಅತ್ಯಗತ್ಯ. ಇದು ಕೇವಲ ಜಾತಿಗಣತಿಯಲ್ಲ, ಪ್ರತಿಯೊಬ್ಬರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯುವ ಪ್ರಯತ್ನ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯ ವರದಿಯನ್ನು ಡಿಸೆಂಬರ್ ಅಂತ್ಯದೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.