
ಮಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಪೊಲೀಸರ ‘ಡ್ರಗ್ಸ್’ ಬ್ರೇಕ್: ಬೀಚ್, ರೆಸಾರ್ಟ್‌ಗಳ ಮೇಲೆ ಹದ್ದಿನ ಕಣ್ಣು!
ಮಂಗಳೂರಿನ ಪ್ರಮುಖ ಹಾಗೂ ಡ್ರಗ್ ಬಳಕೆ ಅನುಮಾನ ಇರುವ ಪ್ರದೇಶಗಳಲ್ಲಿರುವ ರೆಸಾರ್ಟ್‌ಗಳು ಮತ್ತು ಗೆಸ್ಟ್ ಹೌಸ್‌ಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯದಂತೆ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಇಡೀ ಕರಾವಳಿ ತೀರ ಸಜ್ಜಾಗುತ್ತಿರುವಂತೆಯೇ, ಸಂಭ್ರಮದ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮಂಗಳೂರಿನಲ್ಲಿ ಡ್ರಗ್ಸ್ ನಶೆಯ ಮೋಜು ನಡೆಯುವ ಸಾಧ್ಯತೆಯಿರುವುದರಿಂದ, ಪೊಲೀಸರು ಜಿಲ್ಲೆಯಾದ್ಯಂತ ಬಿಗಿ ಪಹರೆ ಕೈಗೊಂಡಿದ್ದಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಾದ ಬೀಚ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗಿದ್ದು, ಹಬ್ಬದ ಸಂಭ್ರಮವು ಕಾನೂನಿನ ಚೌಕಟ್ಟಿನಲ್ಲೇ ನಡೆಯುವಂತೆ ನೋಡಿಕೊಳ್ಳಲು ಇಲಾಖೆ ಮುಂದಾಗಿದೆ.
ಬೀಚ್ ಹಾಗೂ ಅಪಾರ್ಟ್‌ಮೆಂಟ್ ಪಾರ್ಟಿಗಳ ಮೇಲೆ ತೀವ್ರ ನಿಗಾ
ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ, ಸುರತ್ಕಲ್ ಮಾಲೆಮಾರ್ ಹಾಗೂ ಸಸಿಹಿತ್ಲು ಬೀಚ್‌ಗಳಿಗೆ ಹೊಸ ವರ್ಷದ ಸಂಜೆ ಸಾವಿರಾರು ಯುವಜನತೆ ಧಾವಿಸುವುದು ಸಾಮಾನ್ಯ. ಈ ಪ್ರದೇಶಗಳಲ್ಲಿರುವ ರೆಸಾರ್ಟ್‌ಗಳು ಮತ್ತು ಗೆಸ್ಟ್ ಹೌಸ್‌ಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯದಂತೆ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳ ಮೇಲ್ಛಾವಣಿ (ರೂಫ್ ಟಾಪ್) ಮೇಲೆ ಪಾರ್ಟಿ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಅಂತಹ ಸ್ಥಳಗಳಲ್ಲಿ ಶಬ್ದ ಮಾಲಿನ್ಯ ಅಥವಾ ನಿಷೇಧಿತ ವಸ್ತುಗಳ ಬಳಕೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪೊಲೀಸ್ ಕಮಿಷನರ್ ಮತ್ತು ಎಸ್‌ಪಿ ಅವರ ಬಿಗಿ ಆದೇಶ
ಕಾನೂನು ಸುವ್ಯವಸ್ಥೆ ಪಾಲನೆಯ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ಸಿಎಚ್ ಅವರು, ಸಾರ್ವಜನಿಕರ ಶಾಂತಿಗೆ ಭಂಗ ತರುವ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಬ್ಬಾಚರಣೆಯು ಕಾನೂನುಬಾಹಿರವಾಗಿ ಮಾರ್ಪಡಬಾರದು ಮತ್ತು ಮಾದಕ ವಸ್ತುಗಳ ಸರಬರಾಜಿನ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರು ಮಾತನಾಡಿ, ಕೇರಳ-ಕರ್ನಾಟಕ ಗಡಿ ಭಾಗಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ತಪಾಸಣೆ ತೀವ್ರಗೊಳಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸುವ ಅಪಘಾತಗಳನ್ನು ತಡೆಯುವುದು ಈ ಬಾರಿಯ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ
ಮಂಗಳೂರು ಶೈಕ್ಷಣಿಕ ಕೇಂದ್ರವಾಗಿರುವುದರಿಂದ ಇಲ್ಲಿ ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಸೇವನೆ ಪತ್ತೆಗಾಗಿ ರಕ್ತದ ಮಾದರಿ ಸಂಗ್ರಹಿಸಿದಾಗ, ಅನೇಕ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿರುವುದು ಪೊಲೀಸರಿಗೆ ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಹೊರ ರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳ ಮೂಲಕ ಮಾದಕ ವಸ್ತುಗಳ ಜಾಲ ವಿಸ್ತರಿಸುವ ಸಾಧ್ಯತೆಯಿರುವ ಬಗ್ಗೆ ಪೊಲೀಸ್ ಮೂಲಗಳು ಸಂಶಯ ವ್ಯಕ್ತಪಡಿಸಿದ್ದು, ಹಬ್ಬದ ನೆಪದಲ್ಲಿ ಡ್ರಗ್ಸ್ ಪೂರೈಕೆಯಾಗದಂತೆ ತಡೆಯಲು ಸಜ್ಜಾಗಿವೆ.
ವೀಲಿಂಗ್ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್
ಮತ್ತೊಂದೆಡೆ, ನಗರದ ರಸ್ತೆಗಳಲ್ಲಿ ರಾತ್ರಿ ವೇಳೆ ಬೈಕ್ ವೀಲಿಂಗ್ ಮಾಡುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, 2025ರ ಕೊನೆಯ ರಾತ್ರಿ ಇಂತಹ ಸಾಹಸಗಳು ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಮದ್ಯದ ಅಮಲಿನಲ್ಲಿ ಅಥವಾ ಮೋಜಿನ ಹೆಸರಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇರಿಸಲಾಗಿದೆ. ಪಿಸಿಆರ್ ವಾಹನಗಳು ನಿರಂತರ ರೌಂಡ್ಸ್ ಹಾಕಲಿದ್ದು, ಸಾರ್ವಜನಿಕರು ನೀಡುವ ದೂರಿನ ಮೇಲೆ ತಕ್ಷಣ ಸ್ಪಂದಿಸಲು ಕೆಎಸ್‌ಆರ್‌ಪಿ ಮತ್ತು ಸಿಎಆರ್‌ಪಿ ತುಕಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ಜೇಬಿಗೆ ಕತ್ತರಿ
ಹೊಸ ವರ್ಷದ ಮುನ್ನಾದಿನವೇ ಪೊಲೀಸರು ವಾಹನ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಒಂದು ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಪತ್ತೆಯಾದರೆ, ಕೇವಲ ದಂಡ ಮಾತ್ರವಲ್ಲದೆ ಕಾನೂನು ಪ್ರಕ್ರಿಯೆಗಳಿಗಾಗಿ ಚಾಲಕರು ಭಾರೀ ಹಣ ತೆರಬೇಕಾಗುತ್ತದೆ. ರೂ. 5,000 ಪೊಲೀಸ್ ದಂಡದ ಜೊತೆಗೆ ಆರ್‌ಟಿಒ ಶುಲ್ಕ, ವಕೀಲರ ಶುಲ್ಕ ಎಲ್ಲವೂ ಸೇರಿ ಕನಿಷ್ಠ ರೂ. 15,000 ದಿಂದ ರೂ. 25,000 ವರೆಗೆ ಖರ್ಚು ಬರುವುದು ಗ್ಯಾರಂಟಿ. ಬಹುತೇಕ ವಾಹನಗಳನ್ನು ಜಪ್ತಿ ಮಾಡುವ ಸಾಧ್ಯತೆಯಿರುವುದರಿಂದ, ಮದ್ಯದ ಅಮಲಿನಲ್ಲಿ ರಸ್ತೆಗೆ ಇಳಿಯುವ ಮುನ್ನ ಸವಾರರು ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವುದೇ ರಾಜಕೀಯ ಒತ್ತಡಗಳಿಗೂ ಮಣಿಯದೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

