
ಸಾಂದರ್ಭಿಕ ಚಿತ್ರ
ನಶೆ ಏರಿದ ನಾರಿಯರಿಗಷ್ಟೇ ಮನೆಗೆ ಡ್ರಾಪ್; ಷರತ್ತು ಅನ್ವಯ !
ಹೊಸ ವರ್ಷದ ಆಚರಣೆಗಾಗಿ ಬೆಂಗಳೂರಿಗೆ ದೌಡಾಯಿಸುವ ಸಾವಿರಾರು ಜನರು ಮದ್ಯದ ನಶೆಯಲ್ಲಿ ತೂರಾಡುವುದು ಸಹಜ. ಇದೇ ಗುಂಗಿನಲ್ಲಿ ಅತಿ ಹೆಚ್ಚು ಮದ್ಯ ಸೇವಿಸಿದರೆ ಮುಂದಾಗುವ ಕಾನೂನು ಕ್ರಮಗಳಿಗೆ ಅವರೇ ಹೊಣೆಯಾಗಲಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿ ವಿವಿಧ ಸ್ಥಳಗಳಲ್ಲಿ ಯುವಜನರು ಹೊಸ ವರ್ಷದ ಸಂಭ್ರಮದಲ್ಲಿ ಮಿಂದೇಳಲಿದ್ದಾರೆ. ನಶೆಯಲ್ಲಿ ತೇಲಾಡುವಷ್ಟು ಮದ್ಯ ಸೇವಿಸಿದರೆ ಮುಂದಾಗುವ ದುಷ್ಪರಿಣಾಮಗಳಿಗೆ ವರ್ಷಾರಂಭದ ದಿನವೇ ಹೊಣೆ ಹೊರುವುದು ಖಚಿತ.
ಹೊಸ ವರ್ಷದ ಗುಂಗಿನಲ್ಲಿ ಅತಿಯಾದ ಮದ್ಯ ಸೇವಿಸಿದರೆ ಪೊಲೀಸರು ಮನೆಗೆ ಡ್ರಾಪ್ ನೀಡಲಿದ್ದಾರೆ ಎಂಬ ಚರ್ಚೆಯ ಬೆನ್ನಲ್ಲೇ ಗೃಹ ಸಚಿವರು ಷರತ್ತುಗಳು ಅನ್ವಯ ಎಂದಿರುವುದು ಪಾರ್ಟಿಗೂ ಮುನ್ನವೇ ಯುವಜನರಲ್ಲಿ ಆತಂಕ ಸೃಷ್ಟಿಸಿದೆ. ಕೇವಲ ಮಹಿಳೆಯರಿಗೆ ಮಾತ್ರ ಈ ಅವಕಾಶವಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ (ಡಿ.31) ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಮಹಿಳೆಯರು ಅತಿಯಾದ ಮದ್ಯಪಾನ ಮಾಡಿ ಪ್ರಜ್ಞೆ ಇಲ್ಲದಂತೆ ಇದ್ದರೆ, ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಮಾತ್ರ ಆದ್ಯತೆ ಮೇರೆಗೆ ಅವರನ್ನು ಮನೆಗೆ ಡ್ರಾಪ್ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿ ಡ್ರಾಪ್ ಮಾಡುವುದಕ್ಕೂ ಮುನ್ನ ಶೆಲ್ಟರ್‌ಗಳಿಗೆ ಕರೆದೊಯ್ಯಲಾಗುವುದು, ಅಲ್ಲಿ ವೈದ್ಯರು, ನರ್ಸ್‌ಗಳು ಪರೀಕ್ಷಿಸಿದ ಬಳಿಕ ಅವರನ್ನು ಮನೆಗೆ ತಲುಪಿಸುವ ಕೆಲಸವಾಗಲಿದೆ ಎಂದು ಹೇಳಿದ್ದಾರೆ.
15 ವಿಶ್ರಾಂತಿ ಸ್ಥಳ ಗುರುತು
ಮದ್ಯಪಾನ ಮಾಡಿರುವ ಪುರುಷ ಹಾಗೂ ಮಹಿಳೆಯರನ್ನು ಮನೆಗೆ ಬಿಡಲು ಸಾಧ್ಯವಿಲ್ಲ. ಹೆಚ್ಚು ಮದ್ಯಪಾನ ಮಾಡಿರುವ, ನಡೆಯಲೂ ಆಗದೇ ಪ್ರಜ್ಞೆ ಇರದ ಮಟ್ಟಕ್ಕೆ ಹೋಗುವ ಮಹಿಳೆಯರಿಗಾಗಿ ನಗರದ ವಿವಿಧೆಡೆ 15 ವಿಶ್ರಾಂತಿ ಸ್ಥಳಗಳನ್ನು ಗುರುತಿಸಲಾಗಿದೆ. ನಶೆ ಇಳಿಯುವರೆಗೂ ಇಟ್ಟುಕೊಂಡು ಕಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಾರ್-ಪಬ್ ಮಾಲೀಕರಿಗೆ ಸೂಚನೆ
ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಮದ್ಯಪಾನ ಮಾಡಿದ ಸಂದರ್ಭದಲ್ಲಿ ಯಾವ ರೀತಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆ ಸಮಯದಲ್ಲಿ ಏನು ಬೇಕಾದರೂ ಆಗಬಹುದು, ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾಗರೂಕರಾಗಿರುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಿನಲ್ಲಿ ಸಂಭ್ರಮಾಚರಣೆ ಹೆಚ್ಚಾಗಿರುವುದರಿಂದ ಬಾರ್ ಹಾಗೂ ಪಬ್ ಮಾಲೀಕರಿಗೂ ಸೂಚನೆ ನೀಡಲಾಗಿದೆ ಎಂದರು.
ಕುಡಿದು ವಾಹನ ಚಲಾಯಿಸಿದರೆ ಕೇಸ್ ದಾಖಲು
ಸಂಭ್ರಮಾಚರಣೆ ಮಾಡಲೆಂದೇ ಬೆಂಗಳೂರಿಗೆ ಬಹಳಷ್ಟು ಜನರು ಹೊರಗಿನಿಂದ ಆಗಮಿಸುತ್ತಾರೆ. ಸಂಭ್ರಮಾಚರಣೆ ಮಾಡಿ ಮದ್ಯಪಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚು ಜನರು ಸೇರಿದಾಗ ತಳ್ಳಾಟ-ನೂಕಾಟ ಆಗಲಿದೆ. ಅದಕ್ಕಾಗಿ ಹೆಚ್ಚು ಗಮನಹರಿಸಿದ್ದೇವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ನಗರದಲ್ಲಿ 160 ಸ್ಥಳಗಳನ್ನು ಗುರುತಿಸಲಾಗಿದ್ದು ಅಪಘಾತಗಳಾಗದಂತೆ ಮುನ್ನೆಚರಿಕೆ ಕ್ರಮವಹಿಸಬೇಕಿದೆ. ಹೆಚ್ಚು ಜನ ಸೇರುವುದರಿಂದ ಭಯೋತ್ಪಾದನೆ, ಕಾಲ್ತುಳಿತ ಸೇರಿದಂತೆ ಎಲ್ಲಾ ಆಯಾಮದಲ್ಲೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಹಾಕಲು ತಿಳಿಸಿದ್ದು, ಕ್ಯಾಮೆರಾಗಳೇ ನೇರವಾಗಿ ಕಮಾಂಡ್ ಸೆಂಟರ್ ಆಗಿರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಕಲಬುರಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೊ ದೊರೆತಿದ್ದು, ಈ ವಿಡಿಯೊದ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುವುದು. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದ್ದಾರೆಯೇ ಎಂದು ತನಿಖೆ ಮಾಡಲಾಗುವುದು. ಘಟನೆ ಇತ್ತೀಚೆಗೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

