
ಸಾಂದರ್ಭಿಕ ಚಿತ್ರ
ದುಪ್ಪಟ್ಟು ಲಾಭದ ಆಮಿಷ| ಹೂಡಿಕೆ ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 2 ಕೋಟಿ ರೂ. ವಂಚನೆ
ಆರೋಪಿ ಅಂಕಿತ್ ನೀಡಿದ QR ಕೋಡ್‌ಗೆ ಮಂಗಳೂರಿನ ವ್ಯಕ್ತಿಯು ಆರಂಭದಲ್ಲಿ 3,500 ರೂ. ವರ್ಗಾಯಿಸಿ, ಶೀಘ್ರದಲ್ಲೇ 1,000 ರೂ. ಲಾಭ ಪಡೆದಿದ್ದರು. ಇದರಿಂದ ಪ್ರೇರಿತರಾದ ದೂರುದಾರರು, ದೊಡ್ಡ ಮೊತ್ತ ಹೂಡಿಕೆ ಮಾಡಿದ್ದರು.
ಆನ್‌ಲೈನ್ ವಂಚಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಮಂಗಳೂರಿನಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ದುಪ್ಪಟ್ಟು ಲಾಭದ ಆಮಿಷಕ್ಕೆ ಒಳಗಾಗಿ ಬರೋಬ್ಬರಿ 2 ಕೋಟಿ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ವಂಚಕರು ತಮ್ಮನ್ನು ಪ್ರಖ್ಯಾತ ಕಂಪನಿಯ ಪ್ರತಿನಿಧಿಗಳೆಂದು ನಂಬಿಸಿ ವಂಚನೆ ಮಾಡಿದ್ದು, ಈ ಕುರಿತು ನಗರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಪ್ಪಟ್ಟು ಹಣದ ಆಮಿಷವೊಡ್ಡಿ ವಂಚನೆ
2022ರ ಮೇ 1ರಂದು 'ಅಂಕಿತ್' ಎಂಬಾತನಿಂದ ದೂರುದಾರರಿಗೆ ವಾಟ್ಸಾಪ್ ಸಂದೇಶ ಬಂದಿತ್ತು. ತಾನು ಒಂದು ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡ ಅಂಕಿತ್, ತನ್ನ ಮೂಲಕ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣದ ಲಾಭ ಪಡೆಯಬಹುದು ಎಂದು ಭರವಸೆ ನೀಡಿದ್ದರು. ನಂತರ ಅಂಕಿತ್ ತನ್ನ ಸಹವರ್ತಿಗಳಾದ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್ ಮತ್ತು ಅಖಿಲ್ ಅವರನ್ನು ಪರಿಚಯಿಸಿ, ಇವರು ವಿದೇಶಿ ಹೂಡಿಕೆ ನಿರ್ವಹಿಸುತ್ತಾರೆ. ಅವರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂಚಕರ ಮಾತು ನಂಬಿದ ವ್ಯಕ್ತಿಗೆ, ಅಂಕಿತ್ ವಾಟ್ಸಾಪ್ ಕರೆಯ ಮೂಲಕ ಹೂಡಿಕೆ ಸಂಪೂರ್ಣ ಸುರಕ್ಷಿತ ಮತ್ತು ವಂಚನೆಯಿಂದ ಮುಕ್ತವಾಗಿದೆ ಎಂದು ಪುನಃ ಭರವಸೆ ನೀಡಿದ್ದರು. ಆರಂಭದಲ್ಲಿ ಅಂಕಿತ್ ನೀಡಿದ QR ಕೋಡ್‌ಗೆ 3,500 ರೂ. ವರ್ಗಾಯಿಸಿ, ಶೀಘ್ರದಲ್ಲೇ 1,000 ರೂ. ಲಾಭ ಪಡೆದಿದ್ದರು. ಈ ಶೀಘ್ರ ಲಾಭದಿಂದ ಪ್ರೇರಿತರಾದ ದೂರುದಾರರು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಮುಂದಾದರು. ಅವರು ತಮ್ಮ ಬ್ಯಾಂಕ್ ಖಾತೆಯಿಂದಷ್ಟೇ ಅಲ್ಲದೆ, ತಮ್ಮ ಚಿಕ್ಕಪ್ಪ, ಹೆಂಡತಿ ಮತ್ತು ಸೊಸೆಯ ಬ್ಯಾಂಕ್ ಖಾತೆಗಳಿಂದಲೂ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದರು. ಮೇ 2022 ರಿಂದ ಆಗಸ್ಟ್ 29 ನಡುವೆ, UPI ಮತ್ತು IMPS ವಹಿವಾಟುಗಳ ಮೂಲಕ ಆರೋಪಿಗಳ ಖಾತೆಗಳಿಗೆ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಕಳುಹಿಸಿದ್ದರು.
ಕೊಲೆ ಬೆದರಿಕೆಯೊಡ್ಡಿದ ವಂಚಕರು
ಕೆಲ ತಿಂಗಳಿಂದ ಈ ನಾಲ್ವರು ವಂಚಕರು ದೂರುದಾರರನ್ನು ಸಂಪರ್ಕಿಸಿರಲಿಲ್ಲ. ದೂರುದಾರರು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನಿಸಿದಾಗ ಕೊನೆಗೂ ಅಂಕಿತ್‌ನಿಂದ ಸಂದೇಶ ಬಂದಿತು. ತನಗೂ ಇತರೆ ಮೂವರಿಂದ ಮೋಸವಾಗಿದೆ. ತಾನು ಅವರೊಂದಿಗೆ ಸಂಪರ್ಕ ಕಡಿದುಕೊಂಡಿದ್ದೇನೆ ಎಂದು ಅಂಕಿತ್ ಹೇಳಿದ್ದಾನೆ.
ಇದೇ ಸಮಯದಲ್ಲಿ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್ ಮತ್ತು ಅಖಿಲ್ ದೂರುದಾರರಿಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ದೂರುದಾರರು ಕುಟುಂಬದೊಂದಿಗೆ ಚರ್ಚಿಸಿ, ನಂತರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

