
ಬಂಧಿತ ಆರೋಪಿ ದಿನೇಶ್ ನರೋಣಿ
ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ: ಮಹಾರಾಷ್ಟ್ರದಲ್ಲಿ ಆರೋಪಿ ಬಂಧನ
ಬೆಂಗಳೂರು ಮತ್ತು ಕಲಬುರಗಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಗುರುವಾರ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ದಿನೇಶ್ ನರೋಣಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ರಾಜ್ಯದ ಸರ್ಕಾರಿ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದಲ್ಲಿ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮತ್ತು ಕಲಬುರಗಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ದಿನೇಶ್ ನರೋಣಿ ಎಂಬಾತನನ್ನು ಬಂಧಿಸಲಾಗಿದೆ. ಕರ್ನಾಟಕ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಶುಕ್ರವಾರ ಬೆಳಿಗ್ಗೆ ಬೆಂಗಳೂರಿಗೆ ಕರೆತಂದಿದ್ದಾರೆ.
ಘಟನೆ ಹಿನ್ನೆಲೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಅಕ್ಟೋಬರ್ 4 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸರ್ಕಾರಿ ಆವರಣ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಮುಜರಾಯಿ ದೇವಸ್ಥಾನಗಳು ಹಾಗೂ ಇತರೆ ಸರ್ಕಾರಿ ಭೂಮಿಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿದ್ದರು. ಈ ಪತ್ರದ ಸುದ್ದಿ ವರದಿಯಾದ ಬಳಿಕ ಸಚಿವರಿಗೆ ವಿಪರೀತ ಬೆದರಿಕೆ ಕರೆಗಳು ಬಂದಿದ್ದವು.ಅದರಲ್ಲಿ ಒಂದು ಕರೆಯ ಸಾಕ್ಷಿಯನ್ನು ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದರು. ಈ ಬೆದರಿಕೆಗಳನ್ನು ತಮ್ಮ ವಿರುದ್ಧದ ಸಂಘಟಿತ ಪಿತೂರಿ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು.
ಆರೋಪಿಯ ಬಂಧನ
ಬಂಧಿತ ಆರೋಪಿ ದಿನೇಶ್ ನರೋಣಿ ಸೊಲ್ಲಾಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಚಾಕೊಲೇಟ್ ಸಂಸ್ಥೆಯೊಂದರಲ್ಲಿ ಮಾರಾಟ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು. ಪ್ರಿಯಾಂಕ್ ಖರ್ಗೆ ಅವರು ವಿಡಿಯೋವನ್ನು ಪೋಸ್ಟ್ ಮಾಡಿ ಕಾನೂನು ಕ್ರಮ ಆರಂಭಿಸುವುದಾಗಿ ಹೇಳಿದ ನಂತರ, ದಿನೇಶ್ ಸೊಲ್ಲಾಪುರದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಲಾತೂರ್‌ಗೆ ಓಡಿಹೋಗಿದ್ದ. ನಾವು ಲಭ್ಯವಿದ್ದ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯ ಹೇಳಿಕೆ
ಆರೋಪಿ ದಿನೇಶ್ ನರೋಣಿ ತಾನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಖರ್ಗೆ ಅವರು ಸಿಎಂಗೆ ಬರೆದ ಪತ್ರದ ಸುದ್ದಿ ನೋಡಿ, ಮದ್ಯದ ಪ್ರಭಾವದಲ್ಲಿ ಆಕ್ರೋಶಗೊಂಡು ಸಚಿವರಿಗೆ ಕರೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಸಂಪುಟದ ನಿರ್ಧಾರ
ಪ್ರಿಯಾಂಕ್ ಖರ್ಗೆ ಅವರ ಪತ್ರದ ಹಿನ್ನೆಲೆಯಲ್ಲಿ, ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪರಿಶೀಲಿಸಲು ನಿಯಮಗಳನ್ನು ಜಾರಿಗೆ ತರಲು ಸಚಿವ ಸಂಪುಟವು ಗುರುವಾರ ನಿರ್ಧರಿಸಿದೆ.