Hariprasad alleges that there rule not hold private events school premises during the BJP regime
x

ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌

ಬಿಜೆಪಿ ಅವಧಿಯಲ್ಲೇ ಶಾಲಾ ಆವರಣಗಳಲ್ಲಿ ಖಾಸಗಿ ಕಾರ್ಯಕ್ರಮ ಮಾಡಬಾರದೆಂಬ ನಿಯಮ: ಹರಿಪ್ರಸಾದ್‌ ಆರೋಪ

ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು ಮಾತ್ರವಲ್ಲ, ಯಾವ ಸಂಘ ಸಂಸ್ಥೆಗಳು ಕೂಡ ಕಾನೂನುಗಳನ್ನು ಮೀರಿ ವರ್ತನೆ ಮಾಡುವಂತಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ತಿಳಿಸಿದರು.


Click the Play button to hear this message in audio format

ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಪ್ರಸ್ತಾಪಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ, 2013ರಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ "ಶಾಲಾ ಆವರಣಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸಬಾರದು" ಎಂದು ಹೊರಡಿಸಿದ್ದ ಆದೇಶವೇ ಇದೀಗ ಆ ಪಕ್ಷಕ್ಕೆ ತಿರುಗುಬಾಣವಾಗಿದೆ.

ಏನಿದು ಆರ್‌ಎಸ್‌ಎಸ್‌ ವಿವಾದ?

ಶಾಲೆಗಳು, ಮೈದಾನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಆರ್‌ಎಸ್‌ಎಸ್‌ ನಡೆಸುವ ಶಾಖೆ, ಬೈಠಕ್ ಅಥವಾ ಸಾಂಘಿಕ್‌ನಂತಹ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬಿಜೆಪಿಗೆ ತಿರುಗಾದ ಹಳೆ ಆದೇಶ

2013ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಚಾಮರಾಜಪೇಟೆಯ ಕೋಟೆ ಸರ್ಕಾರಿ ಪ್ರೌಢಶಾಲೆಯ ಮೈದಾನವನ್ನು ಖಾಸಗಿ ಕಾರ್ಯಕ್ರಮಗಳಿಗೆ ನೀಡುವಂತೆ ಮನವಿ ಬಂದಿತ್ತು. ಆಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, "ಶಾಲಾ ಆವರಣವು ಮಕ್ಕಳ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರಬೇಕು. ಯಾವುದೇ ಕಾರಣಕ್ಕೂ ಶಾಲಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸಬಾರದು ಮತ್ತು ಅಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು" ಎಂದು ಸ್ಪಷ್ಟ ಆದೇಶ ಹೊರಡಿಸಿದ್ದರು. ಇದೇ ಆದೇಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಇದೀಗ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಬಿಜೆಪಿಯದ್ದು ಜಾಣ ಕುರುಡೇ?: ಹರಿಪ್ರಸಾದ್ ಪ್ರಶ್ನೆ

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, "ಬಿಜೆಪಿ ಹೇಳುವುದು ಆಚಾರ, ಮಾಡುವುದು ಅನಾಚಾರ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗಳನ್ನು ನಿಷೇಧಿಸಿ ಆದೇಶಿಸಿದ್ದನ್ನು ಬಿಜೆಪಿ ಮರೆತಂತಿದೆ. ಇದು ಬಿಜೆಪಿಯ ಜಾಣ ಕುರುಡೇ? ಅಥವಾ ಇಂತಹ ಆದೇಶಗಳು ಸರ್ಕಾರದ ಗಮನಕ್ಕೆ ಬಾರದೆ 'ಕೇಶವ ಕೃಪಾ'ದಲ್ಲಿ ಆಗುತ್ತವೆಯೇ?" ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಕಾನೂನಿಗಿಂತ ಮೀರಿದ್ದೇ?

"ಸಂವಿಧಾನವನ್ನು ಒಪ್ಪಿದವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಯಾವ ಸಂಘ ಸಂಸ್ಥೆಗಳೂ ಕಾನೂನು ಮೀರಿ ವರ್ತಿಸುವಂತಿಲ್ಲ. ಹಾಗಾದರೆ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾನೂನಿಗಿಂತ ಮೀರಿದವರೇ? ದೇಶದ ಯಾವ ಕಾನೂನುಗಳೂ ಅವರಿಗೆ ಅನ್ವಯಿಸುವುದಿಲ್ಲವೇ?" ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.

"ಅನೈತಿಕ ಮತ್ತು ಅಕ್ರಮ ಚಟುವಟಿಕೆ ನಡೆಸುವ ಉದ್ದೇಶದಿಂದಲೇ ಆರ್‌ಎಸ್‌ಎಸ್ ತನ್ನನ್ನು ನೋಂದಣಿ ಮಾಡಿಕೊಂಡಿಲ್ಲ. ಈ ಕಾರಣಕ್ಕಾಗಿಯೇ ಅದು ಭೂಗತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಮಾಜಘಾತುಕ ಸಂಘಟನೆಗಳ ಉಪಟಳಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಮತ್ತು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

Read More
Next Story