
ಸಿಟಿ ರವಿ
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪ ; ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್
ಸಿ.ಟಿ.ರವಿ ಅವರ ಭಾಷಣವು ಅನ್ಯ ಸಮುದಾಯಗಳ ನಡುವೆ ದ್ವೇಷ ಮತ್ತು ವೈರತ್ವ ಹೆಚ್ಚಿಸುವಂತಿದೆ ಎಂದು ಮದ್ದೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಮದ್ದೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲ್ಲುತೂರಾಟದ ಘಟನೆ ಬಳಿಕ ಬುಧವಾರ ನಡೆದ ಗಣೇಶ ಮೆರವಣಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಅವರು ವೇದಿಕೆ ಮೇಲೆ ಭಾಷಣ ಮಾಡಿದ್ದರು. ಅವರ ಭಾಷಣ ಅನ್ಯ ಸಮುದಾಯಗಳ ನಡುವೆ ದ್ವೇಷ ಮತ್ತು ವೈರತ್ವ ಹೆಚ್ಚಿಸುವಂತಿದೆ ಎಂದು ಮದ್ದೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ದೂರು ನೀಡಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ಸಿ.ಟಿ ರವಿ ಹೇಳಿದ್ದೇನು?
ಕಳೆದ ಭಾನುವಾರ ರಾತ್ರಿ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲೆಸೆದ ಘಟನೆಗೆ ಪ್ರತಿಯಾಗಿ ಬಿಜೆಪಿ ನೇತೃತ್ವದಲ್ಲಿ ಗಣೇಶ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಸಿ.ಟಿ. ರವಿ ಅವರು ತಮ್ಮ ಭಾಷಣದಲ್ಲಿ ಮುಸ್ಲಿಮರು ಶೇ 5 ರಷ್ಟು ಇರುವಾಗಲೇ ಬಾಲ ಬಿಚ್ಚುತ್ತಿದ್ದಾರೆ. ಇನ್ನು ಅವರ ಸಂಖ್ಯೆ ಶೇ 50 ರಷ್ಟು ಆದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕಲು ಆಗುತ್ತಾ, ಸಮಾಜ ಒಡೆದು ಹಾಕುತ್ತಾರೆ. ಕೆಲವು ಕುತಂತ್ರಿಗಳು ವೋಟಿನ ಆಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ. ಮುಸ್ಲಿಮರು ಪಾಕಿಸ್ತಾನ ಜಿಂದಾಬಾದ್ ಎಂದರೂ, ಬಾಂಬ್ ಹಾಕಿದರೂ ಆರ್‌ಎಸ್‌ಎಸ್ ಎಂದು ಬಡಿದುಕೊಳ್ಳುತ್ತಾರೆ. ಮುಸಲ್ಮಾನರು ರಾಮಮಂದಿರದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಇವರಿಗೆ ಬುದ್ಧಿ ಕಲಿಸಬೇಕಾಗಿತ್ತು. ಹಾಗಿದ್ದರೆ, ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.