The state governments appeasement politics is the reason for the unpleasant incidents; alleges the fraudster Narayanaswamy
x

ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ

ರಾಜ್ಯ ಸರ್ಕಾರದ ಓಲೈಕೆ ರಾಜಕಾರಣವೇ ಅಹಿತಕರ ಘಟನೆಗಳಿಗೆ ಕಾರಣ; ಛಲವಾದಿ ನಾರಯಣಸ್ವಾಮಿ ಆರೋಪ

ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ನಮಗೆ ನೀವು ಅನುಮತಿ ಕೊಡಬೇಕೇ ಎಂದು ಛಲವಾದಿ ನಾರಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿಗಳು ಸರ್ವರನ್ನೂ ಜೊತೆಯಾಗಿ ಕರೆದೊಯ್ಯುವ ಕಾರ್ಯ ಮಾಡುತ್ತಿಲ್ಲ. ಗಣೇಶ ವಿಸರ್ಜನೆ ವೇಳೆ ಆಗುತ್ತಿರುವ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಂದು ಕಡೆ ವಾಲಿದ್ದರಿಂದ ಇಂದು ಈ ಪರಿಸ್ಥಿತಿ ಬಂದಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸರ್ಕಾರ ಹೀಗೆ ನಡೆದುಕೊಂಡಿದ್ದು ಸರಿಯೇ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಹಾಗೂ ಭದ್ರಾವತಿಯಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಸಮಯದಲ್ಲಿ ಅಚಾತುರ್ಯದ ಘಟನೆಗಳು ನಡೆದಿವೆ. ಇದು ಕಾಂಗ್ರೆಸ್ ತನ್ನ ಮತಬ್ಯಾಂಕನ್ನು ಭದ್ರ ಪಡಿಸಿಕೊಳ್ಳಲು ಕೆಲವು ರೀತಿಯ ಓಲೈಕೆಗಳನ್ನು ಮಾಡಿದ್ದರಿಂದ ಇಡೀ ರಾಜ್ಯದಲ್ಲಿ ಜನರು ಇದೀಗ ತೊಂದರೆ ಅನುಭವಿಸುವಂತಾಗಿದೆ. ಗಣಪತಿ ವಿಸರ್ಜನೆಗೆ ನೀವು ಅವಕಾಶವನ್ನೂ ಕೊಡುತ್ತಿಲ್ಲ. ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ನಮಗೆ ನೀವು ಅನುಮತಿ ಕೊಡಬೇಕೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಏನಿದು ಗಲಭೆ ?

ಮದ್ದೂರಿನಲ್ಲಿ ತಮಿಳು ಕಾಲೋನಿ ಯುವಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು(ಸೆ.7) ರಾತ್ರಿ ರಾಮ್ ರಹೀಮ್ ನಗರದ ಮಸೀದಿಯ ಬಳಿ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಮಸೀದಿಯ ಬಳಿ ಘೋಷಣೆ ಕೂಗಬಾರದು ಅಥವಾ ಮೈಕ್ ಬಳಸಬಾರದು ಎಂದು ಮೊದಲೇ ಸೂಚನೆ ನೀಡಲಾಗಿದ್ದರಿಂದ, ಮೆರವಣಿಗೆಯಲ್ಲಿದ್ದವರು ಮೈಕ್ ಆಫ್ ಮಾಡಿದ್ದರು. ಆದರೂ, ಏಕಾಏಕಿ ಬೀದಿ ದೀಪಗಳನ್ನು ಆರಿಸಿ, ಮಸೀದಿಯ ಕಡೆಯಿಂದ ಕಲ್ಲು ಮತ್ತು ದೊಣ್ಣೆಗಳನ್ನು ಎಸೆಯಲಾಗಿದೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದರು.

ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಈ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, 21 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು. ಆರೋಪಿಗಳಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದು, ಇಬ್ಬರು ಚನ್ನಪಟ್ಟಣದವರು ಎಂದು ತಿಳಿದುಬಂದಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ, ಮದ್ದೂರು ಪಟ್ಟಣದಲ್ಲಿ ಮಂಗಳವಾರ(ಸೆ.9) ಬೆಳಿಗ್ಗೆಯವರೆಗೆ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿತ್ತು.

ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ, ಲಾಠಿ ಚಾರ್ಜ್‌

ಗಣೇಶ ವಿಸರ್ಜನೆ ಮೆರವಣಿಗೆ ನಡೆದ ಕಲ್ಲುತೂರಾಟ ಘಟನೆ ಖಂಡಿಸಿ ಸೋಮವಾರ(ಸೆ.8) ಮಸೀದಿ ಮುಂದೆ ಪ್ರತಿಭಟನೆ ನಡೆಸಿ, ಹೂವಿನ ಸರ್ಕಲ್‌ ಬಳಿ ಮುಸ್ಲಿಮರ ಹಸಿರು ಬಾವುಟ ಕಿತ್ತು ಕೇಸರಿ ಭಾವುಟ ಹಾರಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿತ್ತು. ಆದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದರು.

ಶಾಂತಿ ಸಭೆಗೆ ಬಿಜೆಪಿ ನಾಯಕರ ಗೈರು

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ(ಸೆ.10) ಮದ್ದೂರಿನಲ್ಲಿ ನಡೆದ ಶಾಂತಿ ಸಭೆಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ನಾಯಕರು ಗೈರು ಹಾಜರಾಗಿದ್ದಾರೆ. ನಗರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ಮುಸ್ಲಿಂ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಕಲ್ಲು ತೂರಾಟ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಯಾರೊಬ್ಬರೂ ಈ ಸಭೆಯಲ್ಲಿ ಇರಲಿಲ್ಲ.

Read More
Next Story