
ಆಲಮಟ್ಟಿ ಜಲಾಶಯ
ಕೃಷ್ಣಾ ಮೇಲ್ದಂಡೆ ಯೋಜನೆ: ಭೂಪರಿಹಾರ ದರ ನಿಗದಿಗೆ ಇಂದು ವಿಶೇಷ ಸಚಿವ ಸಂಪುಟ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಯೋಜನೆಗೆ ಅಗತ್ಯವಿರುವ ಜಮೀನಿಗೆ ಏಕರೂಪದ ಪರಿಹಾರ ದರ ನಿಗದಿಪಡಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲು ಇಂದು (ಮಂಗಳವಾರ) ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಯೋಜನೆಗೆ ಅಗತ್ಯವಿರುವ ಜಮೀನಿಗೆ ಏಕರೂಪದ ಪರಿಹಾರ ದರ ನಿಗದಿಪಡಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಎಲ್ಲಾ ಸಂತ್ರಸ್ತರಿಗೆ ಏಕರೂಪದ ಪರಿಹಾರ ದರವನ್ನು ನಿಗದಿಪಡಿಸಲು ಅನುಮೋದನೆ ನೀಡುವುದು. ಯೋಜನೆ ಪೂರ್ಣಗೊಳಿಸಲು ಸುಮಾರು 75,000 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಇದಕ್ಕೆ ಭಾರಿ ಪ್ರಮಾಣದ ಪರಿಹಾರ ನೀಡಬೇಕಾಗುತ್ತದೆ. ಈ ದೊಡ್ಡ ಮೊತ್ತವನ್ನು ಹೊಂದಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಈಗಾಗಲೇ ಹೆಚ್ಚಿನ ಪರಿಹಾರಕ್ಕಾಗಿ ಅನೇಕ ಸಂತ್ರಸ್ತ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.
ಯೋಜನೆಯ ಸ್ಥಿತಿಗತಿ
ಯುಕೆಪಿ ಮೂರನೇ ಹಂತದ ಪ್ರಮುಖ ಭಾಗವಾಗಿರುವ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಒಟ್ಟು 1,33,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಸ್ವಾಧೀನವಾದ ಭೂಮಿ 29,568 ಎಕರೆಯಾಗಿದ್ದು, ಪ್ರಕ್ರಿಯೆಯಲ್ಲಿರುವ ಭೂಮಿ: 44,947 ಎಕರೆ ಹಾಗೂ 59,534 ಎಕರೆ ಭೂಸ್ವಾಧೀನ ಬಾಕಿ ಇದೆ.
ಏಕರೂಪದ ಪರಿಹಾರ ದರ ನಿಗದಿಪಡಿಸುವ ಮೂಲಕ ನ್ಯಾಯಾಲಯ ಪ್ರಕರಣಗಳನ್ನು ಕಡಿಮೆ ಮಾಡಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇಂದಿನ ಸಚಿವ ಸಂಪುಟ ಸಭೆಯು ಈ ಮಹತ್ವಾಕಾಂಕ್ಷಿ ಯೋಜನೆಯ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.