ಹೈಯರ್​ ಸೆಕೆಂಡರಿ ಶಾಲೆ ನೀರ್ಚಾಲು. (ಚಿತ್ರ- ರಾಜೇಶ್​ ಶೆಟ್ಟಿ ಬಿ)
x

Ground Report : ಗಡಿನಾಡು ಕಾಸರಗೋಡಿನಲ್ಲಿ ಭಾಷಾ ತಾರತಮ್ಯದ 'ಕ್ವಿಜ್​';​ ಮಲಯಾಳಂ ಮಸೂದೆಯ ಆತಂಕ

Ground Report : ದ ಫೆಡರಲ್​ ಕರ್ನಾಟಕದ ಪ್ರತಿನಿಧಿ ಕಾಸರಗೋಡು ಜಿಲ್ಲೆಯ ನಾನಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಲವು ವಾಸ್ತವ ಸಂಗತಿಗಳು ಬಹಿರಂಗಗೊಂಡವು. ಅ ಎಲ್ಲ ವಿವರಗಳು ಈ ವರದಿಯಲ್ಲಿವೆ.


Click the Play button to hear this message in audio format

ಕೇರಳ ಸರ್ಕಾರವು ಇತ್ತೀಚೆಗೆ ಆಯೋಜಿಸಿದ 5 ಲಕ್ಷ ರೂಪಾಯಿ ಬಹುಮಾನದ 'ವಿಜ್ಞಾನ ಯಾತ್ರಾ' ಮೆಗಾ ಕ್ವಿಜ್ ಸ್ಪರ್ಧೆಯು ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿದೆಯಾದರೂ, ಅದು ಅಲ್ಲಿನ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯಲ್ಲಡಗಿರುವ ಗಂಭೀರವಾದ ರಚನಾತ್ಮಕ ದೋಷವನ್ನೂ ಜಗಜ್ಜಾಹೀರುಗೊಳಿಸಿದೆ.

ಒಂದೆಡೆ ಭಾಷಾ ಅಡೆತಡೆಗಳ ನಡುವೆಯೂ ಕನ್ನಡದ ಮಕ್ಕಳು ತೋರುತ್ತಿರುವ ಅದ್ಭುತ ಉತ್ಸಾಹ, ಮತ್ತೊಂದೆಡೆ ಕೇರಳ ಸರ್ಕಾರದ ನೂತನ 'ಮಲಯಾಳಂ ಭಾಷಾ ಮಸೂದೆ-2025'ರ ಆತಂಕ ಮತ್ತು ಇದಕ್ಕೆ ಕರ್ನಾಟಕ ಸರ್ಕಾರದ ತೀವ್ರ ಪ್ರತಿರೋಧ... ಈ ಎಲ್ಲ ವಿದ್ಯಮಾನಗಳು ಕಾಸರಗೋಡಿನ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನವನ್ನು ಮೂಡಿಸಿವೆ. ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಸ್ಥಿತಿಗತಿಗಳ ಮೇಲೆ ಈ ವರದಿ ಬೆಳಕು ಚೆಲ್ಲುತ್ತದೆ.

ದ ಫೆಡರಲ್​ ಕರ್ನಾಟಕದ ಪ್ರತಿನಿಧಿ ಕಾಸರಗೋಡು ಜಿಲ್ಲೆಯ ನಾನಾ ಶಾಲೆಗಳಿಗೆ ಭೇಟಿ ನೀಡಿ ವರದಿಗೆಂದು ಭೇಟಿ ನೀಡಿದಾಗ ಹಲವು ವಾಸ್ತವ ಸಂಗತಿಗಳು ಬಹಿರಂಗಗೊಂಡವು.

ಪೆರಡಾಲ ಶಾಲೆ (ಚಿತ್ರ ರಾಜೇಶ್ ಶೆಟ್ಟಿ)

ಮಲಯಾಳಂ ಪ್ರಶ್ನೆಗಳಿಗೆ ಕನ್ನಡದ ಉತ್ತರ

ಕೇರಳ ಸರ್ಕಾರವು ಬರೋಬ್ಬರಿ 5 ಲಕ್ಷ ರೂ.ಗಳ ಬೃಹತ್ ಬಹುಮಾನದೊಂದಿಗೆ 'ಮುಖ್ಯಮಂತ್ರಿಗಳ ಮೆಗಾ ಕ್ವಿಜ್' (ವಿಜ್ಞಾನ ಯಾತ್ರಾ) ಸ್ಪರ್ಧೆಯನ್ನು ಆಯೋಜಿಸಿತ್ತು. 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಈ ಸ್ಪರ್ಧೆಯು ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಭಾಷಾ ಸಮಸ್ಯೆಯ ನೈಜ ಚಿತ್ರಣವನ್ನು ಅನಾವರಣಗೊಳಿಸಿತು. ಸ್ಪರ್ಧೆಯ ಪ್ರಶ್ನೆಗಳು ಸಂಪೂರ್ಣವಾಗಿ ಮಲಯಾಳಂನಲ್ಲಿದ್ದವು. ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆರಂಭಿಕ ಆಘಾತವಾಗಿತ್ತು.

ಆದರೆ, ಕಾಸರಗೋಡಿನ ಕನ್ನಡ ಭಾಷಾ ವಿದ್ಯಾರ್ಥಿಗಳು ಎದೆಗುಂದಿಲ್ಲ ಎಂಬುದು ದ ಫೆಡಲ್​ ಕರ್ನಾಟಕಕ್ಕೆ ವೇದ್ಯವಾಗಿದೆ. ಯಾಕೆಂದರೆ, ಶಿಕ್ಷಕರು ಸ್ಥಳದಲ್ಲೇ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದಾಗ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಕಾಸರಗೋಡು ಪುತ್ತಿಗೆಯ ಎಜೆಬಿಎಸ್ ಶಾಲೆಯ ಶಿಕ್ಷಕ ಬಾಬು ಅವರ ಪ್ರಕಾರ, "ಸ್ಪರ್ಧೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಡುವಂತೆ ಆದೇಶವಿದ್ದ ಕಾರಣ ಶಿಕ್ಷಕರು ಪ್ರಶ್ನೆಗಳನ್ನು ತರ್ಜುಮೆ ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಅಚ್ಚರಿಯೆಂದರೆ, ಮಲಯಾಳಂ ಮಾತೃಭಾಷೆಯ ವಿದ್ಯಾರ್ಥಿಗಳಿಗಿಂತ ಕನ್ನಡದ ವಿದ್ಯಾರ್ಥಿಗಳೇ ಹೆಚ್ಚು ಉತ್ಸಾಹದಿಂದ ಮತ್ತು ನಿಖರವಾಗಿ ಉತ್ತರಿಸಿದ್ದಾರೆ". ಇದು ಕನ್ನಡ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾದರೆ, ವ್ಯವಸ್ಥೆಯು ಒಡ್ಡುತ್ತಿರುವ ಭಾಷಾ ತಡೆಗೋಡೆಯನ್ನು ಮೀರಿ ಕನ್ನಡಿಗರು ಮಿಂಚಬಲ್ಲರು ಎಂಬುದಕ್ಕೆ ಸಾಕ್ಷಿಯೂ ಹೌದು.

ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ ( ಚಿತ್ರ- ರಾಜೇಶ್​ ಶೆಟ್ಟಿ)

ವಿಷಯ ಪಾಠ ಮಾಡಲು ಶಿಕ್ಷಕರ ಕೊರತೆ

ಕ್ವಿಜ್‌ನಲ್ಲಿನ ಅನುವಾದದ ಸಮಸ್ಯೆ ಒಂದು ಸಣ್ಣ ಉದಾಹರಣೆಯಷ್ಟೇ. ಆದರೆ, ಕಾಸರಗೋಡಿನ ಕನ್ನಡ ಶಾಲೆಗಳಲ್ಲಿನ ನೈಜ ಸಮಸ್ಯೆ ಇರುವುದು ವಿಷಯ ಶಿಕ್ಷಕರ ನೇಮಕಾತಿಯಲ್ಲಿ. ಕನ್ನಡವನ್ನು ಒಂದು ಭಾಷೆಯಾಗಿ ಬೋಧಿಸಲು ಶಿಕ್ಷಕರಿದ್ದಾರೆ, ಆದರೆ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದಂತಹ ಕ್ಲಿಷ್ಟಕರ ವಿಷಯಗಳನ್ನು (Core Subjects) ಬೋಧಿಸಲು ಕನ್ನಡ ಬಲ್ಲ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ.

2016ರಲ್ಲಿ ನಿವೃತ್ತರಾದ ಹಿರಿಯ ಶಿಕ್ಷಕ ಶ್ರೀಧರ ಮಣಿಯಾಣಿ ಅವರ ಪ್ರಕಾರ, "ಕಾಸರಗೋಡಿನಲ್ಲಿ ಕನ್ನಡ ಶಿಕ್ಷಕ ವೃತ್ತಿಗೆ ಬರುವ ಅರ್ಹ ಅಭ್ಯರ್ಥಿಗಳ ಕೊರತೆಯಿಲ್ಲ. ಆದರೆ ಸರ್ಕಾರವು ಭಾಷಾ ಅಲ್ಪಸಂಖ್ಯಾತರಿಗಾಗಿ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆಯನ್ನೇ ನಡೆಸುತ್ತಿಲ್ಲ. ನಾನು ನಿವೃತ್ತಿಯಾದ ಹುದ್ದೆಗೂ ಇನ್ನೂ ನೇಮಕಾತಿಯಾಗಿಲ್ಲ".

ಪ್ರಸ್ತುತ ಬಹುತೇಕ ಶಾಲೆಗಳಲ್ಲಿ ಮಲಯಾಳಂ ಮಾತೃಭಾಷೆಯ ಶಿಕ್ಷಕರು ಈ ವಿಷಯಗಳನ್ನು ಮಲಯಾಳಂನಲ್ಲೇ ಬೋಧಿಸುತ್ತಿದ್ದಾರೆ. ಧರ್ಮತ್ತಡ್ಕದ ಮಣಿಕಂಠ ಅವರು ಹೇಳುವಂತೆ, "ಸಮಸ್ಯೆ ಇರುವುದು ಕನ್ನಡವನ್ನು ಭಾಷೆಯಾಗಿ ಕಲಿಯುವುದಲ್ಲಲ್ಲ, ಬದಲಾಗಿ ವಿಜ್ಞಾನ ಮತ್ತು ಗಣಿತದಂತಹ ವಿಷಯಗಳನ್ನು ತಮಗೆ ಸಂಪೂರ್ಣವಾಗಿ ಅರ್ಥವಾಗದ ಭಾಷೆಯಲ್ಲಿ ಕಲಿಯಬೇಕಾದ ಅನಿವಾರ್ಯತೆ ಇಲ್ಲಿದೆ". ಇದರಿಂದಾಗಿ ಕನ್ನಡ ಮಕ್ಕಳು ಇತರ ವಿಷಯಗಳಲ್ಲಿ ಹಿಂದುಳಿಯುವ ಭೀತಿ ಎದುರಾಗಿದೆ.

ನೀರ್ಚಾಲು ಶಾಲೆಯ ಶಿಕ್ಷಕರೊಬ್ಬರು ಕನ್ನಡ ವಿದ್ಯಾರ್ಥಿಗಳು ಇತರೇ ಪಠ್ಯಗಳಲ್ಲಿ ಹಿಂದುಳಿಯಲು ಮಲಯಾಳಂ ಕಲಿತ ಶಿಕ್ಷಕರು ಇತರೇ ವಿಷಯಗಳನ್ನು ಮಲಯಾಳಂನಲ್ಲಿ ಬೋಧಿಸುವುದು ಕಾರಣ. ಹೆಚ್ಚಿನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಅಭ್ಯಾಸವಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಹೆತ್ತವರಲ್ಲಿ ಒಂದು ರೀತಿಯ ಕೀಳರಿಮೆ ಹೆಚ್ಚಿದೆ. ಹಾಗಿದ್ದರೂ ಕನ್ನಡ ಭಾಷೆ ಹಿಂದೆ ಬಿದ್ದಿಲ್ಲ. ಸರಕಾರದ ನಿಯಮಗಳಷ್ಟೇ ರಾಜಕೀಯ ಪ್ರೇರಿತವಾಗಿರುತ್ತವೆ ಮತ್ತು ಕಾಸರಗೋಡಿನಲ್ಲಿ ಕನ್ನಡದ ಮಲತಾಯಿ ಧೋರಣೆ ಇದೆ ಎಂದನಿಸುತ್ತದೆ. ಹಾಗಾಗಿ ಕನ್ನಡ ಪರ ಸಂಘಟನೆಗಳ ಒತ್ತಡ ಪರಿಣಾಮಕಾರಿಯಾಗಿದೆ, ಎನ್ನುತ್ತಾರೆ.

ಎರಡೂ ಭಾಷೆಗಳಿರಲಿ!

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 194 ಕನ್ನಡ-ಮಲಯಾಳಂ ಶಾಲೆಗಳಿದ್ದು, ಪ್ರಾದೇಶಿಕ ಮಾತೃಭಾಷೆ(ಮನೆಭಾಷೆ)ಗೆ ಅನುಗುಣವಾಗಿ ವಿದ್ಯಾರ್ಥಿಗಳಿದ್ದಾರೆ. ಆದರೂ ಹೆಚ್ಚಿನವರು ಮಲಯಾಳಂ ಜೊತೆಗೆ ಕನ್ನಡವನ್ನೂ ಕಲಿಯಲು ಇಚ್ಚೆ ಪಡುತ್ತಾರೆ.

ಸರಕಾರಿ ಶಾಲೆಯೊಂದರ ಶಿಕ್ಷಕ ಶಿವನ್ ಪ್ರಕಾರ, ಮಲಯಾಳಂ ಮಾತೃಭಾಷೆಯಿಂದ ಬಂದ ಶಿಕ್ಷಕರು ಕನ್ನಡ ಬೋಧಿಸುವುದು ಕಷ್ಟ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಂ ಭಾಷೆಯಲ್ಲಿ ಪಠ್ಯವಿಷಯಗಳನ್ನು ಬೋಧಿಸಿದರೆ ಅವರು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ಆದರೆ ಶಿಕ್ಷಕರಿಗೆ ಫಲಿತಾಂಶ ಶೇ.೧೦೦ ರ ಸಾಧನೆಯ ಗುರಿ ಇರುತ್ತದೆ. ಹೀಗಾಗಿ ಸರಕಾರದ ನಿಯಮಾವಳಿಗಳಂತೆ ಕನ್ನಡ ವಿದ್ಯಾರ್ಥಿಗಳೂ ಕೂಡಾ ಸಾಧನೆ ಮಾಡಲು ಪ್ರೇರಣೆ ಮತ್ತು ಹೆಚ್ಚಿನ ಗಮನ ಕೊಡಬೇಕಾಗುತ್ತದೆ,'' ಎನ್ನುತ್ತಾರೆ.

ತನ್ನ 20 ವರ್ಷದ ಸೇವೆಯಲ್ಲಿ ಕಾಸರಗೋಡಿನ ನಾಲ್ಕು ಶಾಲೆಗಳಲ್ಲಿ ಬೋಧಿಸಿದ ಅನುಭವ ಇರುವ ಅವರು, ಶಾಲೆಗಳೊಳಗೆ ಕನ್ನಡ-ಮಲಯಾಳಂ ಭೇಧ-ಭಾವ ಇಲ್ಲ. ಎಲ್ಲರೂ ಸಮಾನವಾಗಿ ಬೆರೆಯುತ್ತಾರೆ. ಮಿಕ್ಕೆಲ್ಲವೂ ರಾಜಕೀಯ ಎಂದು ಅಭಿಪ್ರಾಯ ಪಡುತ್ತಾರೆ.

ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್​ ( ಅಂಗಡಿಮೊಗರು)

ತಾಂತ್ರಿಕ ತೊಡಕುಗಳು ನಿವಾರಣೆ ಆಗಲಿ

ಧರ್ಮತ್ತಡ್ಕ ನಿವಾಸಿ ಮಣಿಕಂಠ ಅವರ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿನ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲಯಾಳಂ ಶಿಕ್ಷಕರಿದ್ದಾರೆ, ಹಾಗೆಯೇ ಕನ್ನಡ ಮೊದಲ ಭಾಷಾ ಪಠ್ಯಕ್ಕೂ ಶಿಕ್ಷಕರಿದ್ದಾರೆ. ಅವರೆಲ್ಲರೂ ಕನ್ನಡ ಕಲಿಕೆಗೆ ಪ್ರೋತ್ಸಾಹ ನೀಡುತ್ತಾರೆ. ಆದರೆ ಸಮಸ್ಯೆಯಾಗುವುದು ಕನ್ನಡ ಮೊದಲ ಭಾಷೆಯಾಗಿ ಆಯ್ಕೆ ಮಾಡಿದಾಗ ಅಲ್ಲ, ಬದಲಾಗಿ ಸಮಾಜ, ವಿಜ್ಞಾನ, ಗಣಿತದಂತಹ ವಿಷಯಗಳಿಗೆ ಮಲಯಾಳಂ ಭಾಷೆಯ ಅಧ್ಯಾಪಕರನ್ನು ನೇಮಿಸಿದಾಗ. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳಿಗೆ ಕಷ್ಟದ ವಿಷಯವನ್ನು ಮಲಯಾಳಂನಲ್ಲಿ ಬೋಧಿಸಿದಾಗ ಆ ವಿಷಯಗಳಲ್ಲಿ ಅವರು ಹಿಂದೆ ಉಳಿಯುತ್ತಾರೆ. ಹೀಗಾಗಿ ಸರಕಾರ ಕನ್ನಡ-ಮಲಯಾಳಂ ಶಾಲೆಗಳಲ್ಲಿನ ತಾಂತ್ರಿಕ ತೊಡಕುಗಳನ್ನು ಮೊದಲಾಗಿ ನಿವಾರಿಸಬೇಕು, ಎಂದು ಒತ್ತಾಯಿಸುತ್ತಾರೆ.

ಎರಡೂ ಭಾಷೆ ಇರಲಿ

ಪುತ್ತಿಗೆ ನಿವಾಸಿ ಬಾಲಕೃಷ್ಣ ಹೇಳುವಂತೆ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳು ಬೇಕು. ಯಾಕೆಂದರೆ ಕಾಸರಗೋಡು ಗಡಿನಾಡು ಆಗಿರುವುದರಿಂದ ಎರಡೂ ರಾಜ್ಯಗಳಲ್ಲಿ ವ್ಯವಹಾರ ಸಲೀಸಾಗಿ ಆಗುತ್ತದೆ. ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಿದರೆ ಅದು ಮಕ್ಕಳ ಭವಿಷ್ಯದ ಮೇಲೆ ಆಡುವ ಆಟ, ಇದು ಮುಂದಿನ ವರ್ಷಗಳಲ್ಲಿ ಕಾಸರಗೋಡಿನ ಯುವಜನತೆ ಮೇಲೆ ಭಾಷಾ-ತಾರತಮ್ಯದ ಪರಿಣಾಮ ಬೀರಬಹುದು.

ನೀರ್ಚಾಲಿನ ಅಟೋರಿಕ್ಷಾ ಚಾಲಕ ಗಂಗಾಧರ ಮಲಯಾಳಂ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ತನ್ನ ಮಕ್ಕಳನ್ನೂ ಮಲಯಾಳಂ ಕಲಿಯುವುದಕ್ಕೆ ಪ್ರೋತ್ಸಾಹಿಸುತ್ತಾರೆ. ಕೇರಳಿಗರು ಇಂದು ವಿಶ್ವದ ಮೂಲೆ ಮೂಲೆಗಳಲ್ಲಿದ್ದಾರೆ ಎನ್ನುವ ಅವರು ಮಲಯಾಳಂ ಭಾಷೆ ಹೆಚ್ಚು ಪ್ರಯೋಜನಕಾರಿ ಎಂದವರು ವಾದಿಸುತ್ತಾರೆ. ಇದಕ್ಕೆ ಕೇರಳ ಇತರ ರಾಜ್ಯಗಳಿಗಿಂತ ಅಭಿವೃದ್ಧಿಯಲ್ಲಿ ಮುಂದಿದೆ ಎಂಬ ಕಾರಣ ನೀಡುತ್ತಾರೆ.

ಸೀತಾಂಗೋಳಿಯ ಗೂಡಂಗಡಿ ಮಾಲಿಕ ಅಬ್ಹುಲ್ ಬಶೀರ್, ಮಲಯಾಳಂ ಕಲಿಕೆಯಿಂದ ಒಳ್ಳೆಯ ಭವಿಷ್ಯವಿದೆ. ಕರ್ನಾಟಕದಲ್ಲಿ ಉದ್ಯೋಗಾವಕಾಶಗಳು ಕಡಿಮೆ. ವಿದೇಶಗಳಲ್ಲಿಯೂ ಮಲಯಾಳಂ ಭಾಷಿಕರು ಇರುವುದರಿಂದ ಈ ಭಾಷೆ ಕಲಿತರೆ ಏನೂ ನಷ್ಟವಿಲ್ಲ. ಕನ್ನಡದಿಂದ ನಷ್ಟವಿದೆ ಎಂದು ಅರ್ಥವಲ್ಲ, ಆದರೆ ಕೇರಳದಲ್ಲಿದ್ದು ಮಲಯಾಳಂ ಕಲಿಯದಿದ್ದರೆ ವ್ಯರ್ಥ ಎನ್ನುತ್ತಾರೆ.

ಕಾಸರಗೋಡು ಕರ್ನಾಟಕಕ್ಕೆ ಸೇರಲಿ!

ಗಡಿ ಸಮೀಪದ ಪೆರ್ಲದಲ್ಲಿ ಟೈಲರ್ ಆಗಿರುವ ಸಂಜೀವ ಅವರು ಭಾಷೆಯ ವಿಚಾರದಲ್ಲಿ ಸ್ಪಷ್ಟತೆ ಸಿಗಬೇಕಾದರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಅದು ಕವಿ ಕಯ್ಯಾರ ಕಿಂಞಣ್ಣ ರೈ ಅವರ ಹೋರಾಟವಾಗಿತ್ತು. ಕಾಸರಗೋಡು ಕರ್ನಾಟಕಕ್ಕೆ ಸೇರಿದರೆ ಕಯ್ಯಾರರ ಆತ್ಮಕ್ಕೂ ಶಾಂತಿ ಸಿಗಬಹುದು ಎನ್ನುತ್ತಾರೆ.

ಕಾಸರಗೋಡು ಕನ್ನಡ ಸಂಘದ ಸದಸ್ಯ ರಾಧಾಕೃಷ್ಣ ಅವರು ಹೇಳುವಂತೆ, ಕಾಸರಗೋಡಿನ ಜನರು ಬಹುಪಾಲು ಜನರು ಕನ್ನಡಿಗರಾಗಿ ಕೇರಳ ಸರಕಾರದ ಅಧೀನರಾಗಿದ್ದಾರೆ. ಮಲಯಾಳಂ ಹೇರಿಕೆ ಕುರಿತು ಈ ಸರಕಾರದ ತೀರ್ಮಾನಗಳು ಬಲಗೊಳ್ಳುತ್ತವೆ. ಅದಕ್ಕಾಗಿ ಮಲತಾಯಿ ಧೋರಣೆಗೆ ಬಲಿಯಾಗುವ ಬದಲಿಗೆ ಎಲ್ಲರೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದೇ ಹೋರಾಟ ಮಾಡಬೇಕಿದೆ ಎನ್ನುತ್ತಾರೆ.

ಬದುಕು, ಅಸ್ಮಿತೆಯ ಪ್ರಶ್ನೆಗಳ ನಡುವೆ

ಕಾಸರಗೋಡಿನ ಜನರ ಅಭಿಪ್ರಾಯಗಳು ಭಾಷಾ ಅಸ್ಮಿತೆ ಮತ್ತು ಬದುಕಿನ ಅನಿವಾರ್ಯತೆಯ ನಡುವೆ ಹಂಚಿಹೋಗಿವೆ. ಕೆಲವರು ಉದ್ಯೋಗ ಮತ್ತು ಭವಿಷ್ಯದ ದೃಷ್ಟಿಯಿಂದ ಮಲಯಾಳಂ ಕಲಿಕೆ ಅನಿವಾರ್ಯ ಮತ್ತು ಲಾಭದಾಯಕ ಎಂದು ಅವರು ವಾದಿಸುತ್ತಾರೆ. "ಕೇರಳ ರಾಜ್ಯದಲ್ಲಿ ವಾಸವಿದ್ದು ಮಲಯಾಳಂ ಕಲಿಯದಿದ್ದರೆ ಅದು ವ್ಯರ್ಥ ಎನ್ನುತ್ತಾರೆ. ಅದರ ಜತೆಗೆ, ಕನ್ನಡ ಪ್ರೇಮಿಗಳು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಹಳೆಯ ಕೂಗಿಗೆ ಮತ್ತೆ ಜೀವ ತುಂಬುತ್ತಿದ್ದಾರೆ. ಕಾಸರಗೋಡು ಕರ್ನಾಟಕಕ್ಕೆ ಸೇರಿದರೆ ಮಾತ್ರ ಈ ಮಲತಾಯಿ ಧೋರಣೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ. ಮಲಯಾಳಂ ಹೇರಿಕೆಯ ವಿರುದ್ಧ ಹೋರಾಡುವ ಬದಲು, ನಮ್ಮ ನೆಲ ಕರ್ನಾಟಕಕ್ಕೆ ಸೇರಲಿ ಎಂಬ ಹೋರಾಟವೇ ಸೂಕ್ತ," ಎಂದು ಬಲವಾಗಿ ಪ್ರತಿಪಾದಿಸುತ್ತಾರೆ.

'ವಿಜ್ಞಾನ ಯಾತ್ರಾ' ಕ್ವಿಜ್ ಸ್ಪರ್ಧೆಯು ಕನ್ನಡ ವಿದ್ಯಾರ್ಥಿಗಳ ಪ್ರತಿಭೆಯನ್ನು ತೋರಿಸಿಕೊಟ್ಟಿದೆ. ಆದರೆ, ಶಿಕ್ಷಕರ ನೇಮಕಾತಿಯಲ್ಲಿನ ತಾರತಮ್ಯ ಮತ್ತು ಹೊಸ ಮಲಯಾಳಂ ಮಸೂದೆಯ ತೂಗುಗತ್ತಿ ಅವರ ಶೈಕ್ಷಣಿಕ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಇತ್ತೀಚಿನ ವಿವಾದವೇನು?

ಈ ಸ್ಥಳೀಯ ಸಮಸ್ಯೆಗಳ ಬೆನ್ನಲ್ಲೇ, ಕೇರಳ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ಮಲಯಾಳಂ ಭಾಷಾ ಮಸೂದೆ-2025' ಗಡಿನಾಡ ಕನ್ನಡಿಗರ ಆತಂಕವನ್ನು ಇಮ್ಮಡಿಗೊಳಿಸಿದೆ. ಈ ಮಸೂದೆಯು ಕೇರಳದ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಹೊಂದಿದೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನದ 30 ಮತ್ತು 350ಎ ವಿಧಿಯಡಿ ಲಭ್ಯವಿರುವ ಶಿಕ್ಷಣ ಹಕ್ಕನ್ನು ಈ ಮಸೂದೆ ಕಸಿದುಕೊಳ್ಳಬಾರದು. ಕಾಸರಗೋಡಿನಂತಹ ಗಡಿಭಾಗದಲ್ಲಿ ಕನ್ನಡ, ತುಳು ಮತ್ತು ಮಲಯಾಳಂ ಭಾಷೆಗಳ ಸಹಬಾಳ್ವೆಗೆ ಧಕ್ಕೆ ತರಬಾರದು," ಎಂದು ಅವರು ಎಚ್ಚರಿಸಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಸಹ ಈ ಮಸೂದೆಗೆ ತಡೆ ನೀಡುವಂತೆ ಒತ್ತಾಯಿಸಿದೆ.

Read More
Next Story