
ಎಐ ಆಧಾರಿತ ಚಿತ್ರ
ರಾಜ್ಯದಲ್ಲಿ ಹುಲಿ ಗಣತಿ ಪ್ರಾರಂಭ ; ಮೂವರು ಹಂತಗಳಲ್ಲಿ ನಡೆಯಲಿರುವ ಸಮೀಕ್ಷೆ
ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಇಂದಿನಿಂದ ಹುಲಿ ಹಾಗೂ ಮಾಂಸಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭವಾಗಲಿದೆ.
ರಾಜ್ಯದಲ್ಲಿ ಇತ್ತೀಚೆಗೆ ಹುಲಿಗಳ ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದಾಗಿ ಕಾಡು ಜೀವ ಸಂರಕ್ಷಣೆಯ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಹುಲಿಗಳ ಪ್ರಾಯೋಗಿಕ ಗಣತಿಗೆ ಮುಂದಾಗಿದೆ. ಇಂದು (ಜನವರಿ 5) ರಿಂದ ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ ಹಾಗೂ ಬಿಆರ್‌ಟಿ ಸೇರಿದಂತೆ ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಅರಣ್ಯ ವಿಭಾಗಗಳಲ್ಲಿ ಹುಲಿ ಮತ್ತು ಇತರ ಮಾಂಸಾಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭವಾಗಿದೆ.
ಭಾಲ್ಕಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ ಹುಲಿ ಅಂದಾಜು ಗಣತಿ ನಡೆಯುತ್ತಿದ್ದು, 2026ರಲ್ಲಿ ನಡೆಯುತ್ತಿರುವುದು ದೇಶದ ಆರನೇ ಹಂತದ ಪ್ರಾಯೋಗಿಕ ಗಣತಿ ಎಂದು ತಿಳಿಸಿದರು. ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಗಣತಿ ನಡೆದಿತ್ತು. 2022ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವು ಮಧ್ಯಪ್ರದೇಶದ ನಂತರ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ ಎಂದರು.
ಸಿಬ್ಬಂದಿಗೆ ವಿಶೇಷ ತರಬೇತಿ
ರಾಜ್ಯದ 38 ಅರಣ್ಯ ವಿಭಾಗಗಳ ಗಸ್ತುಗಳಲ್ಲಿ ಈ ಗಣತಿ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಎಲ್ಲಾ 13 ಅರಣ್ಯ ವೃತ್ತಗಳ ಮುಂಚೂಣಿ ಸಿಬ್ಬಂದಿಗೆ ಹಾಗೂ ಐದು ಹುಲಿ ಸಂರಕ್ಷಿತ ಪ್ರದೇಶಗಳ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.
ಸೋಮವಾರದಿಂದ ಮುಂದಿನ ಮೂರು ದಿನಗಳವರೆಗೆ ಪ್ರತಿ ಗಸ್ತು ಪ್ರದೇಶದಲ್ಲಿ ಮೂವರು ಸದಸ್ಯರ ತಂಡ 5 ಕಿಲೋಮೀಟರ್‌ಗಳಷ್ಟು ಕಾಡು ಪ್ರದೇಶದಲ್ಲಿ ಸಂಚರಿಸಿ ಹುಲಿ, ಚಿರತೆ, ಕಾಡಾನೆ ಮತ್ತು ಇತರ ಮಾಂಸಹಾರಿ ಪ್ರಾಣಿಗಳ ಕಾಲುಗುರುತು, ಮಲದ ಗುರುತು, ಪ್ರತ್ಯಕ್ಷ ದರ್ಶನಗಳಂತಹ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ.
ಜನವರಿ 15ರಿಂದ 17ರವರೆಗೆ ನಡೆಯುವ ಎರಡನೇ ಹಂತದಲ್ಲಿ ರಾಜ್ಯದ 14 ಅರಣ್ಯ ವಿಭಾಗಗಳಲ್ಲಿ ಸಸ್ಯಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಮೊದಲಾದವುಗಳ ಸಂಖ್ಯೆ ಅಂದಾಜು ಮಾಡಲಾಗುತ್ತದೆ. ಈ ದತ್ತಾಂಶದಿಂದ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಯಾವೆಲ್ಲಿ ಅಳವಡಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.
ಹುಲಿ ಯೋಜನೆಗೆ ಹೊಸ ಉಸ್ತುವಾರಿ
ಹುಲಿ ಯೋಜನೆಯ ರಾಜ್ಯ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ಈ ಬಾರಿ ನ್ಯಾಷನಲ್ ಟೈಗರ್ ಕಾನ್ಸರ್ವೇಷನ್ ಅಥಾರಿಟಿಯ ರಾಜ್ಯದ ನೋಡ್‌ಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರು ಸಂಪೂರ್ಣ ಗಣತಿ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ. ಗಣತಿಯ ನಂತರ ಪ್ರತಿ ಅರಣ್ಯ ಪ್ರದೇಶದ ಧಾರಣ ಸಾಮರ್ಥ್ಯ ಅಂದರೆ ಒಂದು ಕಾಡು ಪ್ರದೇಶವು ಎಷ್ಟು ಹುಲಿ ಹಾಗೂ ಸಸ್ಯಹಾರಿ ಪ್ರಾಣಿಗಳನ್ನು ಹೊಂದಿಕೊಳ್ಳಬಲ್ಲದು ಎಂಬ ಅಂದಾಜು ಮಾಹಿತಿ ಪ್ರಕಟಿಸಲಾಗುತ್ತದೆ.
ಕ್ಯಾಮೆರಾ ಟ್ರ್ಯಾಪ್ ಅಳವಡಿಕೆ
ಮೂರನೇ ಹಂತದಲ್ಲಿ ಮೊದಲಿಬ್ಬ ಹಂತಗಳಲ್ಲಿ ಸಂಗ್ರಹಿಸಲಾದ ಮಾಹಿತಿಯ ಆಧಾರದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ. ಈಗಾಗಲೇ ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2,230 ಕ್ಯಾಮೆರಾ ಟ್ರ್ಯಾಪ್‌ಗಳು ಅಳವಡಿಸಲ್ಪಟ್ಟಿವೆ.
ನಾಗರಹೊಳೆಯಲ್ಲಿ 600 ಕ್ಯಾಮೆರಾಗಳು, ಬಂಡೀಪುರದಲ್ಲಿ 550 ಕ್ಯಾಮೆರಾಗಳು, ಕಾಳಿ ಪ್ರದೇಶದಲ್ಲಿ 450 ಕ್ಯಾಮೆರಾಗಳು, ಭದ್ರಾ ಪ್ರದೇಶದಲ್ಲಿ 330 ಕ್ಯಾಮೆರಾಗಳು, ಬಿಆರ್‌ಟಿಯಲ್ಲಿ 300 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಹುಲಿ ಮೀಸಲು ಪ್ರದೇಶಗಳ ಹೊರಗಿನ ಕಾಡುಗಳಲ್ಲಿ ಸಹ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ನೆರೆಹೊರೆಯ ಹುಲಿ ಸಂರಕ್ಷಿತ ಪ್ರದೇಶಗಳಿಂದ ಅಗತ್ಯ ಕ್ಯಾಮೆರಾಗಳು ಪೂರೈಸಲಾಗುತ್ತದೆ ಸಚಿವ ಖಂಡ್ರೆ ಹೇಳಿದ್ದಾರೆ,
ಇತ್ತೀಚಿನ ತಿಂಗಳಗಳಲ್ಲಿ ಹುಲಿಗಳು ಕಾಡಿನಿಂದ ಹೊರಬಂದು ಗ್ರಾಮ ಪ್ರದೇಶಗಳಿಗೆ ತಿರುಗಾಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದು ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ ಎನ್ನುವ ಸೂಚನೆ ನೀಡುತ್ತದೆ. ಈ ಬಾರಿ ನಡೆಯುತ್ತಿರುವ ಗಣತಿಯಿಂದ ನಿಖರವಾದ ಅಂಕಿಅಂಶ ಸ್ಪಷ್ಟವಾಗಲಿದೆ ಎಂದು ಅವರು ವ್ಯಕ್ತಪಡಿಸಿದರು.

