
ಎಐ ಆಧಾರಿತ ಚಿತ್ರ
ಬಂಡೀಪುರದಲ್ಲಿ ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ: ಮುನ್ನೆಚ್ಚರಿಕೆಗೆ ಸೂಚನೆ
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಚಿವರು, "ಸಣ್ಣ ಹೈದ ಅವರ ನಿಧನ ಅತೀವ ನೋವು ತಂದಿದೆ. ಈ ಕಷ್ಟದ ಸಮಯದಲ್ಲಿ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರವು ಅವರ ಕುಟುಂಬದೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಮರಳಳ್ಳ ಶಿಬಿರದ ಬಳಿ ನಡೆದ ಈ ಭೀಕರ ಘಟನೆಯಲ್ಲಿ ಎಪಿಸಿ ವಾಚರ್ ಸಣ್ಣಹೈದ (56) ಅವರು ಮೃತಪಟ್ಟಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಚಿವರು, "ಸಣ್ಣ ಹೈದ ಅವರ ನಿಧನ ಅತೀವ ನೋವು ತಂದಿದೆ. ಈ ಕಷ್ಟದ ಸಮಯದಲ್ಲಿ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರವು ಅವರ ಕುಟುಂಬದೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಸ್ಥರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಪರಿಹಾರ ಧನ ಘೋಷಣೆ
ಪ್ರತಿಯೊಂದು ಜೀವವೂ ಅಮೂಲ್ಯವಾದುದು ಎಂದು ಹೇಳಿದ ಸಚಿವರು, "ಪರಿಹಾರ ನೀಡುವುದರಿಂದ ಹೋದ ಜೀವ ಮರಳಿ ಬರುವುದಿಲ್ಲ ಎಂಬ ಅರಿವು ನಮಗಿದೆ. ಆದರೂ, ಮೃತರ ಕುಟುಂಬಕ್ಕೆ ಆಸರೆಯಾಗಲು ಮತ್ತು ಅವರ ಮುಂದಿನ ಬದುಕಿಗೆ ನೆರವಾಗಲು ನಿಯಮಾನುಸಾರ ಗರಿಷ್ಠ ಪರಿಹಾರ ಧನವನ್ನು ಶೀಘ್ರವಾಗಿ ವಿತರಿಸಲಾಗುವುದು" ಎಂದು ಭರವಸೆ ನೀಡಿದರು.
ಬಂಡೀಪುರದಂತಹ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸ ಎಂದ ಸಚಿವರು, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತುರ್ತು ಸೂಚನೆಯೊಂದನ್ನು ನೀಡಿದ್ದಾರೆ. "ಅರಣ್ಯದೊಳಗೆ ಗಸ್ತು ನಡೆಸುವಾಗ ಅಥವಾ ದೈನಂದಿನ ಕರ್ತವ್ಯದ ಸಮಯದಲ್ಲಿ ಪ್ರಾಣಿಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಒಂಟಿಯಾಗಿ ತಿರುಗಾಡುವುದನ್ನು ತಪ್ಪಿಸಿ ಅತೀವ ಎಚ್ಚರಿಕೆ ವಹಿಸಬೇಕು" ಎಂದು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಈ ಘಟನೆಯು ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದು, ಇಲಾಖೆಯು ಈ ನಿಟ್ಟಿನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.

