ನವೋದ್ಯಮಗಳ ಓಟದಲ್ಲಿ ಸಿಲಿಕಾನ್ ಸಿಟಿ ರಾಜ್ಯಕ್ಕೆ 2ನೇ ಸ್ಥಾನ: 21,000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳ ತವರೂರು
x

ನವೋದ್ಯಮಗಳ ಓಟದಲ್ಲಿ 'ಸಿಲಿಕಾನ್ ಸಿಟಿ' ರಾಜ್ಯಕ್ಕೆ 2ನೇ ಸ್ಥಾನ: 21,000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳ ತವರೂರು

ಒಟ್ಟು 21,163 ಅಧಿಕೃತ ಸ್ಟಾರ್ಟಪ್‌ಗಳನ್ನು ಹೊಂದುವ ಮೂಲಕ ರಾಜ್ಯವು ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಮಹಾರಾಷ್ಟ್ರವು 35,992 ಸ್ಟಾರ್ಟಪ್‌ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.


Click the Play button to hear this message in audio format

ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ವಿಚಾರಕ್ಕೆ ಬಂದರೆ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ, ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ಬಿಡುಗಡೆ ಮಾಡಿರುವ 2025ರ ಡಿಸೆಂಬರ್ ತಿಂಗಳ ಅಧಿಕೃತ ದತ್ತಾಂಶವು, ಭಾರತದ ನವೋದ್ಯಮ (Startup) ಕ್ಷೇತ್ರದಲ್ಲಿ ಕರ್ನಾಟಕದ ಹಿರಿಮೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.


ದೇಶದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟಪ್‌ಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಒಟ್ಟು 21,163 ಅಧಿಕೃತ ಸ್ಟಾರ್ಟಪ್‌ಗಳನ್ನು ಹೊಂದುವ ಮೂಲಕ ರಾಜ್ಯವು ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಮಹಾರಾಷ್ಟ್ರವು 35,992 ಸ್ಟಾರ್ಟಪ್‌ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕವೇ 'ಬಾಸ್' ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಬೆಂಗಳೂರು: ನವೋದ್ಯಮಗಳ ಹೃದಯ

ಕರ್ನಾಟಕದ ಈ ಸಾಧನೆಯ ಹಿಂದೆ ರಾಜಧಾನಿ ಬೆಂಗಳೂರಿನ ಸಿಂಹಪಾಲಿದೆ . ರಾಜ್ಯದ ಒಟ್ಟು ಸ್ಟಾರ್ಟಪ್‌ಗಳ ಪೈಕಿ ಶೇ. 70ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ತಂತ್ರಜ್ಞಾನದ ಕೇಂದ್ರಬಿಂದುವಾಗಿರುವ (Global Tech Hub) ಬೆಂಗಳೂರು, ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲದೆ ಗುಣಮಟ್ಟದ ಹೂಡಿಕೆಯನ್ನು ಆಕರ್ಷಿಸುವಲ್ಲಿಯೂ ದೇಶದಲ್ಲೇ ಎತ್ತಿದ ಕೈ.

ಕಳೆದ ಕೆಲವು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಬೆಂಗಳೂರು ವಾರ್ಷಿಕವಾಗಿ ಸರಾಸರಿ 10 ಬಿಲಿಯನ್ ಡಾಲರ್‌ಗೂ (ಸುಮಾರು 83,000 ಕೋಟಿ ರೂಪಾಯಿ) ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸುತ್ತಿದೆ.

ಒಂದು ದಶಕದ ಅದ್ಭುತ ಪಯಣ

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಸ್ಟಾರ್ಟಪ್ ಇಂಡಿಯಾ' ಯೋಜನೆಗೆ ಚಾಲನೆ ನೀಡಿದಾಗ ದೇಶದಲ್ಲಿದ್ದದ್ದು ಕೇವಲ 500ರಷ್ಟು ಸ್ಟಾರ್ಟಪ್‌ಗಳು ಮಾತ್ರ. ಆದರೆ, ಕಳೆದ ಒಂದು ದಶಕದಲ್ಲಿ ಭಾರತದ ಯುವ ಉದ್ಯಮಿಗಳು ಬರೆದದ್ದು ಯಶಸ್ಸಿನ ಹೊಸದೊಂದು ಇತಿಹಾಸ. 2025ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿನ ಒಟ್ಟು ಸ್ಟಾರ್ಟಪ್‌ಗಳ ಸಂಖ್ಯೆ 2,07,135ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕರ್ನಾಟಕದ ಪಾಲು ಅಂದಾಜು ಶೇ. 10ಕ್ಕೂ ಹೆಚ್ಚಿರುವುದು ಹೆಮ್ಮೆಯ ಸಂಗತಿ.

ಉದ್ಯೋಗ ಸೃಷ್ಟಿಯ ಯಂತ್ರ

ಸ್ಟಾರ್ಟಪ್‌ಗಳು ಕೇವಲ ಕಂಪನಿಗಳಲ್ಲ, ಅವು ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡುವ ಉದ್ಯೋಗದಾತರು. ಈ ವಲಯವು ದೇಶದಲ್ಲಿ ಬರೋಬ್ಬರಿ 12.4 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಪೂರಕ ಸೇವೆಗಳ ಮೂಲಕ ಸುಮಾರು 45.3 ಲಕ್ಷ ಪರೋಕ್ಷ ಉದ್ಯೋಗಗಳಿಗೂ ಕಾರಣವಾಗಿದೆ. ಕರ್ನಾಟಕದಲ್ಲಿಯೂ ಲಕ್ಷಾಂತರ ಯುವಕರಿಗೆ ಐಟಿ, ಬಯೋಟೆಕ್, ಮತ್ತು ಇ-ಕಾಮರ್ಸ್ ವಲಯದ ಸ್ಟಾರ್ಟಪ್‌ಗಳು ಉದ್ಯೋಗ ನೀಡಿವೆ.

ಕರ್ನಾಟಕದ ಮುಂದಿನ ಗುರಿ ಏನು?

ತಂತ್ರಜ್ಞಾನ ಮಾತ್ರವಲ್ಲದೆ, ಕೃಷಿ, ಶಿಕ್ಷಣ (EdTech), ಮತ್ತು ಆರೋಗ್ಯ (HealthTech) ಕ್ಷೇತ್ರಗಳಲ್ಲಿಯೂ ಕರ್ನಾಟಕದ ಸ್ಟಾರ್ಟಪ್‌ಗಳು ಹೊಸ ಅಲೆ ಎಬ್ಬಿಸುತ್ತಿವೆ. ಸರ್ಕಾರದ 'ಬಿಯಾಂಡ್ ಬೆಂಗಳೂರು' (Beyond Bengaluru) ನೀತಿಯಡಿ ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಂತಹ 2ನೇ ಹಂತದ ನಗರಗಳಲ್ಲೂ ಸ್ಟಾರ್ಟಪ್ ಸಂಸ್ಕೃತಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರೂ ಅಚ್ಚರಿಯಿಲ್ಲ.

Read More
Next Story