
ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮ ನಡೆಯಲಿದೆ.
ಕ್ವಾಂಟಮ್ ಕ್ಷೇತ್ರದ ಪ್ರಮುಖ ಹಬ್ ಆಗಿ ಕರ್ನಾಟಕ: "ಕ್ವಾಂಟಮ್ ಆ್ಯಕ್ಷನ್ ಪ್ಲಾನ್" ಸಿದ್ಧತೆ
ಜುಲೈ 31 ಮತ್ತು ಆಗಸ್ಟ್ 1 ರಂದು ನಡೆಯಲಿರುವ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಕರ್ನಾಟಕವನ್ನು ವಿಶ್ವದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಹಬ್ ಆಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ "ಕರ್ನಾಟಕ ಕ್ವಾಂಟಮ್ ಆ್ಯಕ್ಷನ್ ಪ್ಲಾನ್" ಸಿದ್ಧಪಡಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಘೋಷಿಸಿದರು.
ಮಂಗಳವಾರ ನೆಹರು ತಾರಾಲಯದಲ್ಲಿ ಆಯೋಜಿಸಲಾಗಿದ್ದ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದ ಮುನ್ನೋಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ರೂಪಿಸಲು ಬದ್ಧವಾಗಿದೆ ಎಂದು ಹೇಳಿದರು.
ಐಟಿ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ರಾಜ್ಯವು, ಇದೇ ರೀತಿ ಕ್ವಾಂಟಮ್ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕ್ವಾಂಟಮ್ ತಂತ್ರಜ್ಞಾನವು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರು ಭಾರತದ ನಾವಿನ್ಯತೆಯ ರಾಜಧಾನಿಯಾಗಿರುವುದಲ್ಲದೆ, ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕ ಸೌಕರ್ಯಗಳನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು.
ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ 2025
ಜುಲೈ 31 ಮತ್ತು ಆಗಸ್ಟ್ 1 ರಂದು ನಡೆಯಲಿರುವ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಮೊದಲ ದಿನ ಪ್ರೊ. ಡಂಕನ್ ಹಲ್ದಾನೆ ಅವರು ಪ್ರಧಾನ ಭಾಷಣ ನೀಡಲಿದ್ದಾರೆ. ನಂತರ, ಎರಡು ದಿನಗಳ ಈ ಸಮಾವೇಶದಲ್ಲಿ ಕ್ವಾಂಟಮ್ ಇನ್ ಕಂಪ್ಯೂಟಿಂಗ್, ಫೈನಾನ್ಸ್ ಮತ್ತು ಎಐ, ಕ್ವಾಂಟಮ್ ಇನ್ ಹೆಲ್ತ್ ಕೇರ್, ಕ್ವಾಂಟಮ್ ಇನ್ ಪೆರಿಫೆರಲ್ಸ್ ಆ್ಯಂಡ್ ಹಾರ್ಡ್‌ವೇರ್, ಕ್ವಾಂಟಮ್ ಇನ್ ಸೊಸೈಟಿ ಆ್ಯಂಡ್ ಆರ್ಟ್, ಕ್ವಾಂಟಮ್ ಇನ್ ಸೆಕ್ಯುರಿಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿಯ ವಿನಿಮಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಕ್ವಾಂಟಮ್ ಆಕ್ಷನ್ ಪ್ಲಾನ್‌ನ ಪ್ರಮುಖ ಅಂಶಗಳು
ಕರ್ನಾಟಕವು ಇತರ ರಾಜ್ಯಗಳಿಗಿಂತ ಕ್ವಾಂಟಮ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಪರಿಣಿತಿ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ರಾಜ್ಯವನ್ನು ಏಷ್ಯಾದ ಕ್ವಾಂಟಮ್ ಹಬ್ ಆಗಿ ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು "ಕರ್ನಾಟಕ ಕ್ವಾಂಟಮ್ ಆಕ್ಷನ್ ಪ್ಲಾನ್" ಸಹಕಾರಿಯಾಗಲಿದೆ. ಈ ಆಕ್ಷನ್ ಪ್ಲಾನ್ ರೂಪಿಸಲು ಕ್ವಾಂಟಮ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳ ಟಾಸ್ಕ್ ಫೋರ್ಸನ್ನು ರಚಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಏಕರೂಪ ಕೌರ್, ಕೆಸ್ಟೆಪ್ಸ್ ನಿರ್ದೇಶಕರಾದ ಸದಾಶಿವ ಪ್ರಭು, ಸಮ್ಮೇಳನದ ಸಂಚಾಲಕರಾದ ಪ್ರೊ. ಅರಿಂದಮ್ ಘೋಷ್, ಸಹಸಂಚಾಲಕರಾದ ಪ್ರೊ. ಅಕ್ಷಯ್ ನಾಯ್ಕ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.