
ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಆರೋಗ್ಯದ ಬಗ್ಗೆ ವದಂತಿ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ʼಮುಖ್ಯಮಂತ್ರಿ ಸಾವು ಬಯಸುವ ಪೋಸ್ಟ್ ಮಾಡಿ ವಿಕೃತಿ ಮೆರೆದಿರುವ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯಮಿತ ತಪಾಸಣೆಗಾಗಿ ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್ ಹಾಕಿರುವ ಕುರಿತು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸರಿಗೆ ದೂರು ನೀಡಿದೆ.
ದೂರಿನಲ್ಲೇನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಸೋಮವಾರ ಖಾಸಗಿ ವಾಹಿನಿಯೊಂದು "ದಿಢೀರ್ ಆಸ್ಪತ್ರೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯ" ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿಗೆ ಫೇಸ್‌ಬುಕ್‌ನಲ್ಲಿ ಕಿಡಿಗೇಡಿಯೊಬ್ಬ ʼಮುಖ್ಯಮಂತ್ರಿ ಸಾವು ಬಯಸುವ ಹೇಳಿಕೆ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿಯಿಂದ ಅಪಪ್ರಚಾರದಿಂದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ನೋವು ಉಂಟಾಗಿದೆ. ಶಾಂತಿ ಕದಡುವ ಇಂತಹ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು
ಮುಖ್ಯಮಂತ್ರಿ ಸಾವು ಬಯಸಿ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರು ಟೀಕಿಸುವ ಭರದಲ್ಲಿ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಬೆಂಗಳೂರು ಪಶ್ಚಿಮ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಹರವೇಗೌಡ ಹಾಗೂ ಸಂಜಯ್ ಸಶಿಮಠ ಒತ್ತಾಯಿಸಿದ್ದಾರೆ.