ಹೊಸ ವರ್ಷಕ್ಕೆ ಕರುನಾಡಿನಲ್ಲಿ ಅದ್ಧೂರಿ ಸ್ವಾಗತ! ಮುಗಿಲು ಮುಟ್ಟಿದ ಸಂಭ್ರಮಾಚರಣೆ
x

ಹೊಸ ವರ್ಷಕ್ಕೆ ಕರುನಾಡಿನಲ್ಲಿ ಅದ್ಧೂರಿ ಸ್ವಾಗತ! ಮುಗಿಲು ಮುಟ್ಟಿದ ಸಂಭ್ರಮಾಚರಣೆ

2026ರ ಹೊಸ ವರ್ಷವನ್ನು ಕರುನಾಡು ಭರ್ಜರಿಯಾಗಿ ಸ್ವಾಗತಿಸಿದೆ. ಮೈಸೂರಿನ ಅರಮನೆ ನಗರಿಯಿಂದ ಬೆಳಗಾವಿಯ ಕುಂದಾ ನಗರಿಯವರೆಗೆ ನಡೆದ ಸಂಭ್ರಮಾಚರಣೆ, ಡಿಜೆ ಪಾರ್ಟಿ ಮತ್ತು ವಿಶೇಷ ಕಾರ್ಯಕ್ರಮಗಳ ಪೂರ್ಣ ವಿವರ ಇಲ್ಲಿದೆ.


ರಾಜ್ಯದ ಜನತೆ 2025ನೇ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷ 2026ನ್ನು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಬರಮಾಡಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಹಿಡಿದು ಕುಂದಾ ನಗರಿ ಬೆಳಗಾವಿಯವರೆಗೆ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು. ರಂಗುರಂಗಿನ ದೀಪಾಲಂಕಾರ ಹಾಗೂ ನೃತ್ಯಗಳ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅದರಲ್ಲೂ ಯುವ ಜನತೆ ಸಂ‍ಭ್ರಮಾಚರಣೆಯಲ್ಲಿ ಮಿಂದೆದ್ದಿದ್ದಾರೆ.

ಜಿಲ್ಲಾವಾರು ಸಂಭ್ರಮಾಚರಣೆಯ ಮುಖ್ಯಾಂಶಗಳು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕತ್ತಲಾಗುತ್ತಿದ್ದಂತೆಯೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಂಗು ರಂಗಿನ ಲೈಟ್‌ಗಳ ಮಧ್ಯೆ ಜನರು ಕೇಕ್ ಕತ್ತರಿಸಿ, ಡಿಜೆ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಂಡರು.

ದಾವಣಗೆರೆ: ನಗರದ ಹೊರವಲಯದ 'ಕಹಾನಿ' ಹೋಟೆಲ್‌ನಲ್ಲಿ ನಡೆದ ನ್ಯೂ ಇಯರ್ ಪಾರ್ಟಿ ವಿಶೇಷವಾಗಿತ್ತು. ಯುವ ಸಮೂಹ ಪಾರ್ಟಿ ಮೂಡ್‌ನಲ್ಲಿ ಮುಳುಗಿ ಭರ್ಜರಿ ಸ್ಟೆಪ್ಸ್ ಹಾಕುತ್ತಾ 2026ಕ್ಕೆ ವೆಲ್‌ಕಮ್ ಹೇಳಿದರು.

ಹಾಸನ: ಹಾಸನದ ಖಾಸಗಿ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಷ್ಯಾದ ಕಲಾವಿದೆಯ ಬೆಲ್ಲಿ ಡ್ಯಾನ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಬೆಡಗಿಯ ನೃತ್ಯಕ್ಕೆ ಸ್ಥಳೀಯ ಯುವಕರು ಕೂಡ ಸಾಥ್ ನೀಡಿ ಸಂಭ್ರಮಿಸಿದರು.

ಉಡುಪಿ: ಕಡಲತಡಿಯ ಉಡುಪಿ ಮತ್ತು ಶೈಕ್ಷಣಿಕ ಹಬ್ ಮಣಿಪಾಲದ ಪಬ್ ಹಾಗೂ ಕ್ಲಬ್‌ಗಳಲ್ಲಿ ಯುವಕರ ಸದ್ದು ಜೋರಾಗಿತ್ತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮಿಸಿದರು.

ಹುಬ್ಬಳ್ಳಿ: ಹುಬ್ಬಳ್ಳಿಯ ವಿವಿಧೆಡೆ ಯುವಕರು ಡಿಜೆ ತಾಳಕ್ಕೆ ಹುಚ್ಚೆದ್ದು ಕುಣಿಯುವ ಮೂಲಕ ತಮ್ಮ ಜೋಶ್ ಪ್ರದರ್ಶಿಸಿದರು. ವಾಣಿಜ್ಯ ನಗರಿಯ ರಸ್ತೆಗಳಲ್ಲಿ ಸಂಭ್ರಮ ಮನೆಮಾಡಿತ್ತು.

ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ಸಂಭ್ರಮ ಸ್ವಲ್ಪ ಭಿನ್ನವಾಗಿತ್ತು. ಕ್ಯಾಂಪ್ ಪ್ರದೇಶದಲ್ಲಿ ಹಳೆಯ ವರ್ಷದ ಸಂಕೇತವಾಗಿ 'ಓಲ್ಡ್ ಮ್ಯಾನ್' ಪ್ರತಿಕೃತಿಯನ್ನು ದಹಿಸುವ ಮೂಲಕ, ಹಳೆಯ ಕಹಿ ನೆನಪುಗಳನ್ನು ಸುಟ್ಟು ಹೊಸ ಆಶಯಗಳೊಂದಿಗೆ ವರ್ಷವನ್ನು ಸ್ವಾಗತಿಸಲಾಯಿತು.

ಒಟ್ಟಾರೆಯಾಗಿ, ಕರುನಾಡಿನ ಜನರು ಹಳೆಯ ವರ್ಷದ ನೆನಪುಗಳಿಗೆ ಗುಡ್ ಬೈ ಹೇಳಿ, ಹೊಸ ವರ್ಷದ ಹೊಸ ಹಾದಿಗೆ ಹರುಷದಿಂದ ಹೆಜ್ಜೆ ಇಟ್ಟಿದ್ದಾರೆ.

Read More
Next Story