
ಸಾಂದರ್ಭಿಕ ಚಿತ್ರ
ಪರೀಕ್ಷೆ ಮುಗಿದ ಎಂಟೇ ದಿನಕ್ಕೆ ಕೆಪಿಸಿಎಲ್ ತಾತ್ಕಾಲಿಕ ಫಲಿತಾಂಶ ಪ್ರಕಟ
ಕೆಪಿಟಿಸಿಎಲ್ ಸೇರಿದಂತೆ ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧದ ಕನ್ನಡ ಕಡ್ಡಾಯ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳು ಹಾಗೂ ಫಲಿತಾಂಶ ವಿಳಂಬ ಹೆಚ್ಚಾಗುತ್ತಿದೆ ಎಂದು ವಿದ್ಯಾರ್ಥಿಗಳ ಸಂಘಟನೆ ಹಾಗೂ ಸ್ಪರ್ಧಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿರುವ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಪ್ರೈಸ್ ಕೊಟ್ಟಿದೆ. ಕರ್ನಾಟಕ ವಿದ್ಯುತ್ ನಿಗಮದಲ್ಲಿನ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಿದ ಎಂಟು ದಿನಗಳಲ್ಲೇ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿ ಕೆಇಎ ತನ್ನ ದಕ್ಷತೆ ಮೆರೆದಿದೆ.
ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ಕೆಇಎ, ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಸೋಮವಾರ(ಜ.5) ಪ್ರಕಟಿಸಲಾಗಿದೆ. ಪರೀಕ್ಷೆ ನಡೆದು ಕೇವಲ ಎಂಟು ದಿನಗಳಲ್ಲೇ ಫಲಿತಾಂಶವನ್ನೂ ಪ್ರಕಟಿಸಿದ್ದು, ಆಕ್ಷೇಪಣೆಗಳು ಇದ್ದಲ್ಲಿ ಜನವರಿ 7ರೊಳಗೆ ಸಲ್ಲಿಸಬಹುದು. ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧದ ಕನ್ನಡ ಕಡ್ಡಾಯ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಏನಿದು ಪ್ರಕರಣ ?
ಕರ್ನಾಟಕ ವಿದ್ಯುತ್ ನಿಗಮವು ಸಿವಿಲ್, ಮೆಕಾನಿಕಲ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿನ ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್‌ನ ಹುದ್ದೆಗಳಿಗೆ 2017 ಆಗಸ್ಟ್ 3 ರಂದು ಅಧಿಸೂಚನೆ ಹೊರಡಿಸಿತ್ತು. 2018 ಜನವರಿಯಲ್ಲಿ ತಾಂತ್ರಿಕ ಹಾಗೂ ಕನ್ನಡ ಭಾಷಾ ಪರೀಕ್ಷೆ ನಡೆಸಿತ್ತು.
ಪರೀಕ್ಷಾ ಅಕ್ರಮಗಳ ಕುರಿತು ನ್ಯಾಯಾಲಯದ ಮೆಟ್ಟಿಲೇರಿದಾಗ ಕೆಪಿಸಿಎಲ್ ನಡೆಸಿದ ಪರೀಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿ ಹೊಸದಾಗಿ ನೇಮಕಾತಿ ನಡೆಸುವ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಗಲಿಗೆ ಹಾಕಿತ್ತು. ಅದರಂತೆ 2024 ರ ಫೆಬ್ರವರಿಯಲ್ಲಿ ಕೆಇಎ ಕೆಪಿಸಿಎಲ್‌ನ ಜೆಇ ಹಾಗೂ ಎಇ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕೆಇಎ ಕನ್ನಡ ಪರೀಕ್ಷೆಗೆ 150 ಅಂಕಗಳನ್ನು ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿತ್ತು.
ಅಭ್ಯರ್ಥಿಗಳಿಂದ ಮತ್ತೆ ಕೋರ್ಟ್ ಮೊರೆ
ಕೆಪಿಸಿಎಲ್ ನೇಮಕಾತಿ ಅಧಿಸೂಚನೆ ಉಲ್ಲೇಖಿಸದಿದ್ದರೂ ಮರು ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಈಗ ಸಹಾಯಕ ಎಂಜಿನಿಯರ್ (ಎ.ಇ) ಮತ್ತು ಕಿರಿಯ ಎಂಜಿನಿಯರ್ (ಜೆ.ಇ) ನೇಮಕಾತಿಗೆ ಹೊರಡಿಸಿದ್ದ ತಾತ್ಕಾಲಿಕ ಪಟ್ಟಿಯನ್ನು ರದ್ದು ಮಾಡಿ, ಹೊಸದಾಗಿ ಮರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.

