ವರ್ಷದ ಮೊದಲ ಜಂಟಿ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಜ. 22ಕ್ಕೆ ರಾಜ್ಯಪಾಲರ ಭಾಷಣ!
x
ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌

ವರ್ಷದ ಮೊದಲ ಜಂಟಿ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಜ. 22ಕ್ಕೆ ರಾಜ್ಯಪಾಲರ ಭಾಷಣ!

ಕರ್ನಾಟಕ ವಿಧಾನಮಂಡಲದ 2026ರ ಮೊದಲ ಜಂಟಿ ಅಧಿವೇಶನ ಜನವರಿ 22ರಿಂದ 31ರವರೆಗೆ ನಡೆಯಲಿದೆ. ರಾಜ್ಯಪಾಲರ ಭಾಷಣದೊಂದಿಗೆ ಈ ಅಧಿವೇಶನ ಆರಂಭವಾಗಲಿದೆ.


ಕರ್ನಾಟಕ ವಿಧಾನಮಂಡಲದ 2026ರ ಸಾಲಿನ ಮೊದಲ ಜಂಟಿ ಅಧಿವೇಶನಕ್ಕೆ ಈಗ ಅಧಿಕೃತವಾಗಿ ದಿನಾಂಕ ನಿಗದಿಯಾಗಿದ್ದು, ಜನವರಿ 22ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣದೊಂದಿಗೆ ಕಲಾಪಗಳು ಆರಂಭವಾಗಲಿವೆ. ಈ ಕುರಿತು ರಾಜ್ಯ ಸರ್ಕಾರದ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಇತ್ತೀಚೆಗೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದರು.

ಸರ್ಕಾರದ ಈ ಆಹ್ವಾನವನ್ನು ಮುಗುಳ್ನಗೆಯಿಂದ ಸ್ವೀಕರಿಸಿದ ರಾಜ್ಯಪಾಲರು, ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲು ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ.

ಅಧಿವೇಶನದ ಆರಂಭ ಯಾವಾಗ?

ಅಧಿವೇಶನವು ಜನವರಿ 22 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣದೊಂದಿಗೆ ಅದ್ಧೂರಿಯಾಗಿ ಆರಂಭವಾಗಲಿದೆ. ಈ ಜಂಟಿ ಅಧಿವೇಶನವು ಜನವರಿ 22 ರಿಂದ ಜನವರಿ 31 ರವರೆಗೆ ನಡೆಯಲಿದೆ. ಸಂವಿಧಾನದ ವಿಧಿ 176ರ ಅನ್ವಯ, ಪ್ರತಿ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವುದು ಕಡ್ಡಾಯವಾಗಿದೆ. ಈ ಭಾಷಣದಲ್ಲಿ ಸರ್ಕಾರವು ತನ್ನ ಕಳೆದ ವರ್ಷದ ಸಾಧನೆಗಳು ಮತ್ತು ಮುಂಬರುವ ಯೋಜನೆಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸುತ್ತದೆ.

ಈ ಅಧಿವೇಶನದ ವಿಶೇಷತೆ ಏನು?

ಈ ಬಾರಿಯ ಅಧಿವೇಶನವು ಕೇವಲ ಸಂಪ್ರದಾಯಬದ್ಧ ಭಾಷಣಕ್ಕೆ ಸೀಮಿತವಾಗಿಲ್ಲ. ಕೇಂದ್ರ ಸರ್ಕಾರವು 'ಮನರೇಗಾ' (MGNREGA) ಯೋಜನೆಯನ್ನು ರದ್ದುಗೊಳಿಸಿ ಹೊಸದಾಗಿ ಜಾರಿಗೆ ತಂದಿರುವ 'ವಿಬಿ ಜಿ ರಾಮ್ ಜಿ' (Viksit Bharat - Guarantee for Rozgar and Ajeevika Mission) ಕಾಯ್ದೆಯ ವಿರುದ್ಧ ರಾಜ್ಯ ಸರ್ಕಾರವು ಈ ಅಧಿವೇಶನದಲ್ಲಿ ವಿಶೇಷ ಚರ್ಚೆ ಮತ್ತು ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ.

ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ತೀರ್ಮಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯು ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿಪಡಿಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಉಭಯ ಸದನಗಳ ಕಲಾಪಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ರಾಜ್ಯಪಾಲರಿಗೆ ಅಧಿಕೃತ ಮಾಹಿತಿ ನೀಡಲಾಗಿದ್ದು, ಹತ್ತು ದಿನಗಳ ಕಾಲ ಕಲಾಪ ನಡೆಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸಂಘರ್ಷದ ಕೇಂದ್ರಬಿಂದು: 'ವಿಬಿ ಜಿ ರಾಮ್ ಜಿ' ಕಾಯ್ದೆ

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ತಂದಿರುವ 'ವಿಬಿ ಜಿ ರಾಮ್ ಜಿ' ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಲು ಸರ್ಕಾರ ನಿರ್ಧರಿಸಿದೆ. ಈ ಹೊಸ ವಿಧೇಯಕದಿಂದ ಗ್ರಾಮೀಣ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ಯೋಜನೆಯಲ್ಲಿ ಗುತ್ತಿಗೆದಾರರ ಹಸ್ತಕ್ಷೇಪದ ಕುರಿತು ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ.

Read More
Next Story