6,279 ಕೋಟಿ ರೂ. ಖರ್ಚಿಗೆ ಸರ್ಕಾರ ಪ್ರಸ್ತಾಪ​: ಹೆಲಿಕಾಪ್ಟರ್‌ಗೆ 6 ಕೋಟಿ, ಜೈಲುವಾಸಿಗಳ ಸಂಬಳಕ್ಕೆ 17 ಕೋಟಿ!
x

6,279 ಕೋಟಿ ರೂ. ಖರ್ಚಿಗೆ ಸರ್ಕಾರ ಪ್ರಸ್ತಾಪ​: ಹೆಲಿಕಾಪ್ಟರ್‌ಗೆ 6 ಕೋಟಿ, ಜೈಲುವಾಸಿಗಳ ಸಂಬಳಕ್ಕೆ 17 ಕೋಟಿ!

ಇಲಾಖೆಗಳ ಹೆಚ್ಚುವರಿ ವೆಚ್ಚ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ನೆರೆ ಪರಿಹಾರ, ಹಬ್ಬ ಉತ್ಸವಗಳು, ಸರ್ಕಾರಿ ಯಂತ್ರಾಗಳ ನಿರ್ವಹಣೆ ಸೇರಿದಂತೆ ಅನೇಕ ಶೀರ್ಷಿಕೆಗಳಿಗೆ ಈ ಪೂರಕ ಅಂದಾಜಿನಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.


Click the Play button to hear this message in audio format

ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಸಾಲಿನ ಎರಡನೇ ಕಂತಿನ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದೆ. ಒಟ್ಟು 6,279.87 ಕೋಟಿ ರೂ. ಮೊತ್ತದ ಪೂರಕ ಅನುದಾನದ ಅಂದಾಜುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಸಚಿವ ಹೆಚ್‌.ಕೆ. ಪಾಟೀಲ್ ಮಂಡಿಸಿದ್ದಾರೆ.

ಇಲಾಖೆಗಳ ಹೆಚ್ಚುವರಿ ವೆಚ್ಚ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ನೆರೆ ಪರಿಹಾರ, ಹಬ್ಬ ಉತ್ಸವಗಳು, ಸರ್ಕಾರಿ ಯಂತ್ರಾಗಳ ನಿರ್ವಹಣೆ ಸೇರಿದಂತೆ ಅನೇಕ ಶೀರ್ಷಿಕೆಗಳಿಗೆ ಈ ಪೂರಕ ಅಂದಾಜಿನಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

ಪೂರಕ ಅಂದಾಜಿನಲ್ಲಿ ಮೊದಲಿನಿಂದಲೇ ಗಮನ ಸೆಳೆದ ಅಂಶವೆಂದರೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಹೆಲಿಕಾಪ್ಟರ್‌ ಪ್ರಯಾಣ ವೆಚ್ಚ ಭರಿಸಲು 6.37 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸರ್ಕಾರದ ಉನ್ನತ ಮಟ್ಟದ ಆಡಳಿತ ಚಟುವಟಿಕೆಗಳು, ಜಿಲ್ಲಾಸ್ತರದ ಸಭೆಗಳು, ಪರಿಶೀಲನಾ ಭೇಟಿಗಳ ವೆಚ್ಚಗಳನ್ನು ಭರಿಸಲು ಈ ಅನುದಾನ ಕೋರಲಾಗಿದೆ.

ಅದೊಂದಿಗೇ, ಭ್ರಷ್ಟಾಚಾರ ವಿರೋಧಿ ನಿಗಾದ ಸಂಸ್ಥೆಯಾಗಿರುವ ಲೋಕಾಯುಕ್ತಕ್ಕೆ ಮೂಲಸೌಕರ್ಯ ಬಲಪಡಿಸಲು ಹೆಚ್ಚುವರಿ ಅನುದಾನ ನೀಡಲಾಗಿದೆ. ಲೋಕಾಯುಕ್ತ ಸಂಸ್ಥೆಗೆ 22 ಹೊಸ ವಾಹನಗಳ ಖರೀದಿಗೆ 2.08 ಕೋಟಿ ರೂ., ವಿವಿಧ ಹಿರಿಯ ಅಧಿಕಾರಿಗಳಿಗೆ 35 ಹೊಸ ವಾಹನಗಳ ಖರೀದಿಗೆ 3.41 ಕೋಟಿ ರೂ. ಒದಗಿಸಲು ಪೂರಕ ಅಂದಾಜು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ, ಪರಿಶೀಲನಾ ಕಾರ್ಯ, ಆಧಿಕಾರಿಗಳ ವಾಹನಗಳನ್ನು ನವೀಕರಿಸಲು ಈ ವೆಚ್ಚವನ್ನು ಸರ್ಕಾರ ತಾರ್ಕಿಕವೆಂದು ಸಮರ್ಥಿಸಿದೆ.

ನಕ್ಸಲ್ ಪೀಡಿತ ಪ್ರದೇಶಕ್ಕೂ ದುಡ್ಡು

ರಾಜ್ಯದಲ್ಲಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೂ ಈ ಪೂರಕ ಅಂದಾಜಿನಲ್ಲಿ ಸ್ಪಷ್ಟ ಪ್ರಾಮುಖ್ಯತೆ ದೊರೆತಿದೆ. ನಕ್ಸಲ್ ಚಟುವಟಿಕೆಗಳ ಒತ್ತಡದಲ್ಲಿರುವ ಹಿಂದುಳಿದ ಪ್ರದೇಶಗಳಲ್ಲಿ ಮೂಲಸೌಕರ್ಯ, ಸಂಪರ್ಕ ಸೌಲಭ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶದಿಂದ 9.12 ಕೋಟಿ ರೂ. ಅನುದಾನ ಮಂಜೂರು ಮಾಡುವ ಪ್ರಸ್ತಾವನೆ ಮಂಡಿಸಲಾಗಿದೆ.

ಬಂದೀಖಾನೆಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಬಾಕಿ ಇದ್ದ ಕೂಲಿ ಹಣವನ್ನು ಪಾವತಿಸಲು ಸರ್ಕಾರ ವಿಶೇಷ ಅನುದಾನ ಒದಗಿಸಿದೆ. ವಿವಿಧ ಜೈಲುಗಳಲ್ಲಿ ಕೆಲಸ ಮಾಡುತ್ತಿರುವ ಸಜಾಬಂದಿಗಳಿಗೆ ಪಾವತಿಸಬೇಕಾಗಿದ್ದ ಬಾಕಿ ಕೂಲಿ ಹಣಕ್ಕಾಗಿ 17.50 ಕೋಟಿ ರೂ.ಗಳನ್ನು ಈ ಪೂರಕ ಅಂದಾಜಿನಲ್ಲಿ ಮಂಜೂರು ಮಾಡುವಂತೆ ವಹಿವಾಟು ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ–ಆರ್ಥಿಕ ಸಮೀಕ್ಷೆಗಳನ್ನು ನಡೆಸುವ ವೇಳೆ ವಿಭಿನ್ನ ನಿಗಮಗಳ ನಿಧಿಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಂಡಿದ್ದ ಸರ್ಕಾರ, ಈಗ ಆ ನಿಗಮಗಳಿಗೆ ಹಣವನ್ನು ಮರುಭರ್ತಿಗೆ ಮುಂದಾಗಿದೆ. ಒಟ್ಟಾರೆ 348.36 ಕೋಟಿ ರೂ.ಗಳನ್ನು ವಿವಿಧ ನಿಗಮಗಳಿಗೆ ಪೂರಕ ಅಂದಾಜುಗಳ ಮೂಲಕ ವಾಪಸ್ ನೀಡುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಸರ್ಕಾರ ಕೈಗೊಂಡ ಸಮಗ್ರ ಸಮೀಕ್ಷೆ ಹಾಗೂ ಅಧ್ಯಯನಗಳಿಗಾಗಿ ಮೊದಲು ನಿಗಮಗಳ ಹಣ ಉಪಯೋಗಿಸಲಾಗಿತ್ತು ಎಂಬುದನ್ನು ಪೂರಕ ಅಂದಾಜು ಸ್ಪಷ್ಟಪಡಿಸಿದೆ.

ಚಲನ ಚಿತ್ರೋತ್ಸವಕ್ಕೆ 5 ಕೋಟಿ ರೂ.

ನಾಡಿನ ಸಾಂಸ್ಕೃತಿಕ ಬದುಕು, ಸಾಫ್ಟ್ ಪವರ್ ಮತ್ತು ಅಂತರಾಷ್ಟ್ರೀಯ ಮನ್ನಣೆಗೂ ಈ ಪೂರಕ ಅಂದಾಜಿನಲ್ಲಿ ಪಾಲು ನೀಡಲಾಗಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಗೆ 5 ಕೋಟಿ ರೂ. ಅನುದಾನ ನೀಡಲು ಪ್ರಸ್ತಾವಿಸಲಾಗಿದೆ. ಅದೇ ರೀತಿ, ಮೈಸೂರು ದಸರಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ 23.5 ಕೋಟಿ ರೂ., ತುಮಕೂರು ದಸರಾಗೆ 50 ಲಕ್ಷ ರೂ. ಮಂಜೂರು ಮಾಡುವುದಾಗಿ ಅಂದಾಜು ಪತ್ರಗಳು ಸೂಚಿಸುತ್ತವೆ.

ರಾಜ್ಯದ ಪ್ರಮುಖ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಪ್ರಚಾರಾತ್ಮಕ ಸಮಾವೇಶಗಳನ್ನು ಹಮ್ಮಿಕೊಳ್ಳಲು ಸಹ ಸರ್ಕಾರ ವಿಶೇಷ ಅನುದಾನ ಕೋರಿದೆ. ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶಗಳನ್ನು ಆಯೋಜಿಸಲು ಒಟ್ಟು 18.66 ಕೋಟಿ ರೂ.ಗಳನ್ನು ಮೀಸಲಿಡುವ ಪ್ರಸ್ತಾವನೆ ಪೂರಕ ಅಂದಾಜಿನಲ್ಲಿ ಇದೆ.

ಹವಾಮಾನ ವೈಪರಿತ್ಯ, ಮಳೆ, ನೆರೆ ಹಾನಿಗೆ ಸಂಬಂಧಿಸಿದ ಪರಿಹಾರ ಕ್ರಮಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ದೊಡ್ಡ ಮೊತ್ತದ ಅನುದಾನವನ್ನು ಕೋರಿದೆ. ನೆರೆ ಪರಿಹಾರ ಮತ್ತು ಸಂಬಂಧಿತ ಪರಿಹಾರ ಧನಗಳಿಗಾಗಿ, ಕೇಂದ್ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಪರಿಷ್ಕೃತ ಸಹಾಯಧನವಾಗಿ ಒಟ್ಟು 1,015 ಕೋಟಿ ರೂ.ಗಳನ್ನು ಪೂರಕ ಅಂದಾಜಿನ ಮೂಲಕ ಒದಗಿಸುವಂತೆ ಪ್ರಸ್ತಾಪಿಸಲಾಗಿದೆ. ಹಾನಿಗೊಳಗಾದ ರೈತರು, ಮನೆ, ರಸ್ತೆ, ಸೇತುವೆ ಮುಂತಾದ ಮೂಲಸೌಕರ್ಯಗಳ ಮರುನಿರ್ಮಾಣಕ್ಕೂ ಈ ಅನುದಾನ ಬಳಕೆಯಾಗಲಿದೆ.

ದೇವಸ್ಥಾನಗಳಿಗೆ 7.5 ಕೋಟಿ

ಧಾರ್ಮಿಕ ಕ್ಷೇತ್ರಕ್ಕೂ ಪೂರಕ ಅಂದಾಜಿನಲ್ಲಿ ಸ್ವಲ್ಪ ಮಟ್ಟಿನ ಅನುದಾನ ಒದಗಿಸಲಾಗಿದೆ. ಖಾಸಗಿ ದೇವಸ್ಥಾನಗಳು, ಮಠಗಳಿಗೆ 7.50 ಕೋಟಿ ರೂ.ಗಳಷ್ಟು ಅನುದಾನವನ್ನು ನೀಡಲು ಸರ್ಕಾರ ಮುಂದಾಗಿದೆ. ಸಾಂಪ್ರದಾಯಿಕ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ಮರುಸ್ಥಾಪನೆ, ಸೌಲಭ್ಯ ವೃದ್ಧಿಗಾಗಿ ಈ ಅನುದಾನ ಉಪಯೋಗವಾಗಲಿದೆ ಎಂದು ತಿಳಿಸಲಾಗಿದೆ.

ಕಬ್ಬು ಬೆಳೆಗಾರರಿಗೆ ಈ ಬಾರಿ ವಿಶೇಷ ಬಲ ತುಂಬುವ ಉದ್ದೇಶದಿಂದ ಹೆಚ್ಚುವರಿ ನೆರವನ್ನು ಸರ್ಕಾರ ಘೋಷಿಸಿದೆ. ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ದರಕ್ಕೇರಿಸಿ, ಕಬ್ಬಿಗೆ ಸರ್ಕಾರದಿಂದ ಪ್ರತಿಟನ್‌ಗೆ ಹೆಚ್ಚುವರಿ 50 ರೂ. ಪಾವತಿಸಲು ನಿರ್ಧರಿಸಿದ್ದು, ಇದರ ಹೊರೆ ನಿವಾರಣೆಗಾಗಿ ಒಟ್ಟು 300 ಕೋಟಿ ರೂ.ಗಳ ಆರ್ಥಿಕ ನೆರವನ್ನು ಪೂರಕ ಅಂದಾಜಿನಲ್ಲಿ ಒದಗಿಸಲು ಪ್ರಸ್ತಾವಿಸಲಾಗಿದೆ. ಸಕ್ಕರೆ ಬೆಲೆ, ಮಾರುಕಟ್ಟೆ ಅನಿಶ್ಚಿತತೆ, ಕಾರ್ಖಾನೆಗಳ ಬಾಕಿ ಸಮಸ್ಯೆಗಳ ನಡುವೆಯೂ ಬೆಳೆಗಾರರು ದಿಕ್ಕುತೋಚದ ಸ್ಥಿತಿಗೆ ಸಿಲುಕದಂತೆ ನೋಡಿಕೊಳ್ಳುವ ಉದ್ದೇಶ ಇಲ್ಲಿದೆ.

ಆರ್ಥಿಕ ಹೂಡಿಕೆ ಆಕರ್ಷಣೆ ಹಾಗೂ ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಹಾಜರಾತಿ ಬಲಪಡಿಸುವ ಸಲುವಾಗಿ, 2026ರಲ್ಲಿ ದಾವೋಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ರಾಜ್ಯದ ನಿಯೋಗ ಭಾಗವಹಿಸಲು 10 ಕೋಟಿ ರೂ. ಅನುದಾನವನ್ನು ತೋರಿಸಲಾಗಿದೆ. ಕೈಗಾರಿಕೆಗಳಿಗೆ ಪ್ರೋತ್ಸಾಹ ಧನ ಸಹಾಯ ಯೋಜನೆಯಡಿ 100 ಕೋಟಿ ರೂ.ಗಳಷ್ಟು ಅನುದಾನವನ್ನು ಕೂಡ ಪೂರಕ ಅಂದಾಜುಗಳಲ್ಲಿ ಸೇರಿಸಲಾಗಿದೆ. ರಾಜ್ಯಕ್ಕೆ ಹೊಸ ಹೂಡಿಕೆ, ಉದ್ಯೋಗಾವಕಾಶ, ಕೈಗಾರಿಕಾ ವಿಸ್ತರಣೆ ತರಲು ಈ ಅನುದಾನ ಬಳಕೆಯಾಗಲಿದೆ.

ಸ್ಪೀಕರ್ ಮತ್ತು ಸಭಾಪತಿಗಳು ಕಾಮನ್‌ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ (CPA) ಸಮ್ಮೇಳನಗಳಲ್ಲಿ ಭಾಗವಹಿಸಲು ಬೇಕಾಗುವ ಪ್ರಯಾಣ ವೆಚ್ಚ ಹಾಗೂ ಅಧಿಕೃತ ಖರ್ಚುಗಳಿಗೆ 2 ಕೋಟಿ ರೂ.ಗಳನ್ನು ಮೀಸಲು ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ ಸಮ್ಮೇಳನದ ವೆಚ್ಚಕ್ಕಾಗಿ 3.60 ಕೋಟಿ ರೂ. ಅನುದಾನವನ್ನೂ ಪೂರಕ ಅಂದಾಜಿನಲ್ಲಿ ಸೇರಿಸಲಾಗಿದೆ.

ಬೆಳಗಾವಿಯಲ್ಲಿನ ಈಚಿನ ಅಧಿವೇಶನವೆಲ್ಲ ನಡೆಯುತ್ತಿರುವ ಸುವರ್ಣಸೌಧ ಅಧಿವೇಶನವೇ ಮಹತ್ವದ ವೆಚ್ಚ ಶೀರ್ಷಿಕೆಯಾಗಿ ಕಾಣಿಸಿಕೊಂಡಿದೆ. ಈ ಅಧಿವೇಶನ ಆಯೋಜನೆ, ವ್ಯವಸ್ಥಾಪನೆ, ಭದ್ರತೆ, ವಸತಿ ಮತ್ತು ಇತರ ವ್ಯವಸ್ಥೆಗಳಿಗೆ ಒಟ್ಟು 14.50 ಕೋಟಿ ರೂ.ಗಳನ್ನು ಪೂರಕ ಅಂದಾಜಿನಲ್ಲಿ ಮೀಸಲಿಡಲಾಗಿದೆ.

ಮಾಜಿ ಶಾಸಕರು ಮತ್ತು ಪರಿಷತ್ ಸದಸ್ಯರು ರೈಲ್ವೇ ಹಾಗೂ ವಿಮಾನ ಪ್ರಯಾಣ ಭತ್ಯೆಗೆ 1.86 ಕೋಟಿ ರೂ.ಗಳನ್ನು ಒದಗಿಸಲು ಪ್ರಸ್ತಾವಿಸಲಾಗಿದೆ. ಅದೇ ರೀತಿ, ವಿಧಾನಸಭೆ ಶಾಸಕರ ಭವನಕ್ಕಾಗಿ ಹೊಸ ವಾಹನಗಳ ಖರೀದಿಗೆ 2 ಕೋಟಿ ರೂ.ಗಳ ಅನುದಾನ ಮಂಜೂರಾಗುವಂತೆ ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ.

Read More
Next Story