ರಾಜ್ಯವನ್ನು ಸಾರಾಯಿ ಮುಕ್ತ ಮಾಡಿ, ಸಿಎಂ ಫೋಟೋ ಇಟ್ಟು ಪೂಜಿಸ್ತೀನಿ:  ಶಾಸಕ ಶರಣು ಸಲಗಾರ್ ಸವಾಲು
x

ಶರಣು ಸಲಗಾರ್ 

ರಾಜ್ಯವನ್ನು ಸಾರಾಯಿ ಮುಕ್ತ ಮಾಡಿ, ಸಿಎಂ ಫೋಟೋ ಇಟ್ಟು ಪೂಜಿಸ್ತೀನಿ: ಶಾಸಕ ಶರಣು ಸಲಗಾರ್ ಸವಾಲು

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಬಸವಕಲ್ಯಾಣ ಶಾಸಕರು, ಯುವಜನತೆ ಎದುರಿಸುತ್ತಿರುವ ವ್ಯಸನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗವನ್ನು ದಯವಿಟ್ಟು ವ್ಯಸನ ಮುಕ್ತವನ್ನಾಗಿ ಮಾಡಿ ಎಂದು ಕಳಕಳಿಯಿಂದ ಮನವಿ ಮಾಡಿದರು.


Click the Play button to hear this message in audio format

ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಮಂಗಳವಾರ ಭಾವನಾತ್ಮಕ ತಿರುವು ಪಡೆದುಕೊಂಡಿತು. ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಶರಣು ಸಲಗಾರ್, ಉತ್ತರ ಕರ್ನಾಟಕ ಭಾಗದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನ ಮಿತಿಮೀರಿದ್ದು, "ರಾಜ್ಯವನ್ನು ಸಾರಾಯಿ ಮುಕ್ತವನ್ನಾಗಿ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ," ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಬಸವಕಲ್ಯಾಣ ಶಾಸಕರು, ಯುವಜನತೆ ಎದುರಿಸುತ್ತಿರುವ ವ್ಯಸನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗವನ್ನು ದಯವಿಟ್ಟು ವ್ಯಸನ ಮುಕ್ತವನ್ನಾಗಿ ಮಾಡಿ ಎಂದು ಕಳಕಳಿಯಿಂದ ಮನವಿ ಮಾಡಿದರು.

"ತಂದೆಯ ಜೊತೆ ಕುಳಿತು ಸಾರಾಯಿ ಕುಡಿಯುವ ಮಕ್ಕಳು"

ತಮ್ಮ ಭಾಗದ ಸಾಮಾಜಿಕ ಸ್ವಾಸ್ಥ್ಯ ಕೆಟ್ಟಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಲಗಾರ್, "ನಮ್ಮ ಮಕ್ಕಳು ಡ್ರಗ್ಸ್ ಮತ್ತು ಸಾರಾಯಿಯ ದಾಸರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆಯೆಂದರೆ, ಮನೆಯಲ್ಲಿ ತಂದೆಯ ಜೊತೆಗೆ ಮಕ್ಕಳೂ ಕುಳಿತು ಸಾರಾಯಿ ಕುಡಿಯುವಂತಾಗಿದೆ. ಡ್ರಗ್ಸ್ ಹಾವಳಿಯಿಂದಾಗಿ ನಮ್ಮ ಭಾಗದ ಯುವಕರು ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಳ್ಳುತ್ತಿದ್ದಾರೆ," ಎಂದು ಸದನದ ಗಮನ ಸೆಳೆದರು.

ಗೃಹ ಸಚಿವರಿಗೂ ಆಫರ್: ಜಗುಲಿಯ ಮೇಲೆ ಫೋಟೋ!

ವ್ಯಸನಗಳು ಮತ್ತು ರಸ್ತೆ ಅಪಘಾತಗಳ ನಡುವಿನ ಸಂಬಂಧವನ್ನು ವಿವರಿಸಿದ ಅವರು, "ಡ್ರಗ್ಸ್ ಮತ್ತು ಮದ್ಯದ ಅಮಲಿನಲ್ಲಿ ಯುವಕರು ಹೆಲ್ಮೆಟ್ ಕೂಡ ಧರಿಸದೆ ಅತೀ ವೇಗವಾಗಿ ವಾಹನ ಚಲಾಯಿಸಿ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಕೂಡಲೇ ಗೃಹ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಸೂಚನೆ ನೀಡಬೇಕು. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಆಗ ಮಾತ್ರ ಯುವಕರ ಸಾವನ್ನು ತಡೆಯಲು ಸಾಧ್ಯ. ನೀವು ಇಂತಹ ಕಠಿಣ ಕ್ರಮ ಕೈಗೊಂಡಿದ್ದೇ ಆದರೆ, ಗೃಹ ಸಚಿವರ ಫೋಟೋವನ್ನೂ ನಮ್ಮ ಮನೆಯ ಜಗುಲಿಗಳ ಮೇಲೆ ಇಡುತ್ತೇವೆ," ಎಂದು ಹೇಳಿದರು.

"ಗೃಹಲಕ್ಷ್ಮಿ ಹಣ ಬೇಡ, ವ್ಯಸನ ಮುಕ್ತ ಮಾಡಿ"

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಮಾತನಾಡಿದ ಶಾಸಕರು, "ನಮಗೆ ನಿಮ್ಮ ಯಾವುದೇ ಗೃಹಲಕ್ಷ್ಮಿ ಯೋಜನೆಯ ಹಣ ಬೇಡ. ಅದರಿಂದ ಜನರಿಗೆ ಶಾಶ್ವತವಾದ ಯಾವ ಪ್ರಯೋಜನವೂ ಆಗುತ್ತಿಲ್ಲ. ಅದರ ಬದಲಿಗೆ ಮೊದಲು ಉತ್ತರ ಕರ್ನಾಟಕವನ್ನು ವ್ಯಸನ ಮುಕ್ತವನ್ನಾಗಿ ಮಾಡಿ," ಎಂದು ಒತ್ತಾಯಿಸಿದರು.

ಸರ್ಕಾರದ ಟಾರ್ಗೆಟ್ ಆರೋಪ; ಸಚಿವರ ಸ್ಪಷ್ಟನೆ

ಸರ್ಕಾರ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿರುವ ಕಾರಣ ಹಳ್ಳಿಹಳ್ಳಿಗಳಲ್ಲಿ ಸಾರಾಯಿ ಮಾರಾಟ ಹೆಚ್ಚಾಗಿದೆ. ಇದೇ ಕಾರಣಕ್ಕೆ ಯುವಕರು ಕುಡಿತದ ಚಟಕ್ಕೆ ಸಿಲುಕುತ್ತಿದ್ದಾರೆ ಎಂದು ಸಲಗಾರ್ ಗಂಭೀರ ಆರೋಪ ಮಾಡಿದರು. ಈ ವೇಳೆ ಶರಣು ಸಲಗಾರ್ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್, "ನಾವು ಮದ್ಯ ಮಾರಾಟಕ್ಕೆ ಯಾವುದೇ ಟಾರ್ಗೆಟ್ ನೀಡಿಲ್ಲ," ಎಂದು ಸ್ಪಷ್ಟಪಡಿಸಿದರು.

Read More
Next Story