ನಾರ್ವೆ ಸಂಸತ್ತಿಗೆ ಕರ್ನಾಟಕದ ನಿಯೋಗ ಭೇಟಿ: ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಮಹತ್ವದ ಚರ್ಚೆ
x

ನಾರ್ವೆ ಸಂಸತ್ತಿಗೆ ಕರ್ನಾಟಕದ ನಿಯೋಗ ಭೇಟಿ: ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಮಹತ್ವದ ಚರ್ಚೆ

ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


Click the Play button to hear this message in audio format

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ನೇತೃತ್ವದ ನಿಯೋಗವು ನಾರ್ವೆ ದೇಶದ ಸಂಸತ್ತಿಗೆ ಅಧಿಕೃತ ಭೇಟಿ ನೀಡಿ, ಉಭಯ ರಾಷ್ಟ್ರಗಳ ಶಾಸಕಾಂಗ ವ್ಯವಸ್ಥೆ ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಮಹತ್ವದ ಮಾತುಕತೆ ನಡೆಸಿತು.

1814ರಲ್ಲಿ ಸ್ಥಾಪನೆಯಾದ ನಾರ್ವೆ ಸಂಸತ್ತು, ವಿಶ್ವದ ಅತ್ಯಂತ ಹಳೆಯ ಮತ್ತು ಸ್ಥಿರವಾದ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಒಂದಾಗಿದೆ. ನಿಯೋಗವು ಈ ಐತಿಹಾಸಿಕ ಸಂಸತ್ತಿಗೆ ಭೇಟಿ ನೀಡಿ, ಅಲ್ಲಿನ ಮಾಜಿ ಸಚಿವ ಹಾಗೂ ಸಂಸದರಾಗಿದ್ದ ಹಿಮಾಂಶು ಗುಲೇಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿತು. ಈ ಸಂದರ್ಭದಲ್ಲಿ ನಾರ್ವೆಯ ಇತಿಹಾಸ, ಸಂವಿಧಾನ, ಆಡಳಿತ ವ್ಯವಸ್ಥೆ ಮತ್ತು ಜನಪರ ಯೋಜನೆಗಳ ಬಗ್ಗೆ ನಿಯೋಗವು ಮಾಹಿತಿ ಪಡೆದುಕೊಂಡಿತು.

ಸಂಸದೀಯ ಕಾರ್ಯವೈಖರಿಗಳ ಕುರಿತು ಚರ್ಚೆ

ಭೇಟಿಯ ವೇಳೆ, ಎರಡೂ ರಾಷ್ಟ್ರಗಳ ಸಂಸತ್ತಿನ ಕಾರ್ಯನಿರ್ವಹಣಾ ವಿಧಾನ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ವಿನ್ಯಾಸ ಮತ್ತು ಸಂಸದೀಯ ಅಧಿವೇಶನಗಳ ನಿರ್ವಹಣೆಯ ಕುರಿತು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶಿಕ್ಷಣ, ಪ್ರವಾಸೋದ್ಯಮದಲ್ಲಿ ಸಹಕಾರಕ್ಕೆ ಚಿಂತನೆ

ನಾರ್ವೆಯ ಪ್ರಗತಿಪರ ಪ್ರಜಾತಾಂತ್ರಿಕ ಮಾದರಿಯನ್ನು ಶ್ಲಾಘಿಸಿದ ಯು.ಟಿ. ಖಾದರ್, ಕರ್ನಾಟಕ ಮತ್ತು ನಾರ್ವೆ ನಡುವೆ ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಈ ರೀತಿಯ ಅಂತರಾಷ್ಟ್ರೀಯ ಸಹಭಾಗಿತ್ವವು ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ನಿಯೋಗದಲ್ಲಿ ಕರ್ನಾಟಕ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಮತ್ತು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರು ಉಪಸ್ಥಿತರಿದ್ದರು. ಈ ಭೇಟಿಯು ಕರ್ನಾಟಕ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ಶಾಸಕಾಂಗ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

Read More
Next Story