ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ
x

ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೇವಲ ಪ್ರಸ್ತುತ ರಾಜಕೀಯ ವಿದ್ಯಮಾನಗಳಷ್ಟೇ ಅಲ್ಲದೆ, ಮುಂಬರುವ ಅಧಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಚರ್ಚೆಗಳು ನಡೆಯಲಿವೆ .


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಡೆ ಇಟ್ಟಿದ್ದಾರೆ. ಶಾಸಕಾಂಗ ಪಕ್ಷದ ನಾಯರೂ ಆಗಿರುವ ಸಿಎಂ ಸಿದ್ದರಾಮಯ್ಯ, ಇದೇ ತಿಂಗಳ 28 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆಯನ್ನು ಕರೆದಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೇವಲ ಪ್ರಸ್ತುತ ರಾಜಕೀಯ ವಿದ್ಯಮಾನಗಳಷ್ಟೇ ಅಲ್ಲದೆ, ಮುಂಬರುವ ಅಧಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಕೇಂದ್ರದ ವಿರುದ್ಧ ಸಮರಕ್ಕೆ ಶಾಸಕರಿಗೆ ಪಾಠ

ಈ ಬಾರಿಯ ಶಾಸಕಾಂಗ ಪಕ್ಷದ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಗ್ರಸ್ಥಾನದಲ್ಲಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಮತ್ತು ಕೇಂದ್ರ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಶಾಸಕರು ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆ ಸಿಎಂ ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಕಾಯ್ದೆಗಳು ಮತ್ತು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಶಾಸಕರು ಸದನದಲ್ಲಿ ಮತ್ತು ಸದನದ ಹೊರಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಈ ನಿಟ್ಟಿನಲ್ಲಿ ಅಂಕಿ-ಅಂಶಗಳ ಸಹಿತ ಹೇಗೆ ವಿಷಯ ಮಂಡಿಸಬೇಕು ಎನ್ನುವ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಕಿವಿಮಾತು ಹೇಳಲಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ: ಪ್ರತಿಷ್ಠೆಯ ಕಣ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿರುವುದು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಪ್ರಮುಖವಾಗಿ ತಾಲೂಕು, ಜಿಲ್ಲಾ ಮತ್ತು ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿದ್ದು, ಇವುಗಳಲ್ಲಿ ಗೆಲುವು ಸಾಧಿಸುವುದು ಆಡಳಿತ ಪಕ್ಷಕ್ಕೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮವನ್ನು ಮತಗಳಾಗಿ ಪರಿವರ್ತಿಸಲು ಶಾಸಕರಿಗೆ ಟಾಸ್ಕ್ ನೀಡುವ ಸಾಧ್ಯತೆಯಿದೆ.

ಜಿಬಿಎ ಮತ್ತು ನಾಯಕತ್ವ ಗೊಂದಲ

ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಲಿರುವ 'ಗ್ರೇಟರ್ ಬೆಂಗಳೂರು ಅಥಾರಿಟಿ' ಚುನಾವಣೆ ಎದುರಿಸುವ ಕುರಿತೂ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಯಲಿದೆ. ಬೆಂಗಳೂರು ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಈ ಬಗ್ಗೆ ಸಿಎಂ ಚರ್ಚಿಸಲಿದ್ದಾರೆ.

ಇದೆಲ್ಲದರ ನಡುವೆ, ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಕುರಿತು ಎದ್ದಿರುವ ಊಹಾಪೋಹಗಳಿಗೆ ಈ ಸಭೆ ಪರೋಕ್ಷವಾಗಿ ಉತ್ತರ ನೀಡುವ ಸಾಧ್ಯತೆಯಿದೆ. ಗೊಂದಲದ ನಡುವೆಯೂ ಶಾಸಕಾಂಗ ಪಕ್ಷದ ಸಭೆ ಕರೆಯುವ ಮೂಲಕ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಆಡಳಿತದ ಮೇಲಿನ ತಮ್ಮ ಹಿಡಿತವನ್ನು ಪ್ರದರ್ಶಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Read More
Next Story