ಗೋವಾ-ಕೇರಳದ ಮುಂದೆ ಮಂಕಾದ ರಾಜ್ಯ ಕರಾವಳಿ: ಪ್ರವಾಸಿಗರನ್ನು ಸೆಳೆಯುವುದರಲ್ಲಿ ಹಿಂದೆ
x

ಗೋವಾ-ಕೇರಳದ ಮುಂದೆ ಮಂಕಾದ ರಾಜ್ಯ ಕರಾವಳಿ: ಪ್ರವಾಸಿಗರನ್ನು ಸೆಳೆಯುವುದರಲ್ಲಿ ಹಿಂದೆ

ರಾಜ್ಯದ 300 ಕಿ.ಮೀ. ಉದ್ದದ ಕರಾವಳಿಯು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತವಾದ ತಾಣವಾಗಿದೆ. ಆದರೂ ಗೋವಾ ಮತ್ತು ಕೇರಳಕ್ಕೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಆತಂಕಕಾರಿ ವಿಷಯ.


ರಾಜ್ಯದ ಪಶ್ಚಿಮಕ್ಕೆ ಹರಡಿರುವ ಅರಬ್ಬೀ ಸಮುದ್ರದ ತೀರವು ಕೇವಲ ಮರಳಿನ ರಾಶಿಯಲ್ಲ, ಅದು ರಾಜ್ಯದ ಆರ್ಥಿಕತೆಯನ್ನು ಬದಲಿಸಬಲ್ಲ ಚಿನ್ನದ ಗಣಿ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶವು ಪ್ರಕೃತಿ ದತ್ತವಾದ ಸೌಂದರ್ಯ, ಐತಿಹಾಸಿಕ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳ ಸಂಗಮವಾಗಿದೆ.

ಆದರೂ ಪ್ರವಾಸೋದ್ಯಮದ ದೃಷ್ಟಿಯಿಂದ ಈ ಭಾಗವನ್ನು ಆರ್ಥಿಕತೆಯ ಸಮೃದ್ಧವನ್ನಾಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ನೆರೆಯ ಗೋವಾ ಮತ್ತು ಕೇರಳ ರಾಜ್ಯಗಳು ತಮ್ಮ ಕರಾವಳಿಯನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಿ ಆರ್ಥಿಕವಾಗಿ ಸದೃಢವಾಗಿವೆ. ಆದರೆ ರಾಜ್ಯವು ಇಂದಿಗೂ ಶೈಶವಾವಸ್ಥೆಯಲ್ಲೇ ಇರುವುದು ರಾಜ್ಯದ ಆರ್ಥಿಕ ಪ್ರಗತಿಗೆ ದೊಡ್ಡ ಹಿನ್ನಡೆಯಾಗಿದೆ.

ರಾಜ್ಯದ 300 ಕಿ.ಮೀ. ಉದ್ದದ ಕರಾವಳಿಯು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತವಾದ ತಾಣವಾಗಿದೆ. ಆದರೂ ಗೋವಾ ಮತ್ತು ಕೇರಳಕ್ಕೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಆತಂಕಕಾರಿ ವಿಷಯ. ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಬೀಚ್‌ಗಳು ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಇದ್ದರೂ, ಕಟ್ಟುನಿಟ್ಟಿನ ಸಿಆರ್‌ಝೆಡ್ ನಿಯಮಗಳು ಮತ್ತು ಹೂಡಿಕೆಗೆ ಪೂರಕವಲ್ಲದ ವಾತಾವರಣ ಪ್ರಮುಖ ಅಡಚಣೆಗಳಾಗಿವೆ.

ಗೋವಾದ 'ಮುಕ್ತ ಸಂಸ್ಕೃತಿ' ಮತ್ತು ಕೇರಳದ 'ವೃತ್ತಿಪರ ಮಾರ್ಕೆಟಿಂಗ್' ತಂತ್ರಗಾರಿಕೆ ರಾಜ್ಯದಲ್ಲಿ ಮರೀಚಿಕೆಯಾಗಿದೆ. ಮೂಲಸೌಕರ್ಯಗಳ ಕೊರತೆ, ಧಾರ್ಮಿಕ ಚೌಕಟ್ಟುಗಳ ಮಿತಿ ಮತ್ತು ರಾತ್ರಿ ಅವಧಿಯ ಮನರಂಜನೆಗೆ ಇರುವ ನಿರ್ಬಂಧಗಳು ಪ್ರವಾಸಿಗರನ್ನು ಬೇರೆಡೆಗೆ ಸೆಳೆಯುತ್ತಿವೆ. ಸರ್ಕಾರವು ಕೇವಲ ಭರವಸೆ ನೀಡದೆ, ನಿಯಮಗಳನ್ನು ಸಡಿಲಗೊಳಿಸಿ, ಖಾಸಗಿ ಹೂಡಿಕೆಗೆ ಉತ್ತೇಜನ ನೀಡಿ, ಸ್ಥಳೀಯ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಸುಸ್ಥಿರ ಪ್ರವಾಸೋದ್ಯಮ ನೀತಿಯಿಂದ ಮಾತ್ರ ಕರಾವಳಿಯು ರಾಜ್ಯದ ಆರ್ಥಿಕ ಬೆನ್ನೆಲುಬಾಗಿ ಬೆಳೆಯಲು ಸಾಧ್ಯ ಎಂದು ಹೇಳಲಾಗಿದೆ.

ಬ್ಲೂ ಫ್ಲಾಗ್ ಮಾನ್ಯತೆ

ರಾಜ್ಯದ ಕರಾವಳಿಯು ಪ್ರವಾಸಿಗರನ್ನು ಸೆಳೆಯಲು ಬೇಕಾದ ಅಂಶಗಳನ್ನು ಹೊಂದಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್, ಗೋಕರ್ಣದ ಓಂ ಬೀಚ್, ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಸಾನ್ನಿಧ್ಯದ ಬೀಚ್, ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್, ಮಂಗಳೂರಿನ ಪಣಂಬೂರು ಹಾಗೂ ಸೋಮೇಶ್ವರ ಬೀಚ್‌ಗಳು ವಿಶ್ವದರ್ಜೆಯ ತಾಣಗಳಾಗುವ ಸಾಮರ್ಥ್ಯ ಹೊಂದಿವೆ. ಉಡುಪಿಯ ಪಡುಬಿದ್ರಿ ಮತ್ತು ಉತ್ತರ ಕನ್ನಡದ ಕಾಸರಕೋಡು ಬೀಚ್‌ಗಳು ಅಂತರರಾಷ್ಟ್ರೀಯ 'ಬ್ಲೂ ಫ್ಲಾಗ್' ಮಾನ್ಯತೆ ಪಡೆದಿರುವುದು ಕಡಲತೀರದ ಸ್ವಚ್ಛತೆ ಮತ್ತು ಪರಿಸರ ಸ್ನೇಹಿ ವ್ಯವಸ್ಥೆಗೆ ಸಾಕ್ಷಿಯಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್, ಮೂಲ್ಕಿಯಲ್ಲಿ ಸರ್ಫಿಂಗ್ ಮತ್ತು ಪ್ಯಾರಾಸೈಲಿಂಗ್‌ಗೆ ಹೇರಳ ಅವಕಾಶಗಳಿವೆ.

ರಾಜ್ಯವು ಭೌಗೋಳಿಕವಾಗಿ ಗೋವಾ ಮತ್ತು ಕೇರಳದ ನಡುವೆ ಇದ್ದರೂ, ಪ್ರವಾಸಿಗರ ಸಂಖ್ಯೆಯಲ್ಲಿ ಹತ್ತಿರಕ್ಕೂ ಸುಳಿಯುತ್ತಿಲ್ಲ. ಗೋವಾ ಸರ್ಕಾರವು ಪ್ರವಾಸೋದ್ಯಮವನ್ನು ತನ್ನ ಆರ್ಥಿಕತೆಯ ಬೆನ್ನೆಲುಬಾಗಿ ಸ್ವೀಕರಿಸಿದೆ. ಅಲ್ಲಿನ ಬೀಚ್ ಸಂಸ್ಕೃತಿ, ಮುಕ್ತ ವಾತಾವರಣ, ಜೈವಿಕ ಸುರಕ್ಷತೆ ಮತ್ತು ರಾತ್ರಿ ಜೀವನ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತದೆ. ಸರಳೀಕೃತ ನಿಯಮಗಳು ಅಲ್ಲಿನ ಹೂಡಿಕೆದಾರರಿಗೆ ವರದಾನವಾಗಿವೆ. ಅಲ್ಲದೇ, ಕೇರಳವು ತನ್ನ ಕರಾವಳಿಯನ್ನು 'ಗಾಡ್ಸ್ ಓನ್ ಕಂಟ್ರಿ' ಎಂದು ಬ್ರಾಂಡ್ ಮಾಡುವಲ್ಲಿ ಯಶಸ್ವಿಯಾಗಿದೆ. ಆಯುರ್ವೇದ ಚಿಕಿತ್ಸೆ, ಪರಿಸರ ಸ್ನೇಹಿ ರೆಸಾರ್ಟ್‌ಗಳು ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಕೇರಳ ನೀಡುವ ಒತ್ತು ಮಾದರಿಯಾಗಿದೆ. ಆದರೆ ರಾಜ್ಯದಲ್ಲಿ ಪ್ರವಾಸೋದ್ಯಮವು ಕೇವಲ 'ಧಾರ್ಮಿಕ ಪ್ರವಾಸೋದ್ಯಮ'ಕ್ಕೆ ಸೀಮಿತವಾಗಿದೆ. ಗೋಕರ್ಣ ಮತ್ತು ಮುರುಡೇಶ್ವರಕ್ಕೆ ಬರುವ ಭಕ್ತರು ಪ್ರವಾಸಿಗರಾಗಿ ಉಳಿಯುವಂತೆ ಮಾಡುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ.

300 ಕಿ.ಮೀ.ಗೂ ಹೆಚ್ಚು ಉದ್ದದ ಕರಾವಳಿ

ರಾಜ್ಯವು ಸುಮಾರು 300 ಕಿ.ಮೀ.ಗಳಿಗೂ ಹೆಚ್ಚು ಉದ್ದದ ಕರಾವಳಿಯನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯು 42 ಕಿ.ಮೀ., ಉಡುಪಿ ಜಿಲ್ಲೆಯು 91 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯು 160 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿದೆ. ಈ ಮೂರೂ ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಅತ್ಯಂತ ಆಕರ್ಷಕ ಕಡಲತೀರಗಳಿವೆ. ಸುರತ್ಕಲ್, ಪಣಂಬೂರು, ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಸಸಿಹಿತ್ಲು ಮುಂತಾದ ತಾಣಗಳು ದೇಶದ ಪ್ರಮುಖ ಪ್ರವಾಸಿ ಕೇಂದ್ರಗಳಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿವೆ. ಪಣಂಬೂರು ಮತ್ತು ತಣ್ಣೀರುಬಾವಿಯಂತಹ ಬೀಚ್‌ಗಳು ಈಗಾಗಲೇ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿವೆಯಾದರೂ, ಅವುಗಳಿಗೆ ಸಿಗಬೇಕಾದ ಶ್ರೇಣಿ ಮತ್ತು ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ ಎಂದು ಹೇಳಲಾಗಿದೆ.

2023 ರಿಂದ 2025ರ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಪಣಂಬೂರು ಬೀಚ್‌ನಲ್ಲಿ 2023 ರಲ್ಲಿ 13.84 ಲಕ್ಷವಿದ್ದ ಪ್ರವಾಸಿಗರ ಸಂಖ್ಯೆ 2024ರಲ್ಲಿ 24.56 ಲಕ್ಷಕ್ಕೆ ಏರಿದೆ. ಸುರತ್ಕಲ್ ಹಾಗೂ ತಣ್ಣೀರುಬಾವಿ ಕೂಡ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ, ಈ ಪ್ರವಾಸಿಗರಲ್ಲಿ ಬಹುಪಾಲು ಜನರು ಸ್ಥಳೀಯರು ಅಥವಾ ನೆರೆಹೊರೆಯ ಜಿಲ್ಲೆಗಳವರಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಅತ್ಯಲ್ಪವಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅವರಿಂದ ಬರುವ ಆದಾಯ ಮತ್ತು ಅವರಿಗೆ ಸಿಗುವ ಸೌಲಭ್ಯಗಳ ನಡುವೆ ದೊಡ್ಡ ಕಂದಕವಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಮುಖ ಅಡೆತಡೆಗಳು, ಸವಾಲುಗಳು

ರಾಜ್ಯದ ಕರಾವಳಿ ಪ್ರವಾಸೋದ್ಯಮ ಕುಂಠಿತಗೊಳ್ಳಲು ಹಲವು ಕಾರಣಗಳಿವೆ. ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ಕಟ್ಟುನಿಟ್ಟಿನ ನಿಯಮಗಳು ಅತಿ ದೊಡ್ಡ ಅಡಚಣೆಯಾಗಿವೆ. ಸಮುದ್ರ ತೀರದಿಂದ 200-500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಿಸಲು ಇರುವ ನಿರ್ಬಂಧಗಳು ದೊಡ್ಡ ಹೋಟೆಲ್ ಮತ್ತು ರೆಸಾರ್ಟ್ ಉದ್ಯಮಕ್ಕೆ ಮಾರಕವಾಗಿವೆ. ಗೋವಾ ಮಾದರಿಯಲ್ಲಿ ಈ ನಿಯಮಗಳನ್ನು ಸಡಿಲಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಬೀಚ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರವಾಸಿಗರ ಸುರಕ್ಷತೆಗೆ ಬೇಕಾದ ಲೈಫ್‌ಗಾರ್ಡ್‌ಗಳ ಕೊರತೆ ಎದ್ದುಕಾಣುತ್ತಿದೆ. ಅಂತಾರಾರಾಷ್ಟ್ರೀಯ ಪ್ರವಾಸಿಗರು ನಿರೀಕ್ಷಿಸುವ ಕನಿಷ್ಠ ಸೌಲಭ್ಯಗಳೂ ಹಲವೆಡೆ ಇಲ್ಲ.

ಕೋಮು ಭಾವನೆ ಧಕ್ಕೆ

ಕರಾವಳಿಯಲ್ಲಿ ಕೋಮು ಭಾವನೆಗಳು ತೀವ್ರವಾಗಿವೆ. ಪ್ರವಾಸೋದ್ಯಮ ಮತ್ತು ಸಂಪ್ರದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿದೆ. ಮದ್ಯಪಾನ, ಬಟ್ಟೆ ಮತ್ತು ಮನರಂಜನೆಗೆ ಸಂಬಂಧಿಸಿದಂತೆ ಇರುವ ಸಾಮಾಜಿಕ ಕಟ್ಟುಪಾಡುಗಳು ಹಾಗೂ 'ನೈತಿಕ ಪೊಲೀಸ್‌ಗಿರಿ'ಯಂತಹ ಘಟನೆಗಳು ಪ್ರವಾಸಿಗರಲ್ಲಿ ಅಸುರಕ್ಷಿತ ಭಾವನೆ ಮೂಡಿಸುತ್ತಿವೆ. ಪ್ರವಾಸೋದ್ಯಮ ನೀತಿಗಳು ಕಾಗದದ ಮೇಲೆ ಮಾತ್ರ ಉಳಿದಿವೆ. ಏಕಗವಾಕ್ಷಿ ಅನುಮೋದನೆ ವ್ಯವಸ್ಥೆಯು ಸಮರ್ಪಕವಾಗಿ ಜಾರಿಯಾಗಿಲ್ಲ, ಇದರಿಂದಾಗಿ ಖಾಸಗಿ ಹೂಡಿಕೆದಾರರು ಈ ಭಾಗಕ್ಕೆ ಬರಲು ಹಿಂಜರಿಯುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ಹೇಳಿವೆ.

ರಾಜ್ಯದ ಬೀಚ್‌ಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಿಯಾದ ಪ್ರಚಾರ ನಡೆಯುತ್ತಿಲ್ಲ. ಬೀಚ್‌ಗಳ ವಿಶೇಷತೆ, ಅಲ್ಲಿನ ಇತಿಹಾಸ ಅಥವಾ ಅಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಫಲಕಗಳಿಲ್ಲ. ಕೇರಳ ಸರ್ಕಾರವು ತನ್ನ ಪ್ರವಾಸೋದ್ಯಮವನ್ನು ಗಾಡ್ಸ್‌ ವೋನ್‌ ಕಂಟ್ರಿ ಎಂದು ಎಷ್ಟು ವ್ಯವಸ್ಥಿತವಾಗಿ ಮಾರ್ಕೆಟಿಂಗ್ ಮಾಡುತ್ತಿದೆ. ಆದರೆ, ರಾಜ್ಯದಿಂದ ಈ ಪ್ರಯತ್ನ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ರಾಜ್ಯದ ಕರಾವಳಿಯಲ್ಲಿ ಅವಕಾಶಗಳ ಸಾಗರವೇ ಇದೆ. ಆದರೆ, ಸರ್ಕಾರದಲ್ಲಿ ಅವುಗಳನ್ನು ಆಕರ್ಷಣೀಯವಾಗಿ ಮಾಡುವ ಇಚ್ಛಾಶಕ್ತಿ ಕೊರತೆ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ರಾಜ್ಯವು ಗೋವಾ ಮತ್ತು ಕೇರಳಕ್ಕೆ ಪೈಪೋಟಿ ನೀಡಬೇಕಾದರೆ, ಸರ್ಕಾರವು ಧೋರಣೆಯಲ್ಲಿ ಬದಲಾವಣೆ ತರಬೇಕಿದೆ. ಸುಸ್ಥಿರ ಮತ್ತು ವ್ಯವಸ್ಥಿತ ಪ್ರವಾಸೋದ್ಯಮಕ್ಕೆ ಅಡಿಪಾಯ ಹಾಕಬೇಕಾದ ಅಗತ್ಯತೆ ಇದೆ.

Read More
Next Story