ಕರಾವಳಿ ಸನಿಹದಲ್ಲಿ ದ್ವಿತ್ವಾ ಚಂಡಮಾರುತದ ಆರ್ಭಟ; ತಮಿಳುನಾಡು-ಆಂಧ್ರಕ್ಕೆ ರೆಡ್ ಅಲರ್ಟ್
x

ಕರಾವಳಿ ಸನಿಹದಲ್ಲಿ 'ದ್ವಿತ್ವಾ' ಚಂಡಮಾರುತದ ಆರ್ಭಟ; ತಮಿಳುನಾಡು-ಆಂಧ್ರಕ್ಕೆ 'ರೆಡ್ ಅಲರ್ಟ್'

ಚಂಡಮಾರುತದ ಭೀತಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ಆಗಮಿಸಬೇಕಿದ್ದ ಸುಮಾರು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.


Click the Play button to hear this message in audio format

ಬಂಗಾಳಕೊಲ್ಲಿಯಲ್ಲಿ ಎದ್ದಿರುವ 'ದ್ವಿತ್ವಾ' (Cyclone Ditwah) ಚಂಡಮಾರುತವು ಭಾರತದ ಕರಾವಳಿಯತ್ತ ವೇಗವಾಗಿ ಮುನ್ನುಗುತ್ತಿದ್ದು, ದಕ್ಷಿಣ ಭಾರತದ ಪೂರ್ವ ಕರಾವಳಿ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ. ಚಂಡಮಾರುತದ ತೀವ್ರತೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ಭಾಗಗಳಿಗೆ 'ರೆಡ್ ಅಲರ್ಟ್' ಘೋಷಿಸಿದ್ದು, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, 'ದ್ವಿತ್ವಾ' ಚಂಡಮಾರುತವು ಭಾನುವಾರ (ನ.30) ಮುಂಜಾನೆಯ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಬಳಿ ಬಂಗಾಳಕೊಲ್ಲಿಯ ನೈಋತ್ಯ ಭಾಗವನ್ನು ತಲುಪಿದೆ. ಸೋಮವಾರ ಬೆಳಿಗ್ಗೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಹಾದುಹೋಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಕರಾವಳಿ ತೀರದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಭಾರೀ ಗಾಳಿ, ಸಮುದ್ರ ಪ್ರಕ್ಷುಬ್ಧ

ಚಂಡಮಾರುತದ ಪ್ರಭಾವದಿಂದ ಸಮುದ್ರದಲ್ಲಿ ಭಾರೀ ಬದಲಾವಣೆಗಳು ಕಂಡುಬರುತ್ತಿವೆ. ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕೆಲವೊಮ್ಮೆ ಇದು 90 ಕಿಲೋಮೀಟರ್ ವೇಗವನ್ನೂ ತಲುಪುತ್ತಿದೆ. ಆಂಧ್ರ ಕರಾವಳಿಯಲ್ಲೂ ಗಾಳಿಯ ವೇಗ ಹೆಚ್ಚಾಗಿದ್ದು, ಗಂಟೆಗೆ 50-60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರದಲ್ಲಿ ಬರೋಬ್ಬರಿ 8 ಮೀಟರ್ ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮಹಾನಿರ್ದೇಶಕ ಡಾ. ಮೃತ್ಯುಂಜಯ್ ಮೊಹಾಪಾತ್ರ ಎಚ್ಚರಿಸಿದ್ದಾರೆ.

ಜನಜೀವನ ಅಸ್ತವ್ಯಸ್ತ: 54 ವಿಮಾನ ರದ್ದು

ಚಂಡಮಾರುತದ ಭೀತಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ಆಗಮಿಸಬೇಕಿದ್ದ ಸುಮಾರು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ. ತಮಿಳುನಾಡು ಮಾತ್ರವಲ್ಲದೆ ಕೇರಳದಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ರಕ್ಷಣಾ ಕ್ರಮಗಳು

ಚೆನ್ನೈ ಬಳಿ ಚಂಡಮಾರುತ ನೇರವಾಗಿ ಭೂಮಿಗೆ ಅಪ್ಪಳಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ತಮಿಳುನಾಡು ಸರ್ಕಾರ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಜ್ಜಾಗಿದೆ. ಈಗಾಗಲೇ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಸಂಭಾವ್ಯ ಅಪಾಯದ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್ (NDRF) ತಂಡಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಸಾರ್ವಜನಿಕರು ತುರ್ತು ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಬರದಂತೆ ಮತ್ತು ಸಮುದ್ರದತ್ತ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Read More
Next Story