
Caste Census| ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಸ್ವೀಕಾರ; 17ರ ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಸಭೆ
ಸಚಿವ ಸಂಪುಟದ ಮುಂದ ಜಾತಿಗಣತಿ ವರದಿ ಮಂಡನೆ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ತೀರ್ಮಾನಿಸಲು ಸಂಪುಟ ಸಭೆ ತೀರ್ಮಾನಿಸಿದೆ. ನಿರೀಕ್ಷೆಯಂತೆ ಜಾತಿಗಣತಿ ವರದಿ ಮಂಡನೆಗಷ್ಟೇ ಸಂಪುಟ ಸಭೆ ಮೀಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2024ರಲ್ಲಿ ಸಲ್ಲಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಂತಿಮ ವರದಿಯನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಸ್ವೀಕರಿಸಲಾಗಿದ್ದು, ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ನಿರ್ಣಯಿಸಲಾಗಿದೆ.
ಶುಕ್ರವಾರ (ಏಪ್ರಿಲ್11ರಂದು) ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಿಎಂ ಸೂಚನೆ ನೀಡಿದ್ದು, ಎಲ್ಲ ಸಚಿವರಿಗೆ ವರದಿ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸಿ ಅಂದು ಚರ್ಚೆಗೆ ಸಿದ್ಧರಾಗುವಂತೆ ತಿಳಿಸಲು ನಿರ್ದೇಶಿಸಿದ್ದಾರೆ.
ಈ ನಡುವೆ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಸಚಿವರು, ಸಂಪುಟ ಸಭೆಯಲ್ಲಿ ವರದಿ ಮಂಡನೆ ಬಗ್ಗೆ ಅಪಸ್ವರ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ಮತ್ತು ಈ ವರದಿ ಅವೈಜ್ಞಾನಿಕವಾಗಿದೆ ಹಾಗೂ ವರದಿ ಸಿದ್ಧಗೊಂಡೇ ಎಂಟು ವರ್ಷಗಳಾಗಿದ್ದು, ಒಂದು ವರ್ಷದ ಹಿಂದಷ್ಟೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಕರ್ನಾಟಕದ ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಗಳು ಇಲ್ಲ. ೨೦೧೧ರ ಜನಗಣತಿಗೂ ಮುಂದಿನ ವರ್ಷ ನಡೆಯಲಿರುವ ಸಂಭಾವ್ಯ ಜನಗಣತಿ ಲೆಕ್ಕಾಚಾರಗಳಿಗೆ ವ್ಯತ್ಯಾಸ ಬರುವ ಸಾಧ್ಯತೆಗಳನ್ನು ಸಚಿವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಕಾಳಜಿ ಕುರಿತು ವಿಶೇಷ ಚರ್ಚೆ ನಡೆಸಲು ಏಪ್ರಿಲ್ ೧೭ರಂದು ಪ್ರತ್ಯೇಕ ಸಂಪುಟ ಸಭೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅಂದು ಯಾವುದೇ ಇತರ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ. ಬಳಿಕ ಸಂಪುಟ ಉಪಸಮಿತಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಘೋಷಣೆ ಮಾಡಿ ಜಾತಿ ಗಣಿತಿಯ ವಿಶ್ಲೇಷಣೆಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ಕೈಗೊಂಡ ಜಾತಿಗಣತಿ ಆಧರಿಸಿ ಜಯಪ್ರಕಾಶ್ ಹೆಗಡೆ ಅವರು ಅಂತಿಮ ವರದಿ ಸಲ್ಲಿಸಿದ್ದು, ಇದಕ್ಕೆ ವೀರಶೈವರು, ಒಕ್ಕಲಿಗರು, ಹಿಂದುಳಿದ ವರ್ಗದ ಪ್ರಬಲ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಜಾತಿಗಣತಿ ಅವೈಜ್ಞಾನಿಕವಾಗಿದೆ, 10 ವರ್ಷಗಳ ಹಿಂದಿನ ಸಮೀಕ್ಷೆಯಾಗಿರುವ ಕಾರಣ ವರದಿ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಸಂಪುಟದ ಮುಂದೆ ಸಮೀಕ್ಷಾ ವರದಿ ಮಂಡಿಸಿದ್ದು, ಸಭೆಯಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಜಾತಿಗಣತಿ ವರದಿಯ ಪರಿಶೀಲನೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಪ ಸಮಿತಿಯಲ್ಲಿ ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್ ಸೇರಿದಂತೆ ಎಲ್ಲ ಸಮುದಾಯಗಳ ಸಚಿವರು ಇರಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಸಮಿತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಅಂಕಿ ಅಂಶಗಳನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿದು ಬಂದಿದೆ.
ಎಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015 ರ ಏಪ್ರಿಲ್ 11ರಿಂದ ಮೇ 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಜಾತಿ ವಿವರ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿತ್ತು.
ವರದಿಯ ವಿಶೇಷತೆ ಏನು?
ಹಲವು ಸಂಪುಟಗಳ ಒಟ್ಟು 13 ಪ್ರತಿಗಳನ್ನು ಒಳಗೊಂಡಿರುವ ಜಾತಿ ಗಣತಿ ವರದಿಯಲ್ಲಿ ಪ್ರಮುಖವಾಗಿ ರಾಜ್ಯದ ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ಮಾಹಿತಿ ಮತ್ತು ಅಂಕಿಅಂಶಗಳನ್ನು ಅಳವಡಿಸಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿ, ಜಾತಿವಾರು ಜನಸಂಖ್ಯಾವಿವರ, ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿ, ಪಂಗಡ ಹೊರತುಪಡಿಸಿ), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿಗಳು), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಪಂಗಡಗಳು), ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶ ಅಧ್ಯಯನ ವರದಿ ಮತ್ತಿತರ ಅಂಶಗಳನ್ನು ವರದಿ ಒಳಗೊಂಡಿದೆ.
ವಿಶೇಷವಾಗಿ ಜಾತಿ ಸಮುದಾಯಗಳ ಜನಸಂಖ್ಯೆ ವಿವರಗಳ ಜೊತೆಗೆ ಸಮುದಾಯಗಳ ರಾಜಕೀಯ ಸ್ಥಾನಮಾನ, ಅವಕಾಶ, ಉದ್ಯೋಗ ಸ್ಥಿತಿಗತಿ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ಮಾಹಿತಿಯನ್ನು ಕೂಡ ಈ ವರದಿ ಒಳಗೊಂಡಿದೆ.
Live Updates
- 11 April 2025 2:18 PM IST
ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ. ಶುಕ್ರವಾರ (ಏಪ್ರಿಲ್11ರಂದು ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಿಎಂ ಸೂಚನೆ ನೀಡಿದ್ದು, ಎಲ್ಲ ಸಚಿವರಿಗೆ ವರದಿ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸಿ ಅಂದು ಚರ್ಚೆಗೆ ಸಿದ್ಧರಾಗುವಂತೆ ತಿಳಿಸಲು ನಿರ್ದೇಶಿಸಿದ್ದಾರೆ.
- 11 April 2025 2:08 PM IST
ಜಾತಿಗಣತಿ ವರದಿ ಚರ್ಚೆ ವಿಶೇಷ ಸಂಪುಟ ಸಭೆ
ಜಾತಿಗಣತಿ ವರದಿ ಜಾರಿ ಕುರಿತು ಚರ್ಚಿಸಲು ಏ.17 ರಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ವರದಿ ಜಾರಿ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲು ಸಂಪುಟ ಸಭೆ ನಿರ್ಣಯಿಸಿದೆ.
- 11 April 2025 1:55 PM IST
ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಜಾರಿ ತೀರ್ಮಾನ
ಸಚಿವ ಸಂಪುಟದ ಮುಂದ ಜಾತಿಗಣತಿ ವರದಿ ಮಂಡನೆ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ತೀರ್ಮಾನಿಸಲು ಸಂಪುಟ ಸಭೆ ತೀರ್ಮಾನಿಸಿದೆ. ನಿರೀಕ್ಷೆಯಂತೆ ಜಾತಿಗಣತಿ ವರದಿ ಮಂಡನೆಗಷ್ಟೇ ಸಂಪುಟ ಸಭೆ ಮೀಸಲಾಗಿದೆ.
- 11 April 2025 1:23 PM IST
ಸಿಎಂಗೆ ಸಂಕಷ್ಟ ಬಂದಾಗ ಜಾತಿಗಣತಿ ನೆನಪಿಗೆ ಬರುತ್ತೆ
ರಾಜ್ಯದಲ್ಲಿ ಆಡಳಿತ ಹಳಿತಪ್ಪಿದೆ. ಸರ್ಕಾರ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದು, ಸಿಎಂ ಕುರ್ಚಿ ಅಲುಗಾಡುತ್ತಿದೆ. ಮುಖ್ಯಮಂತ್ರಿ ಅವರಿಗೆ ಸಂಕಷ್ಟ ಎದುರಾದಾಗಲೆಲ್ಲಾ ಜಾತಿಗಣತಿ ನೆನಪಿಗೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
- 11 April 2025 1:21 PM IST
ಸಿದ್ದರಾಮಯ್ಯ ಹೇಳಿ ಮಾಡಿಸಿದ ಸಮೀಕ್ಷೆ
ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸುತ್ತಿರುವುದು ದುರದೃಷ್ಟಕರ, ವೈಜ್ಞಾನಿಕವಾಗಿ ನಡೆಸದ ಸಮೀಕ್ಷೆಯನ್ನು ಮಂಡನೆ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಖಂಡಿಸಿದ್ದಾರೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಮನೆ ಮನೆಗೆ ಭೇಟಿ ನೀಡದೇ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಇದು ಸಿದ್ದರಾಮಯ್ಯ ಅವರೇ ಹೇಳಿ ಮಾಡಿಸಿದ ಸಮೀಕ್ಷೆಯಾಗಿದೆ ಎಂದು ಟೀಕಿಸಿದ್ದಾರೆ.
- 11 April 2025 1:17 PM IST
ಒಕ್ಕಲಿಗರು, ಲಿಂಗಾಯತರು ಸಿಡಿದೇಳಲು ಸಿದ್ಧತೆ?
ಜಾತಿ ಜನಗಣತಿಯ ವರದಿ ನೋಡಿಕೊಂಡು ಪ್ರಬಲ ಹೋರಾಟ ರೂಪಿಸಲು ಒಕ್ಕಲಿಗ ಹಾಗು ಲಿಂಗಾಯತ ಸಮುದಾಯ ನಿರ್ಧರಿಸಿವೆ. ವರದಿ ಅವೈಜ್ಞಾನಿಕವಾಗಿದ್ದರೂ ಸಮೀಕ್ಷಾ ಮಂಡನೆಗೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಸಂಘದ ಪ್ರಮುಖ ಮುಖಂಡರ ಸಮಾಲೋಚನೆ ನಡೆಸಿದ್ದಾರೆ. ವರದಿ ಮಂಡನೆ ಬಳಿಕ ಏನು ಮಾಡಬೇಕು, ಯಾವ ರೀತಿ ಹೆಜ್ಜೆ ಇಡಬೇಕು ಎಂಬ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
- 11 April 2025 1:13 PM IST
ಸಂಪುಟದಲ್ಲಿ ವರದಿ ಅಂಕಿ ಅಂಶ ಬಿಡುಗಡೆ ಇಲ್ಲ
ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ಅಂಕಿ ಅಂಶ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ.
ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಸ್ವೀಕಾರ ಮಾಡುವುದಕ್ಕಷ್ಟೇ ಸೀಮಿತಗೊಳಿಸಲಾಗುವುದು. ಎಲ್ಲಾ ಸಚಿವರೊಂದಿಗೆ ಚರ್ಚಿಸಿ ಅಂಕಿ ಅಂಶ ಬಿಡುಗಡೆ ಮಾಡಲು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಲ್ಲಾ ಸಚಿವರ ಅಭಿಪ್ರಾಯ ಪಡೆದು ನಂತರ ತಿರ್ಮಾನ ಸಾಧ್ಯತೆ
- 11 April 2025 1:09 PM IST
ಸಿಎಂ ಕುರ್ಚಿ ಉಳಿವಿಗಾಗಿ ಜಾತಿಗಣತಿ ವರದಿ ಮಂಡನೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅನಿಸುತ್ತಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿ ಮಂಡನೆಯ ದಾಳ ಉರುಳಿಸುತ್ತಿದ್ದಾರೆ ಎಂದು ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿವಾರು ಜನಗಣತಿಗೆ ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಒಗ್ಗಟ್ಟಿಲ್ಲ. 10 ವರ್ಷಗಳ ಹಳೆಯ ವರದಿಯನ್ನು ಜಾರಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
- 11 April 2025 12:54 PM IST
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಮಂಡನೆ; ಕಾಂತರಾಜು ಸ್ವಾಗತ
ಸಚಿವ ಸಂಪುಟದ ಮುಂದೆ ಮಂಡನೆಯಾಗುತ್ತಿರುವುದು ಜಾತಿಗಣತಿಯಲ್ಲ. ಅದನ್ನು ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂದು ಕರೆದಿದ್ದೇವೆ. ಸಮೀಕ್ಷೆಯಲ್ಲಿ ಬಳಸಲಾದ 54ಅಂಶಗಳಲ್ಲಿ ಜಾತಿಯೂ ಒಂದು. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಸಮೀಕ್ಷೆ ನಡೆಸಿದ ಎಚ್.ಕಾಂತರಾಜು ತಿಳಿಸಿದ್ದಾರೆ.
ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ವರದಿ ಮಾಹಿತಿ ಸೋರಿಕೆ ಕುರಿತಂತೆ ಏನನ್ನೂ ಹೇಳುವುದಿಲ್ಲ. ವರದಿ ತೆರದ ಬಳಿಕ ವಸ್ತುಸ್ಥಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
- 11 April 2025 12:51 PM IST
37 ಬಾಕ್ಸ್‌ಗಳಲ್ಲಿ ಜಾತಿಗಣತಿ ವರದಿ ತಂದ ಸಿಬ್ಬಂದಿ
೩೭ ಬಾಕ್ಸ್‌ಗಳಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ವಿಧಾನಸೌಧಕ್ಕೆ ತಂದ ಸಿಬ್ಬಂದಿ ನೇರವಾಗಿ ಸಂಪುಟ ಸಭೆ ನಡೆಯುವ ಕೊಠಡಿಗೆ ಕೊಂಡೊಯ್ದಿದ್ದಾರೆ. ಕೆಲವೇ ಕ್ಷಣಗಳಲ್ಲಿ ವರದಿಯನ್ನು ತೆರೆದು ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.