
Caste Census| ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಸ್ವೀಕಾರ; 17ರ ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಸಭೆ
ಸಚಿವ ಸಂಪುಟದ ಮುಂದ ಜಾತಿಗಣತಿ ವರದಿ ಮಂಡನೆ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ತೀರ್ಮಾನಿಸಲು ಸಂಪುಟ ಸಭೆ ತೀರ್ಮಾನಿಸಿದೆ. ನಿರೀಕ್ಷೆಯಂತೆ ಜಾತಿಗಣತಿ ವರದಿ ಮಂಡನೆಗಷ್ಟೇ ಸಂಪುಟ ಸಭೆ ಮೀಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2024ರಲ್ಲಿ ಸಲ್ಲಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಂತಿಮ ವರದಿಯನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಸ್ವೀಕರಿಸಲಾಗಿದ್ದು, ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ನಿರ್ಣಯಿಸಲಾಗಿದೆ.
ಶುಕ್ರವಾರ (ಏಪ್ರಿಲ್11ರಂದು) ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಿಎಂ ಸೂಚನೆ ನೀಡಿದ್ದು, ಎಲ್ಲ ಸಚಿವರಿಗೆ ವರದಿ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸಿ ಅಂದು ಚರ್ಚೆಗೆ ಸಿದ್ಧರಾಗುವಂತೆ ತಿಳಿಸಲು ನಿರ್ದೇಶಿಸಿದ್ದಾರೆ.
ಈ ನಡುವೆ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಸಚಿವರು, ಸಂಪುಟ ಸಭೆಯಲ್ಲಿ ವರದಿ ಮಂಡನೆ ಬಗ್ಗೆ ಅಪಸ್ವರ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ಮತ್ತು ಈ ವರದಿ ಅವೈಜ್ಞಾನಿಕವಾಗಿದೆ ಹಾಗೂ ವರದಿ ಸಿದ್ಧಗೊಂಡೇ ಎಂಟು ವರ್ಷಗಳಾಗಿದ್ದು, ಒಂದು ವರ್ಷದ ಹಿಂದಷ್ಟೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಕರ್ನಾಟಕದ ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಗಳು ಇಲ್ಲ. ೨೦೧೧ರ ಜನಗಣತಿಗೂ ಮುಂದಿನ ವರ್ಷ ನಡೆಯಲಿರುವ ಸಂಭಾವ್ಯ ಜನಗಣತಿ ಲೆಕ್ಕಾಚಾರಗಳಿಗೆ ವ್ಯತ್ಯಾಸ ಬರುವ ಸಾಧ್ಯತೆಗಳನ್ನು ಸಚಿವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಕಾಳಜಿ ಕುರಿತು ವಿಶೇಷ ಚರ್ಚೆ ನಡೆಸಲು ಏಪ್ರಿಲ್ ೧೭ರಂದು ಪ್ರತ್ಯೇಕ ಸಂಪುಟ ಸಭೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅಂದು ಯಾವುದೇ ಇತರ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ. ಬಳಿಕ ಸಂಪುಟ ಉಪಸಮಿತಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಘೋಷಣೆ ಮಾಡಿ ಜಾತಿ ಗಣಿತಿಯ ವಿಶ್ಲೇಷಣೆಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ಕೈಗೊಂಡ ಜಾತಿಗಣತಿ ಆಧರಿಸಿ ಜಯಪ್ರಕಾಶ್ ಹೆಗಡೆ ಅವರು ಅಂತಿಮ ವರದಿ ಸಲ್ಲಿಸಿದ್ದು, ಇದಕ್ಕೆ ವೀರಶೈವರು, ಒಕ್ಕಲಿಗರು, ಹಿಂದುಳಿದ ವರ್ಗದ ಪ್ರಬಲ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಜಾತಿಗಣತಿ ಅವೈಜ್ಞಾನಿಕವಾಗಿದೆ, 10 ವರ್ಷಗಳ ಹಿಂದಿನ ಸಮೀಕ್ಷೆಯಾಗಿರುವ ಕಾರಣ ವರದಿ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಸಂಪುಟದ ಮುಂದೆ ಸಮೀಕ್ಷಾ ವರದಿ ಮಂಡಿಸಿದ್ದು, ಸಭೆಯಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಜಾತಿಗಣತಿ ವರದಿಯ ಪರಿಶೀಲನೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಪ ಸಮಿತಿಯಲ್ಲಿ ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್ ಸೇರಿದಂತೆ ಎಲ್ಲ ಸಮುದಾಯಗಳ ಸಚಿವರು ಇರಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಸಮಿತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಅಂಕಿ ಅಂಶಗಳನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿದು ಬಂದಿದೆ.
ಎಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015 ರ ಏಪ್ರಿಲ್ 11ರಿಂದ ಮೇ 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಜಾತಿ ವಿವರ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿತ್ತು.
ವರದಿಯ ವಿಶೇಷತೆ ಏನು?
ಹಲವು ಸಂಪುಟಗಳ ಒಟ್ಟು 13 ಪ್ರತಿಗಳನ್ನು ಒಳಗೊಂಡಿರುವ ಜಾತಿ ಗಣತಿ ವರದಿಯಲ್ಲಿ ಪ್ರಮುಖವಾಗಿ ರಾಜ್ಯದ ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ಮಾಹಿತಿ ಮತ್ತು ಅಂಕಿಅಂಶಗಳನ್ನು ಅಳವಡಿಸಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿ, ಜಾತಿವಾರು ಜನಸಂಖ್ಯಾವಿವರ, ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿ, ಪಂಗಡ ಹೊರತುಪಡಿಸಿ), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಜಾತಿಗಳು), ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳು(ಪರಿಶಿಷ್ಟ ಪಂಗಡಗಳು), ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶ ಅಧ್ಯಯನ ವರದಿ ಮತ್ತಿತರ ಅಂಶಗಳನ್ನು ವರದಿ ಒಳಗೊಂಡಿದೆ.
ವಿಶೇಷವಾಗಿ ಜಾತಿ ಸಮುದಾಯಗಳ ಜನಸಂಖ್ಯೆ ವಿವರಗಳ ಜೊತೆಗೆ ಸಮುದಾಯಗಳ ರಾಜಕೀಯ ಸ್ಥಾನಮಾನ, ಅವಕಾಶ, ಉದ್ಯೋಗ ಸ್ಥಿತಿಗತಿ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ಮಾಹಿತಿಯನ್ನು ಕೂಡ ಈ ವರದಿ ಒಳಗೊಂಡಿದೆ.
Live Updates
- 11 April 2025 7:12 AM
ಸೋರಿಕೆಯಾದ ವರದಿಯಲ್ಲಿ ಸಮುದಾಯವಾರು ಒಟ್ಟು ಜನಸಂಖ್ಯೆ ಎಷ್ಟಿತ್ತು?
ಜಾತಿಗಣತಿ ವರದಿಯ ಅಂಶಗಳು ಸೋರಿಕೆಯಾದ ಬಳಿಕ ಪ್ರಬಲ ಜಾತಿಗಳು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸೋರಿಕೆಯಾದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ- 1.08ಕೋಟಿ ಜನಸಂಖ್ಯೆ ಹೊಂದಿದ್ದರೆ, ಪರಿಶಿಷ್ಟ ಪಂಗಡ-42ಲಕ್ಷ, ಮುಸ್ಲಿಮರು - 74 ಲಕ್ಷ, ಲಿಂಗಾಯತರು -73 ಲಕ್ಷ, ಒಕ್ಕಲಿಗರು-70ಲಕ್ಷ, ಕುರುಬರು-45ಲಕ್ಷ, ಮರಾಠರು-16 ಲಕ್ಷ, ಬ್ರಾಹ್ಮಣರು-15ಲಕ್ಷ, ವಿಶ್ವಕರ್ಮರು-15ಲಕ್ಷ, ಈಡಿಗರು-14 ಲಕ್ಷ, ಬೆಸ್ತರು -14.50ಲಕ್ಷ, ಕ್ರೈಸ್ತರು-12ಲಕ್ಷ, ಗೊಲ್ಲರು(ಯಾದವ)-10.50ಲಕ್ಷ, ಉಪ್ಪಾರ, ಮಡಿವಾಳ, ಅರೆ ಅಲೆಮಾರಿ ಸಮುದಾಯ ತಲಾ 7 ಲಕ್ಷ, ಕುಂಬಾರ, ತಿಗಳರು ತಲಾ 5ಲಕ್ಷ, ಜೈನರು 3 ಲಕ್ಷ ಜನಸಂಖ್ಯೆ ಹೊಂದಿದ್ದಾರೆ ಎಂಬುದು ತಿಳಿದು ಬಂದಿತ್ತು.
- 11 April 2025 7:08 AM
ವರದಿ ನೋಡಿದ ಬಳಿಕ ಮುಂದಿನ ತೀರ್ಮಾನಗಳ ಚರ್ಚೆ
ಜಾತಿ ಗಣತಿ ವರದಿ ಇಂದು ಸಂಪುಟ ಸಭೆಗೆ ಬಂದಿದೆ. ವರದಿಯನ್ನು ಸಿಎಂ ಹಾಗೂ ಸಚಿವರು ಇನ್ನೂ ನೋಡಿಲ್ಲ. ವರದಿ ಕುರಿತು ಚರ್ಚಿಸಿದ ಬಳಿಕ ವೀಕ್ಷಿಸಲಾಗುವುದು . ಆ ಬಳಿಕ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
- 11 April 2025 7:05 AM
ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನಂತರ ಜಾತಿಗಣತಿ ವರದಿ ಮಂಡನೆ
ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಬಳಿಕ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡಿಸಿದ ಸರ್ಕಾರ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಜಯಪ್ರಕಾಶ್ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಕಳೆದ ವರ್ಷ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಅಂದಿನಿಂದ ವರದಿ ಖಜಾನೆಯಲ್ಲಿ ಕೊಳೆಯುತ್ತಿತ್ತು.
- 11 April 2025 6:57 AM
ಸಿಎಂ ಸೂಚನೆ ಮೇರೆಗೆ ಜಾತಿಗಣತಿ ವರದಿ ಮಂಡನೆ
ಜಾತಿಗಣತಿ ಎಷ್ಟು ಸಂಪುಟ, ಏನೆಲ್ಲಾ ಮಾಹಿತಿ ಇದೆ ಎಂಬುದು ಗೊತ್ತಿಲ್ಲ.ಸಚಿವ ಸಂಪುಟದ ಮುಂದೆ ಬಂದಿರುವುದು ಕೂಡ ಗೌಪ್ಯ ವಿಚಾರ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವರದಿಗೆ ಪರ- ವಿರೋಧ ಏಕೆಂಬುದು ಗೊತ್ತಿಲ್ಲ. ಖಜಾನೆಯಲ್ಲಿದ್ದ ವರದಿಯನ್ನು ಸಿಎಂ ಸೂಚನೆ ಮೇರೆಗೆ ಸಂಪುಟದ ಮುಂದಿಡಲಾಗಿದೆ. ವರದಿ ಸೋರಿಕೆಯಾಗಿತ್ತು ಎಂಬ ಮಾಹಿತಿ ಇಲ್ಲ. ಸಚಿವ ಸಂಪುಟದ ಎಲ್ಲರ ಜೊತೆ ಚರ್ಚೆಯಾದ ಬಳಿಕ ವರದಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
- 11 April 2025 6:54 AM
ಜಾತಿಗಣದಿ ವರದಿ ಚರ್ಚೆ ಮಾಡಬೇಕಲ್ಲವೇ; ಅದಕ್ಕೂ ಮುನ್ನ ವಿರೋಧ ಏಕೆ?
ಜಾತಿ ಗಣತಿ ವರದಿ ಕುರಿತು ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮೊದಲು ವರದಿ ಓಪನ್ ಆಗಲಿ, ಆ ಮೇಲೆ ಏನಾಗಲಿದೆ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಾತಿಗಣತಿ ವರದಿಗೆ ಕೆಲ ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ವರದಿ ಜಾರಿಯಾದ ಮೇಲೆ ಸದನ ಕರೆಯಬೇಕು. ಅಲ್ಲಿ ಯಾರೆಲ್ಲ ಏನೇನು ಪ್ರಶ್ನೆ ಕೇಳ್ತಾರೆ ನೋಡೋಣ. ಇದಕ್ಕೂ ಮುನ್ನ ಸಮಗ್ರವಾಗಿ ಚರ್ಚೆ ಆಗಬೇಕಲ್ಲವೇ ಎಂದು ಹೇಳಿದ್ದಾರೆ.
- 11 April 2025 6:48 AM
ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆ ಜೋರು
ವಿಧಾನಸೌಧದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ 2015 ನೇ ಸಾಲಿನ ಜಾತಿವಾರು ಜನಗಣತಿ ವರದಿ ಕುರಿತಂತೆ ಚರ್ಚೆ ನಡೆಯುತ್ತಿದೆ. ಸಂಪುಟದ ಸಭೆಯ ಕೊನೆಯ ವಿಷಯವಾಗಿ ಜಾತಿಗಣತಿ ವರದಿ ತೆಗೆದುಕೊಂಡಿದ್ದು, ವಿವಿಧ ಸಮುದಾಯದ ಸಚಿವರು ಪರ-ವಿರೋಧ ಅಭಿಪ್ರಾಯ ಮಂಡಿಸುತ್ತಿದ್ದಾರೆ.