ಸಿಹಿ ಸುದ್ದಿ! ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಉಚಿತ ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ
x

ಸಿಹಿ ಸುದ್ದಿ! ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ 'ಉಚಿತ' ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ

ಬೆಂಗಳೂರಿನಲ್ಲಿ 1,000 ಕೋಟಿ ರೂ. ವೆಚ್ಚದ ಬೃಹತ್ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ.


ರಾಜ್ಯದಲ್ಲಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನ ‘ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್’ ಸಂಸ್ಥೆಯ ಸಹಯೋಗದೊಂದಿಗೆ, ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಮೂಲಕ ಬೃಹತ್ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಸಚಿವ ಸಂಪುಟ ಸಭೆಯು ಹಸಿರು ನಿಶಾನೆ ನೀಡಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿ ಲಭ್ಯವಿರುವ 10 ಎಕರೆ ಜಮೀನನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಜಮೀನನ್ನು ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ಗೆ 99 ವರ್ಷಗಳ ದೀರ್ಘಾವಧಿಯ ಗುತ್ತಿಗೆಗೆ ನೀಡಲು ಮತ್ತು ಅದರಂತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಯು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಹೊಂದಿರುವ 'ಟರ್ಷಿಯರಿ ಆರೈಕೆ' ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಈ ಯೋಜನೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಯಲಿದ್ದು, ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸುಮಾರು 1 ಸಾವಿರ ಕೋಟಿ ರೂ. ಬೃಹತ್ ಹೂಡಿಕೆಯನ್ನು ಮಾಡಲಿದೆ. ಆಸ್ಪತ್ರೆಯ ನಿರ್ಮಾಣದ ಸಂಪೂರ್ಣ ವೆಚ್ಚವನ್ನಲ್ಲದೆ, ಅದರ ವಾರ್ಷಿಕ ನಿರ್ವಹಣಾ ವೆಚ್ಚವಾದ ಸುಮಾರು 350 ಕೋಟಿ ರೂ. ಫೌಂಡೇಷನ್ ಪೂರ್ಣವಾಗಿ ಭರಿಸಲಿದೆ. ಈ ಆಸ್ಪತ್ರೆಯ ಪ್ರಮುಖ ವಿಶೇಷತೆಯೆಂದರೆ ಇಲ್ಲಿನ ಸೇವಾ ಮಾದರಿ. ಒಟ್ಟು ಚಿಕಿತ್ಸೆಯಲ್ಲಿ ಶೇ. 75 ರಷ್ಟು ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು. ಉಳಿದ ಶೇ. 25 ರಿಂದ 30 ರಷ್ಟು ಹಾಸಿಗೆಗಳಿಗೆ ಮಾತ್ರ ಕನಿಷ್ಠ ಪ್ರಮಾಣದ ಚಿಕಿತ್ಸಾ ವೆಚ್ಚವನ್ನು ವಿಧಿಸಲಾಗುವುದು. ಇದು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವರದಾನವಾಗಲಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಸಂಖ್ಯೆ ಆತಂಕಕಾರಿಯಾಗಿದೆ. ಅಂಕಿ-ಅಂಶಗಳ ಪ್ರಕಾರ, 5 ಸಾವಿರಕ್ಕೂ ಹೆಚ್ಚು ಮಂದಿ ಕಿಡ್ನಿ ಕಸಿಗಾಗಿ ಹಾಗೂ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ಲಿವರ್ (ಯಕೃತ್ತು) ಕಸಿಗಾಗಿ ನೋಂದಾಯಿಸಿಕೊಂಡು ಕಾಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯ ಜನರಿಗೆ ಎಟುಕದಂತಾಗಿದೆ. ಈ ಹೊಸ ಆಸ್ಪತ್ರೆಯು ಕಿಡ್ನಿ, ಲಿವರ್, ಹೃದಯ ಸೇರಿದಂತೆ ಎಲ್ಲಾ ರೀತಿಯ ಅಂಗಾಂಗ ಕಸಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಈ ಕೊರತೆಯನ್ನು ನೀಗಿಸಲಿದೆ ಎಂದು ಹೇಳಿದರು.

ಈ ಬೃಹತ್ ಆಸ್ಪತ್ರೆಯನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 300 ಹಾಸಿಗೆಗಳ ಸೌಲಭ್ಯವನ್ನು ಸಿದ್ಧಪಡಿಸಿ ಚಿಕಿತ್ಸೆ ಆರಂಭಿಸಲಾಗುವುದು. ಐದು ವರ್ಷಗಳ ಅವಧಿಯಲ್ಲಿ ಆಸ್ಪತ್ರೆಯ ಒಟ್ಟು ಸಾಮರ್ಥ್ಯವನ್ನು 1 ಸಾವಿರ ಹಾಸಿಗೆಗಳಿಗೆ ಹೆಚ್ಚಿಸಲಾಗುವುದು. ಇದು ಪೂರ್ಣಗೊಂಡಾಗ, ದೇಶದಲ್ಲೇ ಅಂಗಾಂಗ ಕಸಿ ಕ್ಷೇತ್ರಕ್ಕೆ ಮೀಸಲಾದ ಅತಿದೊಡ್ಡ ಚಾರಿಟಬಲ್ ಆಸ್ಪತ್ರೆಗಳಲ್ಲಿ ಒಂದಾಗಲಿದೆ.

Read More
Next Story