
ನರೇಗಾ ಮರುನಾಮಕರಣಕ್ಕೆ ರಾಜ್ಯ ಕೆಂಡಾಮಂಡಲ: ‘ಜಿ ರಾಮ್ ಜಿ’ ಯೋಜನೆ ವಿರುದ್ಧ ಸಿದ್ದರಾಮಯ್ಯ ಸಮರ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MG-NREGA) ಬದಲಾವಣೆಗೆ ಕೇಂದ್ರದ ನಿರ್ಧಾರದ ವಿರುದ್ಧ ಕರ್ನಾಟಕ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಎಂಬ ಐತಿಹಾಸಿಕ ಕಾಯ್ದೆಯ ಆಶಯಕ್ಕೆ ಧಕ್ಕೆ ತರುವಂತಹ ಕೇಂದ್ರ ಸರ್ಕಾರದ ಹೊಸ ನಿರ್ಧಾರದ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಸಮರ ಸಾರಿದೆ. ಎಂಜಿ-ನರೇಗಾ ಯೋಜನೆಯನ್ನು ಮಾರ್ಪಾಡು ಮಾಡಿ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)’ (ವಿಬಿ ಜಿ ರಾಮ್ ಜಿ) ಹೆಸರಿನಲ್ಲಿ ಜಾರಿಗೆ ತಂದಿರುವ ಕೇಂದ್ರದ ಈ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯು ತೀವ್ರವಾಗಿ ಖಂಡಿಸಿದೆ. ಯೋಜನೆಯನ್ನು ಅನುಷ್ಠಾನ ಮಾಡದೆ ತಿರಸ್ಕರಿಸಬೇಕೆ? ಅಥವಾ ತಿದ್ದುಪಡಿಗೆ ಕೇಂದ್ರಕ್ಕೆ ಪರಿಷ್ಕೃತ ಪ್ರಸ್ತಾವನೆ ಮಂಡಿಸಬೇಕೆ? ಎಂಬುದು ಸೇರಿದಂತೆ ಮುಂದಿನ ರೂಪುರೇಷೆ ಬಗ್ಗೆ ತೀರ್ಮಾನಿಸುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆ ಬಿಡಲು ನಿರ್ಧರಿಸಲಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಎಂಜಿ-ನರೇಗಾ ಯೋಜನೆಯು ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗದ ಹಕ್ಕನ್ನು ನೀಡುವ ಕಾಯ್ದೆಯಾಗಿದೆ. ಆದರೆ, ಈಗ ಕೇಂದ್ರ ತರಲು ಹೊರಟಿರುವ ಬದಲಾವಣೆಗಳು ಈ ಹಕ್ಕನ್ನು ಕಸಿದುಕೊಳ್ಳುವ ಅಥವಾ ಯೋಜನೆಯನ್ನು ದುರ್ಬಲಗೊಳಿಸುವ ಸಂಚು ಎಂದು ಸಂಪುಟ ಸಭೆ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರವನ್ನು ಸಭೆಯು ಒಕ್ಕೊರಲಿನಿಂದ ಖಂಡಿಸಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಹಿಂದೆ ಯುಪಿಎ ಸರ್ಕಾರವು ಎಂಜಿ-ನರೇಗಾ ಯೋಜನೆಯನ್ನು ಜಾರಿಗೆ ತಂದಾಗ, ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ನೀಡಲಾಗಿತ್ತು. ಅಧಿಕಾರ ವಿಕೇಂದ್ರೀಕರಣ ಈ ಯೋಜನೆಯ ಜೀವಾಳವಾಗಿತ್ತು. ಆದರೆ, ಹೊಸ ‘ಜಿ ರಾಮ್ ಜಿ’ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆರೋಪ ಮಾಡಿದರು.
ಯಾವ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಡೆಯಬೇಕು ಮತ್ತು ಯಾವ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಈಗ ಕೇಂದ್ರ ಸರ್ಕಾರವೇ ನಿರ್ಧರಿಸಲು ಹೊರಟಿದೆ. ಇದು ಸ್ಥಳೀಯ ಆಡಳಿತದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕ್ರಮವಾಗಿದೆ. ಯೋಜನೆಯ ಅನುದಾನ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆಗೆ ಮುಂದಾಗಿದೆ. ಇದುವರೆಗೆ ಎಂಜಿ-ನರೇಗಾ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಶೇ. 90-10 ರ ಅನುಪಾತದಲ್ಲಿ ಅನುದಾನ ಹಂಚಿಕೆಯಾಗುತ್ತಿತ್ತು. ಆದರೆ, ಹೊಸ ಪ್ರಸ್ತಾವನೆಯಲ್ಲಿ ಈ ಅನುಪಾತವನ್ನು ಶೇ. 60-40 ಕ್ಕೆ ಇಳಿಸಲು ಕೇಂದ್ರ ನಿರ್ಧರಿಸಿದೆ. ಅಂದರೆ, ರಾಜ್ಯ ಸರ್ಕಾರಗಳು ಈಗ ಶೇ. 40 ರಷ್ಟು ಹಣವನ್ನು ಭರಿಸಬೇಕಾಗುತ್ತದೆ. ಈ ಮೂಲಕ ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಹೊರಿಸಿ, ಯೋಜನೆಯನ್ನು ವಿಫಲಗೊಳಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು?
ಈ ವಿವಾದಾತ್ಮಕ ಯೋಜನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ತಿರಸ್ಕರಿಸಬೇಕೇ ಅಥವಾ ತಿದ್ದುಪಡಿಗಾಗಿ ಕೇಂದ್ರಕ್ಕೆ ಮರು ಪ್ರಸ್ತಾವನೆಯನ್ನು ಸಲ್ಲಿಸಬೇಕೇ ಎಂಬ ಗೊಂದಲ ಸರ್ಕಾರದ ಮುಂದಿದೆ. ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿವೇಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಡಲಾಗಿದೆ.
ಇಂದು ಸಿಎಂ ಮಹತ್ವದ ಸುದ್ದಿಗೋಷ್ಠಿ
ಶನಿವಾರ ಮುಖ್ಯಮಂತ್ರಿಗಳು ಮಹತ್ವದ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಅದರಲ್ಲಿ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಪ್ರಕಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಕೇವಲ ಯೋಜನೆಯ ತಾಂತ್ರಿಕ ಅಂಶಗಳ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ, ಎಂಜಿ-ನರೇಗಾ ಹೆಸರನ್ನು ಅಳಿಸಿಹಾಕುವ ಕೇಂದ್ರದ ರಾಜಕೀಯ ಉದ್ದೇಶದ ವಿರುದ್ಧ ಅವರು ಧ್ವನಿ ಎತ್ತಲಿದ್ದಾರೆ. ಎಐಸಿಸಿಯು ಈಗಾಗಲೇ ‘ಜಿ ರಾಮ್ ಜಿ’ ವಿರುದ್ಧ ದೇಶವ್ಯಾಪಿ ಅಭಿಯಾನವನ್ನು ರೂಪಿಸಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ತನ್ನ ರಾಜಕೀಯ ವಿರೋಧದ ಕುರಿತು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಏಂದು ಮೂಲಗಳು ಹೇಳಿವೆ.
ಪೂರ್ತಿಯಾಗಿ ಯೋಜನೆ ತಿರಸ್ಕರಿಸಲಾಗುವುದಿಲ್ಲ: ಎಚ್.ಕೆ.ಪಾಟೀಲ್
ಸರ್ಕಾರ ನಿಲುವಿನ ಕುರಿತು ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕೇಂದ್ರದ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸುಲಭವಲ್ಲ. "ಯೋಜನೆಯನ್ನು ಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಆದರೆ, ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಅಧಿಕಾರ ಕೇಂದ್ರೀಕರಣ ಮಾಡುವ ಈ ಪ್ರಸ್ತಾವನೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಎಂಜಿ-ನರೇಗಾ ಯೋಜನೆಯನ್ನೇ ನೆಚ್ಚಿಕೊಂಡಿವೆ. ಬರಗಾಲದಂತಹ ಸಂದರ್ಭಗಳಲ್ಲಿ ಈ ಯೋಜನೆ ಗ್ರಾಮೀಣ ಜನರಿಗೆ ಆಸರೆಯಾಗಿದೆ. ಈಗ ಯೋಜನೆಯ ಸ್ವರೂಪ ಬದಲಾದರೆ, ಕೆಲಸ ಪಡೆಯುವುದು ಕಷ್ಟವಾಗಬಹುದು ಮತ್ತು ಅನುದಾನದ ಕೊರತೆಯಿಂದ ಕಾಮಗಾರಿಗಳು ಸ್ಥಗಿತಗೊಳ್ಳಬಹುದು ಎಂಬ ಆತಂಕ ಕಾರ್ಮಿಕ ವಲಯದಲ್ಲಿ ಮೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಈ ರಾಜಕೀಯ ಮತ್ತು ಆಡಳಿತಾತ್ಮಕ ಜಟಾಪಟಿಯು ಅಂತಿಮವಾಗಿ ಬಡ ಕಾರ್ಮಿಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ರಾಜ್ಯ ಸರ್ಕಾರವು ಒಂದು ಮಧ್ಯಮ ಮಾರ್ಗವನ್ನು ಹುಡುಕುತ್ತಿದೆಯೇ ಅಥವಾ ಕೇಂದ್ರದ ವಿರುದ್ಧ ನೇರ ಸಂಘರ್ಷಕ್ಕೆ ಇಳಿಯಲಿದೆಯೇ ಎಂಬುದು ಶನಿವಾರದ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಲಿದೆ.

