Changing the NREGA scheme is an attempt to destroy the rural economy: CM Siddaramaiah
x

ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು.

ನರೇಗಾ ಯೋಜನೆ ಬದಲಾವಣೆ, ಗ್ರಾಮೀಣ ಆರ್ಥಿಕತೆ ಹಾಳು ಮಾಡುವ ಹುನ್ನಾರ : ಸಿಎಂ ಸಿದ್ದರಾಮಯ್ಯ

ನರೇಗಾ ಯೋಜನೆಯಿಂದ ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ವಿಫಲಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ ಇದೊಂದು ಚಳುವಳಿ, ಸಮಾನ ಅವಕಾಶಗಳನ್ನು ಎಲ್ಲರಿಗೂ ಕೊಡಬೇಕು ಎನ್ನುವ ಸಿದ್ಧಾಂತ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಭಾನುವಾರ(ಡಿ.28) ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಿಂದ ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮ ಪಂಚಾಯಿತಿಯಿಂದ ರಾಜ್ಯ ಮಟ್ಟದವರೆಗೆ ಜನವರಿ 5 ರಿಂದ ನಿರಂತರವಾಗಿ ಆಂದೋಲನವನ್ನು ಪ್ರಾರಂಭಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಆರ್ಥಿಕತೆ ನಾಶ

ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು. ನರೇಗಾ ಕಾರ್ಯಕ್ರಮದಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು . ಕೇಂದ್ರ ಸರ್ಕಾರ ರಾಜ್ಯಗಳ ಅನುದಾನವನ್ನು ಕೊಡುತ್ತಿತ್ತು. ಈಗ ಹೊಸ ಕಾಯ್ದೆ ಜಾರಿಗೆ ತಂದು, 60:40 ಅನುಪಾತ ತೀರ್ಮಾನಿಸಿದ್ದಾರೆ. ರಾಜ್ಯಗಳ ಮೇಲೆ ಭಾರಿ ಹೊರೆಯನ್ನೇ ಹೊರೆಸುತ್ತಿದ್ದಾರೆ. ಇದನ್ನು ವಿಫಲಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.

ಸ್ವಾತಂತ್ರ್ಯ ಉಳಿಸಿಕೊಳ್ಳೋಣ

ಸತ್ಯಾಗ್ರಹ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ. ಬ್ರಿಟಿಷ್ ಅಧಿಕಾರಿ ಎ. ಒ ಹ್ಯೂಮ್ ಅವರು ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಪ್ರಾರಂಭಿಸಿ 148 ವರ್ಷಗಳಾಗಿವೆ. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾರಂಭವಾದ ಕಾಂಗ್ರೆಸ್ ನಾಗರಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ಆಡಳಿತಕ್ಕಾಗಿ ಒತ್ತಾಯಿಸಿತು. ಡಿ. 28 ಐತಿಹಾಸಿಕ ದಿನವಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್‌ಎಸ್‌ಎಸ್, ಹಿಂದೂ ಮಹಾ ಸಭಾ , ಬಿಜೆಪಿ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷ ಎಂದರು.

ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದಾಗಲೂ ಬಿಜೆಪಿ ಪಾಲ್ಗೊಳ್ಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ಬಿಜೆಪಿ ನಮಗೆ ದೇಶಭಕ್ತಿಯ ಪಾಠವನ್ನು ಹೇಳಿಕೊಡುತ್ತಾರೆ. ಅವರು ದೇಶಭಕ್ತರಂತೂ ಅಲ್ಲ. ದೇಶಭಕ್ತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ಒಬ್ಬ ನಾಯಕರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಈಗ ಮಹಾತ್ಮಾ ಗಾಂಧಿಯವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಗಾಂಧಿಯವರನ್ನು ಕೊಂದವರು ನಾಥುರಾಮ್ ಗೋಡ್ಸೆ. ಬಿಜೆಪಿ ಕಚೇರಿಯ ಮೇಲೆ ಇತ್ತೀಚಿನವರೆಗೆ ಭಾರತದ ಧ್ವಜವೂ ಹಾರಾಡುತ್ತಿರರಿಲ್ಲ. ಇವರಿಗೆ ದೇಶಕ್ಕೆ ಸ್ವಾತಂತ್ರ್ಯ ಬರುವುದೇ ಇಷ್ಟವಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಮಾಜ ಒಡೆಯುದೇ ಬಿಜೆಪಿಯ ಸಾಧನೆ

ಕಾಂಗ್ರೆಸ್‌ನವರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಆಧುನಿಕ ಭಾರತದ ರೂವಾರಿ ಜವಾಹರ್ ಲಾಲ್ ನೆಹರೂ ಅವರು. ಜೈ ಜವಾನ್ ಜೈ ಕಿಸಾನ್ ಘೋಷಣೆ ನೀಡಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ, ಸಾಮಾಜಿಕ ನ್ಯಾಯ ರೂವಾರಿ ಇಂದಿರಾ ಗಾಂಧಿ, ಗರೀಬಿ ಹಠಾವೋ ಎನ್ನುವುದು ಕೇವಲ ಘೋಷಣೆಯಲ್ಲ. ಅದಕ್ಕೆ ಪೂರಕವಾಗಿ 20 ಅಂಶದ ಕಾರ್ಯಕ್ರಮವನ್ನು ನೀಡಿದರು. ಆಹಾರದಲ್ಲಿ ಸ್ವಾವಲಂಬನೆ ಬರಲು ಇಂದಿರಾ ಗಾಂಧಿ ಹಾಗೂ ಜಗಜೀವನ ರಾಮ್ ಕಾರಣ. 21 ನೇ ಶತಮಾನಕ್ಕೆ ಸೂಕ್ತ ಕೊಡುಗೆಗಳನ್ನು ನೀಡಿದ್ದು ರಾಜೀವ್ ಗಾಂಧಿ. ಬಿಜೆಪಿಯ ಸಾಧನೆ ಏನೆಂದರೆ, ದೇಶ ಮತ್ತು ಸಮಾಜ ಒಡೆಯುವ ಕೆಲಸ. ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಮನುವಾದಿಗಳು. ಚಾತುರ್ವರ್ಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದೆ ಬಿಜೆಪಿ. ಸಂವಿಧಾನ ರಚನೆಯಾದ ಮೇಲೆ ಸಮಾನ ಅವಕಾಶಗಳು ದೊರಕುವಂತಾಯಿತು ಎಂದರು.

ಸಾಮಾಜಿಕ ನ್ಯಾಯ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

ನೀತಿಯೇ ಇಲ್ಲದವರು ಯೋಜನಾ ಆಯೋಗದ ಹೆಸರನ್ನು ನೀತಿ ಆಯೋಗ ಎಂದು ಬದಲಾಯಿಸಿದರು. ದೇಶದಲ್ಲಿ ಬದಲಾವಣೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳು ಎಲ್ಲರಿಗೂ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ. ಹಿಂದುಳಿದವರಿಗೆ , ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾದ ಮೀಸಲಾತಿ ಇರಬಾರದು ಎಂದು ಬಿಜೆಪಿ ಉಪಾಧ್ಯಕ್ಷ ರಾಮ ಜೋಯಿಸ್ ಸುಪ್ರೀಂ ಕೋರ್ಟಿಗೆ ಹೋದರು. ಮೀಸಲಾತಿ ಕೊಟ್ಟಿರುವುದು ಸಾಂವಿಧಾನಿಕವಾಗಿದೆ ಎಂದು ಸುಪ್ರೀಂ ತೀರ್ಪು ನೀಡಿತ್ತು. ದೇಶಕ್ಕೆ ಬಿಜೆಪಿಯ ಮತಗಳ್ಳತನ ಬಿಟ್ಟರೆ ಬೇರೇನೂ ಕೊಡುಗೆ ನೀಡಿಲ್ಲ. ಸುಳ್ಳೇ ಅವರ ಮನೆ ದೇವರು ಎಂದು ಕಿಡಿಕಾರಿದರು


Read More
Next Story