
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ 'ಶುಷ್ಕ ಚಳಿಯ' ಎಚ್ಚರ: ಹಲವು ಜಿಲ್ಲೆಗಳಲ್ಲಿ ಶೀತ ಮಾರುತದ ಎಚ್ಚರಿಕೆ
ರಾಜ್ಯದಾದ್ಯಂತ, ಅದರಲ್ಲೂ ಮುಖ್ಯವಾಗಿ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದ್ದು, ಮುಂದಿನ ಮೂರು ದಿನಗಳ ಕಾಲ ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶೀತ ಅಲೆಗಳ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಹಲವು ದಿನಗಳಿಂದ ಮುಂದುವರಿದಿರುವ ಒಣ ಹವೆ ಮತ್ತು ಮೈಕೊರೆಯುವ ಚಳಿಯಿಂದ ಜನಜೀವನ ತತ್ತರಿಸಿದೆ. ರಾಜ್ಯದಾದ್ಯಂತ, ಅದರಲ್ಲೂ ಮುಖ್ಯವಾಗಿ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದ್ದು, ಮುಂದಿನ ಮೂರು ದಿನಗಳ ಕಾಲ ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶೀತ ಅಲೆಗಳ ಎಚ್ಚರಿಕೆ ನೀಡಿದೆ.
ಉತ್ತರ ಒಳನಾಡು ಭಾಗದ ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರ್ಗಿ, ರಾಯಚೂರು, ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೀತ ಮಾರುತಗಳ ಅಬ್ಬರ ಜೋರಾಗುವ ಸಾಧ್ಯತೆ ಇದ್ದು, ನಂತರದ ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಣನೀಯ ಬದಲಾವಣೆ ಆಗುವ ಮುನ್ಸೂಚನೆ ಇಲ್ಲ. ಅಂದರೆ, ಚಳಿಯ ಪ್ರಮಾಣ ಇದೇ ರೀತಿ ಮುಂದುವರಿಯಲಿದೆ. ಈ ಭಾಗದ ಗದಗ, ಧಾರವಾಡ, ಹಾವೇರಿ, ಕೊಪ್ಪಳ, ಮತ್ತು ಬಳ್ಳಾರಿ ಸೇರಿ ಒಟ್ಟು 13 ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣ ಹವೆ ಕಾಣಿಸಿಕೊಳ್ಳುತ್ತಿದ್ದು, ಇಂದು ಕೂಡ ಅದೇ ಸ್ಥಿತಿ ಇರಲಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಒಣ ಹವೆಯ ವಾತಾವರಣವೇ ಇರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲೂ ಶುಷ್ಕ ಹವಾಮಾನ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

