
ಬೆಂಗಳೂರು ಚಳಿ
ಚಳಿಯಲ್ಲಿ ನಡುಗಿದ ಬೆಂಗಳೂರು; ನಗರದಲ್ಲಿ 18°C ಗಿಂತ ಕಡಿಮೆ ತಾಪಮಾನ
ಪ್ರಸ್ತುತ ಕನಿಷ್ಠ ಉಷ್ಣಾಂಶವು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿದ್ದು, ರಸ್ತೆಗಳು ಮತ್ತು ಕಟ್ಟಡಗಳು ಸ್ಪಷ್ಟವಾಗಿ ಕಾಣದಂತಾಗಿವೆ.
ಬೆಂಗಳೂರು ನಗರದಲ್ಲಿ ಚಳಿಯ ಆರ್ಭಟ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ತಾಪಮಾನ ಕುಸಿತ ಕಂಡುಬಂದಿದೆ. ಮುಂಜಾನೆ ಮತ್ತು ಸಂಜೆ ಹೊತ್ತು ತೀವ್ರ ಚಳಿ ಜನರನ್ನು ನಡುಗಿಸುತ್ತಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ನಗರದ ಪ್ರಮುಖ ಹವಾಮಾನ ಕೇಂದ್ರಗಳಲ್ಲಿ ತಾಪಮಾನವು ವಾಡಿಕೆಗಿಂತ ಕಡಿಮೆಯಾಗಿದೆ.
ನಗರದ ಕೇಂದ್ರ ಭಾಗದಲ್ಲಿಯೇ ಹಗಲಿನ ಗರಿಷ್ಠ ತಾಪಮಾನ 26.8°Cಗೆ ಇಳಿದಿದೆ. ಕನಿಷ್ಠ ತಾಪಮಾನವು 18.0°Cಗೆ ಇಳಿದಿರುವುದು ರಾತ್ರಿ ಮತ್ತು ಮುಂಜಾನೆ ಚಳಿಯ ತೀವ್ರತೆ ಹೆಚ್ಚಿಸಿದೆ.
ತೀವ್ರ ಚಳಿಗೆ ನಲುಗಿದ ಏರ್‌ಪೋರ್ಟ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಅತಿ ಹೆಚ್ಚು ಚಳಿ ದಾಖಲಾಗಿದ್ದು, ಕನಿಷ್ಠ ತಾಪಮಾನವು ಕೇವಲ 17.1°Cಗೆ ಇಳಿದಿದೆ. ಗರಿಷ್ಠ ತಾಪಮಾನವೂ 27.7°Cಗೆ ಕುಸಿದಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲೂ ತಣ್ಣನೆಯ ವಾತಾವರಣವಿದ್ದು, ಗರಿಷ್ಠ 27.0°C ಮತ್ತು ಕನಿಷ್ಠ 17.6°C ತಾಪಮಾನ ವರದಿಯಾಗಿದೆ. ಪ್ರಸ್ತುತ ಕನಿಷ್ಠ ಉಷ್ಣಾಂಶವು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿದೆ. ರಸ್ತೆಗಳು ಮತ್ತು ಕಟ್ಟಡಗಳು ಸ್ಪಷ್ಟವಾಗಿ ಕಾಣದಂತಾಗಿವೆ. ನಗರಗಳ ಬಹುತೇಕ ಪ್ರದೇಶಗಳಲ್ಲಿ ಇದೇ ರೀತಿಯ ವಾತಾವರಣವಿದ್ದು, ಜನರು ಚಳಿಯಲ್ಲಿ ನಡುಗುವಂತಾಗಿದೆ.
ಈ ವರ್ಷ 'ಹೆಚ್ಚು ಚಳಿ'ಯ ಮುನ್ಸೂಚನೆ
ಈ ವರ್ಷ ಕಳೆದ ವರ್ಷಕ್ಕಿಂತಲೂ ಹೆಚ್ಚು ಚಳಿ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಮತ್ತು ಉತ್ತರ ಒಳನಾಡಿಗೆ ಕಳೆದ ಬಾರಿಗಿಂತ ಹೆಚ್ಚಿನ ಚಳಿ ಕಾಡುವ ಸಾಧ್ಯತೆ ಇದೆ. ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಮತ್ತು ವಾತಾವರಣದ ಬದಲಾವಣೆಯಿಂದಾಗಿ ಚಳಿಯ ಹೆಚ್ಚಳವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

