
ಸಾಂದರ್ಭಿಕ ಚಿತ್ರ
ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಶಿವಮೊಗ್ಗದಲ್ಲಿ ಎಫ್‌ಐಆರ್ ದಾಖಲು
ತುಮಕೂರು ಡಿಡಿಪಿಯು ಅವರಿಗೆ ಲಭ್ಯವಾದ ಪ್ರಶ್ನೆಪತ್ರಿಕೆಯ ಪ್ರತಿಯನ್ನು ಪರಿಶೀಲಿಸಿದಾಗ, ಅದರಲ್ಲಿರುವ 'ವಾಟರ್‌ಮಾರ್ಕ್' ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ್ದು ಎಂಬುದು ದೃಢಪಟ್ಟಿದೆ.
ರಾಜ್ಯದಾದ್ಯಂತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳೆ ಗಣಿತ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳವಾರ ನಡೆದ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯು ಶಿವಮೊಗ್ಗ ಜಿಲ್ಲೆಯಿಂದ ಸೋರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ.
ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಮಂಗಳವಾರ ನಡೆದ ಗಣಿತ ವಿಷಯದ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎನ್ನಲಾಗಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯ ಪ್ರತಿಯನ್ನು ಜಾಗೃತ ಸಾರ್ವಜನಿಕರೊಬ್ಬರು ತುಮಕೂರು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ (ಡಿಡಿಪಿಯು) ಕಳುಹಿಸಿಕೊಟ್ಟಿದ್ದರು. ಈ ಮೂಲಕ ಪರೀಕ್ಷಾ ವ್ಯವಸ್ಥೆಯ ಲೋಪ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ವಾಟರ್‌ಮಾರ್ಕ್ ಮೂಲಕ ಪತ್ತೆ
ತುಮಕೂರು ಡಿಡಿಪಿಯು ಅವರಿಗೆ ಲಭ್ಯವಾದ ಪ್ರಶ್ನೆಪತ್ರಿಕೆಯ ಪ್ರತಿಯನ್ನು ಪರಿಶೀಲಿಸಿದಾಗ, ಅದರಲ್ಲಿರುವ 'ವಾಟರ್‌ಮಾರ್ಕ್' ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ್ದು ಎಂಬುದು ದೃಢಪಟ್ಟಿದೆ. ತಕ್ಷಣವೇ ಅವರು ಈ ಮಾಹಿತಿಯನ್ನು ಶಿವಮೊಗ್ಗ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲೆ ಅವರಿಗೆ ರವಾನಿಸಿದ್ದಾರೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಶಿವಮೊಗ್ಗ ಡಿಡಿಪಿಯು, ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
ಪದವಿಪೂರ್ವ ಶಿಕ್ಷಣ ಇಲಾಖೆಯ ದೂರಿನನ್ವಯ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಸೈಬರ್ ಕ್ರೈಂ ವಿಭಾಗದ ನೆರವು ಪಡೆಯುವ ಸಾಧ್ಯತೆಯಿದೆ. ಪ್ರಶ್ನೆಪತ್ರಿಕೆಗಳ ಬಂಡಲ್ ಒಡೆದಿದ್ದು ಎಲ್ಲಿ, ಮತ್ತು ಅದನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಯಾರು ಎಂಬ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯಲ್ಲೇ ಇಂತಹ ಅವ್ಯವಹಾರ ನಡೆದಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ವಲಯದಿಂದ ಒತ್ತಾಯ ಕೇಳಿಬಂದಿದೆ.

