
ಸಿಬಿಎಸ್ಇ ಪರೀಕ್ಷೆ - ಪ್ರಾತಿನಿಧಿಕ ಚಿತ್ರ
ಸಿಬಿಎಸ್ಇ 10-12ನೇ ತರಗತಿ ಪರೀಕ್ಷೆ; ಪರಿಷ್ಕೃತ ದಿನಾಂಕ ಪ್ರಕಟ
ಪರೀಕ್ಷಾ ದಿನಾಂಕದ ಕುರಿತು ಯಾವುದೇ ಗೊಂದಲ ಅಥವಾ ವದಂತಿ ಹರಡದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ರವಾನಿಸಲು ಶಾಲಾ ಆಡಳಿತ ಮಂಡಳಿಗಳಿಗೆ ಸಿಬಿಎಸ್‌ಇ ಆದೇಶಿಸಿದೆ
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
2026ರ ಮಾರ್ಚ್ 3 ರಿಂದ ಆರಂಭವಾಗಬೇಕಿದ್ದ 10ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 11ರಿಂದ ಆರಂಭಿಸಲು ಸಿಬಿಎಸ್ಇ ಮಂಡಳಿ ನಿರ್ಧರಿಸಿದೆ. ಅದೇ ರೀತಿ, ಮಾರ್ಚ್ 3ರಿಂದ ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆಯನ್ನು ಏಪ್ರಿಲ್ 10ಕ್ಕೆ ಮರುನಿಗದಿ ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿ ಕುರಿತಂತೆ ಸಿಬಿಎಸ್ಇ ಮಂಡಳಿ ಎಲ್ಲಾ ಸಂಯೋಜಿತ ಶಾಲೆಗಳಿಗೆ ಸೂಚನೆ ನೀಡಿದ್ದು, ಪರೀಕ್ಷಾ ದಿನಾಂಕದ ಕುರಿತು ಯಾವುದೇ ಗೊಂದಲ ಅಥವಾ ವದಂತಿ ಹರಡದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ರವಾನಿಸಲು ಆದೇಶಿಸಿದೆ.
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ದಿನಾಂಕ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ ಮಾಡಲಾಗುತ್ತಿದ್ದು, ಹೊಸ ದಿನಾಂಕಗಳು ವಿದ್ಯಾರ್ಥಿಗಳ ಪ್ರವೇಶ ಪತ್ರಗಳಲ್ಲಿಯೂ ಪ್ರಕಟವಾಗಲಿವೆ ಎಂದು ಮಂಡಳಿ ಹೇಳಿದೆ.
ಇದೇ ವೇಳೆ, ಪರೀಕ್ಷಾ ಹಾಜರಾತಿಗೆ ಸಂಬಂಧಿಸಿದಂತೆ ಸಿಬಿಎಸ್ಇ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಪ್ರಮುಖ ಪರೀಕ್ಷೆಗಳಿಗೆ ಹಾಜರಾಗಲು ಶೇ 75ರಷ್ಟು ಹಾಜರಾತಿ ಕಡ್ಡಾಯ. ಆದರೆ, ಗಂಭೀರ ವೈದ್ಯಕೀಯ ಸಮಸ್ಯೆ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆ ಹಾಗೂ ತುರ್ತು ಪರಿಸ್ಥಿತಿಗಳಂತಹ ಅಸಾಧಾರಣ ಸಂದರ್ಭಗಳಲ್ಲಿ ಶೇ 25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುತ್ತದೆ ಎಂದು ಸಿಬಿಎಸ್ಇ ಸ್ಪಷ್ಟಪಡಿಸಿದೆ.

