Bangalore Sub-Urban Rail Project | ಮಲ್ಲಿಗೆ ಮಾರ್ಗದಲ್ಲಿ ಮೊದಲ ರೈಲು ನಿಲ್ದಾಣದ ಕಾಮಗಾರಿ ಆರಂಭ
x

Bangalore Sub-Urban Rail Project | ಮಲ್ಲಿಗೆ ಮಾರ್ಗದಲ್ಲಿ ಮೊದಲ ರೈಲು ನಿಲ್ದಾಣದ ಕಾಮಗಾರಿ ಆರಂಭ

ನವೀಕರಿಸಬಹುದಾದ ಇಂಧನ ಬಳಕೆ ಕ್ರಮಗಳ ಮೂಲಕ ಪ್ರತಿ ನಿಲ್ದಾಣದ ಶೇ. 20-30ರಷ್ಟು ವಿದ್ಯುತ್ ಅಗತ್ಯತೆ ಪೂರೈಸಲಾಗುವುದು ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.


Click the Play button to hear this message in audio format

ಹಲವು ಅಡೆತಡೆಗಳ ಬಳಿಕ ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ರೈಲು ನಿಲ್ದಾಣದ ಕಾಮಗಾರಿ ಆರಂಭವಾಗಿದೆ. ಹೈದರಾಬಾದ್ ಮೂಲದ ನಿರ್ಮಾಣ ಕಂಪನಿ ಎನ್‌ಸಿಸಿ, (ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ) 'ಮಲ್ಲಿಗೆ ಮಾರ್ಗ'ದಲ್ಲಿನ (ಬೈಯ್ಯಪ್ಪನಹಳ್ಳಿ-ಚಿಕ್ಕ ಬಾಣಾವರ ಕಾರಿಡಾರ್) ಕಸ್ತೂರಿ ನಗರ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದೆ.

ಕೆ-ರೈಡ್ ಮಲ್ಲಿಗೆ ಮಾರ್ಗದಲ್ಲಿ ಒಟ್ಟು ಹನ್ನೆರಡು ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್‌ ಕರೆದಿದೆ. ಇದೇ ವರ್ಷ ಜ.3 ರಂದು ಎನ್‌ಸಿಸಿ ಕಂಪನಿಯು 501 ಕೋಟಿ ರೂ. ಮೊತ್ತದಲ್ಲಿ ಬೆನ್ನಿಗಾನಹಳ್ಳಿ (ಎಲಿವೇಟೆಡ್ ಇಂಟರ್‌ಚೇಂಜ್), ಕಸ್ತೂರಿ ನಗರ, ಸೇವಾನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ ಮತ್ತು ಮತ್ತಿಕೆರೆ ನಿಲ್ದಾಣಗಳ ನಿರ್ಮಾಣದ ಗುತ್ತಿಗೆ ಪಡೆದಿತ್ತು.


ಪರಿಸರಸ್ನೇಹಿ ನಿಲ್ದಾಣ ನಿರ್ಮಾಣ

"ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಸೇತುವೆಗಳ ಮೇಲಿನ ಸ್ಟೀಲ್ ಮೆಟ್ಟಿಲುಗಳು, ಛಾವಣಿಯ ರಚನೆಗಳು ಮತ್ತು ನಿಲ್ದಾಣದ ಮುಂಭಾಗವನ್ನು ವಾಸ್ತುಶಿಲ್ಪಗಳಿಂದ ವಿನ್ಯಾಸಗೊಳಿಸುವ ಜವಾಬ್ದಾರಿ ಹೊತ್ತಿದೆ.

ನಿಲ್ದಾಣಗಳು ಸೌರ ಫಲಕ ಅಳವಡಿಕೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಹೊಂದಲಿವೆ. ನವೀಕರಿಸಬಹುದಾದ ಇಂಧನ ಕ್ರಮಗಳ ಮೂಲಕ ಪ್ರತಿ ನಿಲ್ದಾಣದ ಶೇ 20-30ರಷ್ಟು ವಿದ್ಯುತ್ ಅಗತ್ಯತೆ ಪೂರೈಸಲಿವೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ. ಪರಿಸರದ ಮೇಲಿನ ಪರಿಣಾಮ ಕನಿಷ್ಠಗೊಳಿಸಲು ನಿಲ್ದಾಣಗಳನ್ನು ಐಬಿಜಿಸಿ ಪ್ಲಾಟಿನಂ ಹಸಿರು ಪ್ರಮಾಣೀಕರಣ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತದೆ.

9 ಕೋಚ್‌ಗಳ ವಿನ್ಯಾಸ, ಭಾರೀ ವಿಳಂಬ

ಸಬ್‌ ಅರ್ಬನ್‌ ರೈಲು ಯೋಜನೆಯಲ್ಲಿ 3, 6 ಅಥವಾ 9 ಕೋಚ್‌ಗಳ ರೈಲುಗಳಿಗೆ ಅವಕಾಶ ಕಲ್ಪಿಸಬೇಕು ಎಂಬ ಚರ್ಚೆ ನಡೆದಿತ್ತು. ಆದರೆ, 2019 ರಲ್ಲಿ ಅಂತಿಮಗೊಳಿಸಲಾದ ವಿಸ್ತೃತ ಯೋಜನಾ ವರದಿ ಪ್ರಕಾರ, ನಿಲ್ದಾಣಗಳನ್ನು ಒಂಬತ್ತು ಕೋಚ್‌ಗಳ ರೈಲುಗಳಿಗೆ ಅವಕಾಶ ಕಲ್ಪಿಸುವಂತೆ ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ.

ಪ್ರಧಾನಿ ಭರವಸೆ

ಮುಂಬೈನ ಉಪನಗರ ರೈಲು ಸೇವೆಗೆ ಸಮಾನವಾಗಿ ಬೆಂಗಳೂರಿನಲ್ಲಿ ರೈಲು ಸೇವೆ ಆರಂಭಿಸಲು 1983 ರಲ್ಲಿ ಮೊದಲ ಬಾರಿಗೆ ಈ ಯೋಜನೆ ಪ್ರಸ್ತಾಪಿಸಲಾಗಿತ್ತು. 2019 ರ ಕೇಂದ್ರ ಬಜೆಟ್‌ನಲ್ಲಿ ಇದರ ಪ್ರಸ್ತಾಪವಾಗಿತ್ತು. ಈ ಯೋಜನೆಗೆ ಔಪಚಾರಿಕವಾಗಿ 2020 ಆಗಸ್ಟ್ 21 ರಂದು ಆರು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಅನುಮೋದಿಸಲಾಯಿತು. ಜೂನ್ 2022 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ 148 ಕಿ.ಮೀ. ಉದ್ದದ ರೈಲು ಮಾರ್ಗವನ್ನು 40 ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. 2026 ಡಿಸೆಂಬರ್‌ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು.

ಆದರೆ, ಇಲ್ಲಿಯವರೆಗೂ ಕೇವಲ ಎರಡು ಕಾರಿಡಾರ್‌ಗಳಲ್ಲಿ ಮಾತ್ರ ಕಾಮಗಾರಿ ಆರಂಭಗೊಂಡಿದೆ. ಕಾರಿಡಾರ್ 2 (ಮಲ್ಲಿಗೆ ಮಾರ್ಗ) ರಲ್ಲಿ ಶೇ. 30ರಷ್ಟು ಮತ್ತು ಕಾರಿಡಾರ್ 4 (ಕನಕ ಮಾರ್ಗ) ರಲ್ಲಿ ಶೇ. 10ರಷ್ಟು ಮಾತ್ರ ಕೆಲಸ ಮುಗಿದಿದ್ದು, ಯೋಜನೆಯ ಬಹುಭಾಗ ಬಾಕಿ ಇದೆ. ಈ ಮಧ್ಯೆ, ಎಲ್‌ ಅಂಡ್‌ ಟಿ ಕಂಪನಿಯು ಯೋಜನೆಯಿಂದ ಹೊರ ನಡೆದಿದ್ದು, ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

Read More
Next Story