Bangalore Sub-Urban Rail Project | ಎಲ್‌&ಟಿ, ಕೆ-ರೈಡ್‌ ತಿಕ್ಕಾಟದಲ್ಲಿ ಉಪನಗರ ರೈಲು ಯೋಜನೆ ವಿಳಂಬ, ಏನಿದು ವಿವಾದ?
x

Bangalore Sub-Urban Rail Project | ಎಲ್‌&ಟಿ, ಕೆ-ರೈಡ್‌ ತಿಕ್ಕಾಟದಲ್ಲಿ ಉಪನಗರ ರೈಲು ಯೋಜನೆ ವಿಳಂಬ, ಏನಿದು ವಿವಾದ?

ಬೆಂಗಳೂರು ಉಪನಗರ ಯೋಜನೆ ಒಪ್ಪಂದ ರದ್ದುಪಡಿಸಿದ ಎಲ್&ಟಿ ಸಂಸ್ಥೆಯ ಕ್ರಮಕ್ಕೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ ಪ್ರೈಸಸ್‌ (K-RIDE) ಆಕ್ಷೇಪ ವ್ಯಕ್ತಪಡಿಸಿದೆ.


ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲ್ವೆ ಯೋಜನೆಗೆ (ಬಿಎಸ್‌ಆರ್‌ಪಿ) ಭೂಸ್ವಾಧೀನದ ಗ್ರಹಣ ಹಿಡಿದಿದೆ. ಸಮರ್ಪಕ ಭೂಮಿ, ಸೌಕರ್ಯ ಒದಗಿಸುತ್ತಿಲ್ಲ ಎಂದು ದೂರಿ ಎಲ್‌&ಟಿ ಸಂಸ್ಥೆ ಯೋಜನೆಯಿಂದಲೇ ಹೊರನಡೆದಿದೆ. ಅದಕ್ಕೆ ಪ್ರತಿಯಾಗಿ ಎಲ್‌&ಟಿ ಆರೋಪಗಳಿಗೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ತಿರುಗೇಟು ಸಹ ನೀಡಿದೆ.

ಕೆ-ರೈಡ್‌ ಹಾಗೂ ಎಲ್‌&ಟಿ ನಡುವಿನ ಬಿಕ್ಕಟ್ಟು ಇದೀಗ ಯೋಜನೆಯನ್ನು ಮತ್ತಷ್ಟು ವಿಳಂಬಗೊಳಿಸುವ ಆತಂಕ ಸೃಷ್ಟಿಸಿದೆ.

2027ರೊಳಗೆ ಎರಡು ಮತ್ತು ನಾಲ್ಕನೇ ಕಾರಿಡಾರ್‌ ಕಾಮಗಾರಿ ಪೂರ್ಣಗೊಳಿಸಲು ಎಲ್‌ &ಟಿಗೆ ಗಡುವು ನೀಡಲಾಗಿತ್ತು. ಈಗ ಗುತ್ತಿಗೆಯನ್ನೇ ಕಂಪೆನಿ ರದ್ದು ಮಾಡಿರುವುದು ಸಂಚಲನ ಮೂಡಿಸಿದೆ.

ಎಲ್‌&ಟಿ ಸಂಸ್ಥೆ 2022ರಲ್ಲಿ ಎರಡು ಹಾಗೂ ನಾಲ್ಕನೇ ಕಾರಿಡಾರ್‌ ಯೋಜನೆಗೆ ಒಪ್ಪಂದ ಮಾಡಿಕೊಂಡಿತ್ತು. ಭೂಸ್ವಾಧೀನ ವಿಳಂಬ ಹಾಗೂ ಕೆ-ರೈಡ್ ಅಸಹಕಾರದ ಕಾರಣ ಎಲ್&ಟಿ ಒಪ್ಪಂದ ರದ್ದು ಮಾಡಿಕೊಂಡಿದೆ.

ಎಲ್‌&ಟಿ ಆರೋಪವೇನು?

ಬೆಂಗಳೂರು ಉಪನಗರ ರೈಲು ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ ಕೇವಲ ಶೇ 8.28ರಷ್ಟು ಮಾತ್ರ ಒದಗಿಸಿದೆ. ‌ಪೂರ್ಣ ಪ್ರಮಾಣದಲ್ಲಿ ಭೂಮಿ, ಮೂಲ ಸೌಕರ್ಯ ಒದಗಿಸಿಲ್ಲ. ಹಲವು ಬಾರಿ ಕೆ-ರೈಡ್‌ ಸಂಸ್ಥೆ ಭರವಸೆ ಕೊಟ್ಟರೂ ಭೂಮಿ ಒದಗಿಸಲಿಲ್ಲ. ನಾವು ಬೃಹತ್‌ ಯಂತ್ರೋಪಕರಣ ತರಿಸಿದರೂ ಭೂಮಿ ಅಲಭ್ಯತೆ ಕಾರಣದಿಂದಾಗಿ ಕಾಮಗಾರಿ ನಡೆಸಲಾಗಲಿಲ್ಲ.ಇದರಿಂದ ಯೋಜನಾ ವೆಚ್ಚ ದುಬಾರಿಯಾಗಿದೆ. ಗಡುವಿನಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಒಪ್ಪಂದ ರದ್ದು ಮಾಡುವುದಾಗಿ ಎಲ್&ಟಿ ಹೇಳಿದೆ.

ಪರಿಹಾರಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ ಎಲ್‌&ಟಿ

ಎಲ್‌&ಟಿ ಕಂಪನಿಯು ಇದೇ ಜುಲೈ 29 ರಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದಲ್ಲಿ ಕೆ-ರೈಡ್‌ ವಿರುದ್ಧ ಪ್ರಕರಣ ದಾಖಲಿಸಿದೆ. ಭೂಮಿ ಲಭ್ಯವಿಲ್ಲದೆ ಯೋಜನೆ ಮುಂದುವರಿಸಲು ಸಾಧ್ಯವಿಲ್ಲ ಎಂದು ವಾದಿಸಿ, ತಾನು ನೀಡಿದ್ದ ಬ್ಯಾಂಕ್ ಗ್ಯಾರಂಟಿಗಳನ್ನು ಕೆ-ರೈಡ್ ಬಳಸದಂತೆ ಮಧ್ಯಂತರ ತಡೆಯಾಜ್ಞೆ ತಂದಿತ್ತು.

ಭೂಸ್ವಾಧೀನ ವಿಳಂಬದಿಂದಾಗಿ ಎಲ್‌&ಟಿ ಕಂಪೆನಿಯು ಕಾರಿಡಾರ್- 2ಕ್ಕೆ ಸುಮಾರು 500 ಕೋಟಿ ರೂ.ಮತ್ತು ಕಾರಿಡಾರ್-4ಕ್ಕೆ ಸುಮಾರು 150 ಕೋಟಿ ರೂ.ಪರಿಹಾರ ಕೋರಿದೆ.

ಎಲ್‌ &ಟಿ ಕಂಪೆನಿಯು ಯೋಜನೆಯಿಂದ ಹೊರನಡೆದಿರುವ‌ ಕಾರಣ ಕಾರಿಡಾರ್ 2 ಮತ್ತು 4ರ ಕಾಮಗಾರಿಗಾಗಿ ಕೆ-ರೈಡ್ ಹೊಸದಾಗಿ ಟೆಂಡರ್ ಕರೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆ-ರೈಡ್‌ ಆಕ್ಷೇಪವೇನು?

ಬೆಂಗಳೂರು ಉಪನಗರ ಯೋಜನೆ ಒಪ್ಪಂದ ರದ್ದುಪಡಿಸಿದ ಎಲ್&ಟಿ ಸಂಸ್ಥೆಯ ಕ್ರಮಕ್ಕೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ ಪ್ರೈಸಸ್‌ (K-RIDE) ಆಕ್ಷೇಪ ವ್ಯಕ್ತಪಡಿಸಿದೆ.

ಒಪ್ಪಂದದಂತೆ ಎಲ್‌&ಟಿ ಸಂಸ್ಥೆ ನಿಗದಿತ ಸಮಯ ಅಂದರೆ 27 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಹೊಂದಿದೆ. ಎಲ್&ಟಿ ಮನವಿಯಂತೆ ಕಾರಿಡಾರ್-2 (ಚಿಕ್ಕಬಾಣಾವರದಿಂದ ಬೆನ್ನಿಗಾನಹಳ್ಳಿ) ಯೋಜನೆಯ ಗಡುವು ವಿಸ್ತರಿಸಿದ್ದು, 2026 ಸೆ.30 ರವರೆಗೆ ನಿಗದಿಯಾಗಿದೆ.

ಕಾರಿಡಾರ್-4 (ಹೀಲಲಿಗೆ-ರಾಜಾನುಕುಂಟೆ) ಯೋಜನೆಯ ಗಡುವು ಅಕ್ಟೋಬರ್ 2026ರವರೆಗೆ ಇದೆ. ಎಲ್&ಟಿಗೆ ಯಾವುದೇ ಒಪ್ಪಂದ ರದ್ದುಗೊಳಿಸುವ ಅಧಿಕಾರವಿಲ್ಲ. ಆದಾಗ್ಯೂ, ಆ. 31ರಂದು ಎರಡು ಕಾರಿಡಾರ್ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಹೇಳಿಕೊಂಡಿದೆ. ಇದು ಒಪ್ಪಂದದ ಷರತ್ತುಗಳ ಸ್ಪಷ್ಟ ಉಲ್ಲಂಘನೆ ಎಂದು ಕೆ-ರೈಡ್‌ ಆರೋಪಿಸಿದೆ.

ಪರಿಹಾರದ ವ್ಯವಸ್ಥೆ ಇತ್ತು

ಭೂಮಿ ಲಭ್ಯವಿಲ್ಲದ ಕಾರಣದಿಂದಾಗುವ ವಿಳಂಬಕ್ಕೆ ಒಪ್ಪಂದದಲ್ಲಿ ಗಡುವು ವಿಸ್ತರಣೆ ಹಾಗೂ ದೂರುಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಇತ್ತು. ಇದನ್ನು ಬಳಸದೇ ಎಲ್&ಟಿಯು ಒಪ್ಪಂದವನ್ನು ಏಕಾಏಕಿ ರದ್ದುಗೊಳಿಸಿದೆ.

ಎಲ್& ಟಿ ಮನವಿಯಂತೆ ಹಣಕಾಸು ಸಂಬಂಧಿತ ಬೇಡಿಕೆಗಳನ್ನು "ಸೌಹಾರ್ದ ಸಮಿತಿ"ಗೆ ಒಪ್ಪಿಸಲಾಗಿತ್ತು. ಒಪ್ಪಂದದ ಅವಧಿಯಲ್ಲಿಯೇ ಬೆಲೆ ಪರಿಷ್ಕರಣೆ ಹಾಗೂ EPC ಒಪ್ಪಂದವನ್ನು BOQ (items-wise) ಒಪ್ಪಂದವಾಗಿ ಪರಿವರ್ತನೆ ಮಾಡುವ ಬೇಡಿಕೆ ಮುಂದಿರಿಸಿದೆ. ಇದು ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕೆ-ರೈಡ್‌ ದೂರಿದೆ.

ಇಲ್ಲಿ BOQ ಎಂದರೆ ನಿರ್ಮಾಣ ಯೋಜನೆಗಳಲ್ಲಿ ಅಗತ್ಯವಿರುವ ಸಾಮಗ್ರಿಗಳು, ಪ್ರಮಾಣ ಮತ್ತು ಅವುಗಳ ವೆಚ್ಚಗಳ ಪಟ್ಟಿಯನ್ನು ಒಳಗೊಂಡಿರುವ ಒಂದು ದಾಖಲೆಯಾಗಿದೆ. BOQ ಬಿಡ್ಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಬಳಸಲಾಗುತ್ತದೆ.

ಅಗತ್ಯ ಭೂಮಿ ಇತ್ತು ಎಂದ ಕೆ-ರೈಡ್‌

ಎಲ್&ಟಿಗೆ ವಹಿಸಿರುವ ಕೆಲಸದಲ್ಲಿ ಕಾರಿಡಾರ್-2ರ ಒಟ್ಟು ಉದ್ದದ ಶೇ 84 ಮತ್ತು ಕಾರಿಡಾರ್-4ರಲ್ಲಿ ಸುಮಾರು 17 ಕಿ.ಮೀ. ಕಾರ್ಯಸ್ಥಳ ಲಭ್ಯವಿದೆ. ಆದರೂ, ಈ ಲಭ್ಯವಿರುವ ಸ್ಥಳಗಳಿಗೆ ಹೊಂದಿಕೊಂಡಂತೆ ಎಲ್&ಟಿಯು ಸಾಧಿಸಿದ ಪ್ರಗತಿ ಸಾಕಷ್ಟು ಕಡಿಮೆ ಇದೆ. "ಕಾರ್ಯಸ್ಥಳ ಲಭ್ಯವಿಲ್ಲ" ಎಂಬ ಆರೋಪ ಒಪ್ಪುವುದಲ್ಲ. ಎಲ್&ಟಿಯು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕಾಮಗಾರಿ ಕುಂಠಿತವಾಗಿದೆ. ವಿನ್ಯಾಸ ಅಂತಿಮ ಹಂತದಲ್ಲಿ ವಿಳಂಬ ಮಾಡಿದೆ. ಈ ದೋಷಗಳನ್ನು K-RIDE ನ ಅಧಿಕಾರಿಗಳು ಹಲವು ಬಾರಿ ಎಲ್ & ಟಿಗೆ ಸೂಚಿಸಿ, ಕೆಲಸ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. ಕಾರಿಡಾರ್-2 ಮತ್ತು 4 ರಲ್ಲಿ ಎಲ್ & ಟಿಯ ಯೋಜನಾ ನಿರ್ವಾಹಕರನ್ನು ಪದೇಪದೇ ಬದಲಾಯಿಸಿದ್ದು ಕೂಡ ಕಾಮಗಾರಿ ಪ್ರಗತಿ ಕುಂಠಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದೆ.

ನಾಲ್ಕು ಕಾರಿಡಾರ್ ಯಾವುವು?

ಸಂಪಿಗೆ ಮಾರ್ಗ (ಕಾರಿಡಾರ್ 1): ಕೆ.ಎಸ್.ಆರ್ ಬೆಂಗಳೂರಿನಿಂದ ದೇವನಹಳ್ಳಿ (41 ಕಿ.ಮೀ)

ಮಲ್ಲಿಗೆ ಮಾರ್ಗ (ಕಾರಿಡಾರ್ 2) : ಬೆನ್ನಿಗನಹಳ್ಳಿಯಿಂದ ಚಿಕ್ಕಬಾಣಾವರ (25 ಕಿ.ಮೀ)

ಪರಿಜಾತ ಮಾರ್ಗ (ಕಾರಿಡಾರ್ 3): ಕೆಂಗೇರಿಯಿಂದ ವೈಟ್ ಫೀಲ್ಡ್ (35 ಕಿ.ಮೀ)

ಕನಕ ಮಾರ್ಗ (ಕಾರಿಡಾರ್ 4): ಹೀಲಲಿಗೆಯಿಂದ ರಾಜಾನುಕುಂಟೆ (46 ಕಿ.ಮೀ)

ಪ್ರಗತಿಯಲ್ಲಿರುವ ಮಾರ್ಗಗಳು

ಮಲ್ಲಿಗೆ ಮಾರ್ಗವನ್ನು 2022ರಲ್ಲಿ ಕಾಮಗಾರಿ ಪ್ರಾರಂಭವಾಯಿತು. 2024 ಅಂತ್ಯದ ವೇಳೆ ಶೇ 28ರಷ್ಟು ಪ್ರಗತಿ ಸಾಧಿಸಿದೆ. 2026 ಕ್ಕೆ ಮುಕ್ತಾಯವಾಗಬೇಕಾಗಿದ್ದ ಮೊದಲ ಹಂತದ ಕಾರಿಡಾರ್ ಮಾರ್ಚ್ 2027ಕ್ಕೆ ವಿಸ್ತರಣೆಗೊಂಡಿದೆ.

ಕನಕ ಮಾರ್ಗದ (ಕಾರಿಡಾರ್-4) ಕಾಮಗಾರಿಯನ್ನು 2023ರಲ್ಲಿ L&Tಗೆ ಕಂಪೆನಿ ಒಪ್ಪಂದ ಮಾಡಿಕೊಂಡಿತ್ತು. ಪ್ರಸ್ತುತ ಭೂಸ್ವಾಧೀನ ಅಡ್ಡಿಯಿಂದಾಗಿ ವಿಳಂಬವಾಗಿದೆ. ಸಂಪಿಗೆ ಟೆಂಡರ್ ಹಂತದಲ್ಲಿದೆ, ಭೂಸ್ವಾಧೀನ ಪೂರ್ಣಗೊಂಡಿಲ್ಲ. 2028–2029 ರ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.

ಅದೇ ರೀತಿ ಪರಿಜಾತ ಮಾರ್ಗದ (ಕಾರಿಡಾರ್ 3) ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ, ಕಾಮಗಾರಿಗೆ ಅನುಮೋದನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು 2029 ರ ಗುರಿ ಹೊಂದಲಾಗಿದೆ.

ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಯು ಪ್ರಮುಖವಾಗಿ ಭೂಸ್ವಾಧೀನದಿಂದಾಗಿ ವಿಳಂಬವಾಗಿದೆ. ಅಲ್ಲಲ್ಲಿ ರೈಲ್ವೆ ಭೂಮಿ ಅತಿಕ್ರಮಣವೂ ಕಾಮಗಾರಿಗೆ ಅಡ್ಡಿಯಾಗಿದೆ.

ಪಾವತಿ ಮತ್ತು ಒಪ್ಪಂದ ವಿವಾದ ಕಾರಣದಿಂದ L&T ಕಾಮಗಾರಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಯೋಜನೆ ಮುಂದಿನ ಗಡುವಿಗೂ ತಲುಪುವ ಸಾಧ್ಯತೆ ಎದುರಾಗಿದೆ.

2022ರಲ್ಲಿ ಪ್ರಾರಂಭವಾದ ಯೋಜನೆ 40 ತಿಂಗಳಲ್ಲಿ (ಡಿಸೆಂಬರ್ 2025ರೊಳಗೆ) ಪೂರ್ಣಗೊಳ್ಳಬೇಕಿತ್ತು. ಈಗ 2027ರ ಒಳಗಾಗಿ ಕೆಲವು ಕಾರಿಡಾರ್ ಗಳು ಮಾತ್ರ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಒಪ್ಪಂದ ವಿವಾದಗಳು, ಭೂಸ್ವಾಧೀನ ಮತ್ತು ಸಂಯೋಜನಾ ಸಮಸ್ಯೆಗಳು ಪರಿಹಾರವಾಗದಿದ್ದರೆ ಯೋಜನೆ ಇನ್ನಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.

ಯೋಜನೆಗೆ ಇರುವ ತೊಡಕುಗಳೇನು?

ಸಬ್‌ ಅರ್ಬನ್‌ ರೈಲು ಯೋಜನೆಯ ಮಾರ್ಗದ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆ, ಖಾಸಗಿ ಭೂಮಿ, ಬಿಬಿಎಂಪಿ, ಬಿಡಿಎ ಹಾಗೂ ಅರಣ್ಯ ಇಲಾಖೆಯ ಭೂಮಿಯೂ ಸೇರಿದೆ. ಬಹಳಷ್ಟು ಕಡೆ ರೈಲ್ವೆಗೆ ಸೇರಿದ ಜಾಗ ಅತಿಕ್ರಮಣವಾಗಿದೆ. ಈಗ ಯೋಜನೆ ವಿಸ್ತರಣೆಗಾಗಿ ಖಾಸಗಿ ಭೂಮಿಯನ್ನೂ ಬಳಸಬೇಕಾಗಿದ್ದು, ಮಾಲೀಕರು ಹೆಚ್ಚಿನ ಪರಿಹಾರ ಕೇಳುತ್ತಿರುವುದು ವಿಳಂಬಕ್ಕೆ ಕಾರಣ. ಇನ್ನು ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ ಎದುರಾಗಿದೆ. ಕೆ-ರೈಡ್, ನೈರುತ್ಯ ರೈಲ್ವೆ, ರಾಜ್ಯ ಸರ್ಕಾರ, ನಗರಾಭಿವೃದ್ಧಿ ಪ್ರಾಧಿಕಾರಗಳ ಮಧ್ಯೆ ನಿರಂತರ ಸಮನ್ವಯತೆ ಇಲ್ಲ. ಯೋಜನೆಗೆ ಅನುಮೋದನೆ ನೀಡುವ ಪ್ರಕ್ರಿಯೆ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಜಮೀನು ಲಭ್ಯತೆಯೂ ಕಡಿಮೆಯಾಗಿದೆ.

ಬೆಂಗಳೂರು ನಗರದಲ್ಲಿ ವಸತಿ, ವಾಣಿಜ್ಯ ಕಟ್ಟಡ, ಚಿಕ್ಕದಾದ ರಸ್ತೆಗಳಿಂದಾಗಿ ಭೂಸ್ವಾಧೀನ ಕಷ್ಟಕರವಾಗಿದೆ. ಇನ್ನೂ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಇದರಿಂದ ಯೋಜನೆಗೆ ಹಿನ್ನೆಡೆ ತಂದಿವೆ.

ಸರ್ಕಾರದ ಇಚ್ಛಾಶಕ್ತಿ ಕೊರತೆ

ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯೂ ಕಾಮಗಾರಿ ಕುಂಠಿತಕ್ಕೆ ಕಾರಣವಾಗಿದೆ. ಯೋಜನೆ ಉಸ್ತುವಾರಿ ವಹಿಸಿರುವ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ-ರೈಡ್) ಕಾಯಂ ವ್ಯವಸ್ಥಾಪಕ ನಿರ್ದೇಶಕರ ನೇಮಕ ವಿಳಂಬ, ನಿಧಾನತಿಯ ಭೂಸ್ವಾಧೀನದಿಂದ ಯೋಜನೆ ಪ್ರಗತಿ ಕಾಣುತ್ತಿಲ್ಲ. ಗುತ್ತಿಗೆ ಸಂಸ್ಥೆ ಪಡೆದ ಸಂಸ್ಥೆಯು ಭಾರೀ ಯಂತ್ರೋಪಕರಣಗಳನ್ನು ತಂದಿರಿಸಿಕೊಳ್ಳುವುದಲ್ಲದೇ ಕಾರ್ಮಿಕರನ್ನು ವ್ಯರ್ಥವಾಗಿ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಿಸಿತ್ತು. ಕೇಂದ್ರ ಸರ್ಕಾರ ಅಗತ್ಯ ನೆರವು, ಇನ್ನಿತರೆ ಸೌಲಭ್ಯಗಳನ್ನು ಒದಗಿಸಿದರೂ ಮೂಲಭೂತವಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದ ರಾಜ್ಯ ಸರ್ಕಾರ ಕ್ರಮವೇ ಯೋಜನೆ ವಿಳಂಬಕ್ಕೆ ಕಾರಣವಾಗಿದೆ ಎಂದು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕರ್ಣಂ ರಮೇಶ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಬೆಂಗಳೂರಿನ ಸಂಚಾರ ದಟ್ಟಣೆಗೆ ಸಬ್ ಅರ್ಬನ್ ರೈಲು ಯೋಜನೆ ಅತ್ಯುಪಯುಕ್ತವಾಗಿದೆ. ಆದರೆ, ಇಂತಹ ಯೋಜನೆಗಳಿಗೆ ಹೆಚ್ಚು ಒತ್ತು ನೀಡದೇ ಟನಲ್ ರಸ್ತೆಯಂತಹ ಅವೈಜ್ಞಾನಿಕ ಯೋಜನೆಗಳಿಗೆ ಒತ್ತು ನೀಡುತ್ತಿದೆ. ಸರ್ಕಾರದ ಈ ಧೋರಣೆಯಿಂದಲೇ ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

650 ಕಟ್ಟಡಗಳಿಗೆ ನೋಟಿಸ್

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಯ ಮಾರ್ಗದಲ್ಲಿ ಬರುವ ಒಟ್ಟು 650 ಕಟ್ಟಡಗಳನ್ನು ಗುರುತಿಸಲಾಗಿದೆ. ಸಂಪಿಗೆ ಕಾರಿಡಾರ್‌( ಕಾರಿಡಾರ್ 1)ನಲ್ಲಿ 85 ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ. ಮಲ್ಲಿಗೆ ಕಾರಿಡಾರ್ನಲ್ಲಿ (2ನೇ ಕಾರಿಡಾರ್) 289 ಕಟ್ಟಡಗಳಿಗೆ ನೋಟಿಸ್ ಕೊಡಲಾಗಿದೆ. ಪಾರಿಜಾತ ಮಾರ್ಗದಲ್ಲಿ 135 ಕಟ್ಟಡಗಳು ಹಾಗೂ ಕನಕ ಮಾರ್ಗದಲ್ಲಿ 140 ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ.

ಈ ಎಲ್ಲಾ ಮಾರ್ಗಗಳಲ್ಲಿ ಖಾಸಗಿ ಮನೆಗಳಿಗೆ ನೋಟಿಸ್ ವಿತರಿಸಲಾಗಿದೆ. ಎರಡನೇ ಕಾರಿಡಾರ್‌ ಆಗಿರುವ ಮಲ್ಲಿಗೆ ಮಾರ್ಗದಲ್ಲಿ ತಲೆ ಎತ್ತಿರುವ 109 ಕುಟುಂಬಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Read More
Next Story