ಇದು ತುರ್ತು ಪರಿಸ್ಥಿತಿ; ದ್ವೇಷ ಭಾಷಣ ತಡೆ ಮಸೂದೆಗೆ ನಿಖಿಲ್ ಕುಮಾರಸ್ವಾಮಿ ವಿರೋಧ
x

ನಿಖಿಲ್‌ ಕುಮಾರಸ್ವಾಮಿ 

ಇದು ತುರ್ತು ಪರಿಸ್ಥಿತಿ; ದ್ವೇಷ ಭಾಷಣ ತಡೆ ಮಸೂದೆಗೆ ನಿಖಿಲ್ ಕುಮಾರಸ್ವಾಮಿ ವಿರೋಧ

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ನಿಖಿಲ್, ದ್ವೇಷ ಭಾಷಣ ತಡೆ ಮಸೂದೆಯನ್ನು ಬೇರೆ ಯಾರೋ ಸಿದ್ಧಪಡಿಸಿ ಗೃಹ ಸಚಿವರ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


Click the Play button to hear this message in audio format

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ತಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಮಸೂದೆಯು 'ಪ್ರಜಾಪ್ರಭುತ್ವದ ಕಗ್ಗೊಲೆ'ಯಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆಯ ಮೂಲಕ ಸರ್ಕಾರವು ವಿರೋಧ ಪಕ್ಷಗಳು ಮತ್ತು ಪತ್ರಕರ್ತರ ಧ್ವನಿಯನ್ನು ಅಡಗಿಸುವ ಸಂಚು ನಡೆಸುತ್ತಿದ್ದು, ಇದರ ವಿರುದ್ಧ ತೀವ್ರ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂವಿಧಾನವು ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಮಸೂದೆಯು 1975ರ ತುರ್ತು ಪರಿಸ್ಥಿತಿಯನ್ನು ಹಿಂಬಾಗಿಲಿನಿಂದ ಜಾರಿಗೆ ತರುವ ಕುತಂತ್ರವಾಗಿದೆ. ಇಂತಹ ಜನವಿರೋಧಿ ನೀತಿಗಳಿಂದಾಗಿ ಈ ಸರ್ಕಾರದ ಪತನದ ದಿನಗಳು ದೂರವಿಲ್ಲ," ಎಂದು ಭವಿಷ್ಯ ನುಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ನಿಖಿಲ್, "ಈ ಮಸೂದೆಯನ್ನು ಬೇರೆ ಯಾರೋ ಸಿದ್ಧಪಡಿಸಿ ಗೃಹ ಸಚಿವರ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಏನೂ ತಿಳಿದಿಲ್ಲ. ಈ ಕರಾಳ ಕಾನೂನಿನ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಸದನದ ಒಳಗೆ ಹಾಗೂ ಹೊರಗೆ ಒಟ್ಟಾಗಿ ಹೋರಾಟ ನಡೆಸಲಿವೆ," ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಅಧಿವೇಶನದ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, "ಉತ್ತರ ಕರ್ನಾಟಕದ ರೈತರು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿವೇಶನವು ಕೇವಲ ಕಾಟಾಚಾರಕ್ಕೆ ಸೀಮಿತವಾಗಿದ್ದು, ನಾಡಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಸ್ತೆಯಲ್ಲಿ ಓಡಾಡಿದರೆ ಗುಂಡಿಗಳ ಬಗ್ಗೆ ಗೊತ್ತಾಗುತ್ತಿತ್ತು, ಆದರೆ ಅವರು ಹೆಲಿಕಾಪ್ಟರ್ ಸಂಚಾರಕ್ಕೆ ₹47 ಕೋಟಿ ಖರ್ಚು ಮಾಡುತ್ತಿದ್ದಾರೆ," ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Read More
Next Story