
Internal Reservation Part 4| ಒಳ ಮೀಸಲಾತಿ ಸಮೀಕ್ಷೆ ಪೂರ್ಣ; ಮೂರೂವರೆ ದಶಕದ ಹೋರಾಟಕ್ಕೆ ಮುಕ್ತಿ ಸಿಗುವುದೇ ?
ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮೀಕ್ಷೆ ಪೂರ್ಣವಾಗಿದ್ದು, ಒಳ ಮೀಸಲಾತಿ ಜಾರಿಯಾಗುವುದೇ ಅಥವಾ ನ್ಯಾಯಾಲಯದ ಕಟಕಟೆ ಏರುವುದೇ ಎಂಬ ಜಿಜ್ಞಾಸೆ ಮೂಡಿದೆ. ಆದಾಗ್ಯೂ ಮೂರೂವರೆ ದಶಕದ ಒಳ ಮೀಸಲಾತಿ ಹೋರಾಟಕ್ಕೆ ತೆರೆ ಎಳೆಯಲು ಆಯೋಗ ಸಿದ್ಧತೆ ನಡೆಸುತ್ತಿದೆ.
ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವು ಒಳ ಮೀಸಲಾತಿ ಸಮೀಕ್ಷೆಯ ದತ್ತಾಂಶ ವಿಶ್ಲೇಷಣೆ ಹಾಗೂ ಉಪಜಾತಿಗಳ ವರ್ಗೀಕರಣ ಪ್ರಕ್ರಿಯೆ ಆರಂಭಿಸಿದೆ. ಪರಿಶಿಷ್ಟ ಜಾತಿಗಳ ಮೂರೂವರೆ ದಶಕದ ಒಳ ಮೀಸಲಾತಿ ಹೋರಾಟ ನಿರ್ಣಾಯಕ ಹಂತ ತಲುಪಿದ್ದು, ಆಯೋಗ ನೀಡುವ ವರದಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದರಂತೆ ಆಯೋಗ ಕೂಡ ಅತ್ಯಂತ ಸೂಕ್ಷ್ಮವಾಗಿ ಸಮೀಕ್ಷೆ ವರದಿ ಸಿದ್ಧಪಡಿಸುತ್ತಿದೆ.
ರಾಜ್ಯದಾದ್ಯಂತ ಒಳ ಮೀಸಲಾತಿ ಸಮೀಕ್ಷೆ ಯಶಸ್ವಿಯಾಗಿ ನಡೆದರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ನೀರಸವಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ 54 ರಷ್ಟು ಮಾತ್ರ ಸಮೀಕ್ಷೆ ನಡೆದಿದೆ. ಈ ಕುರಿತಂತೆ ಕುರಿತು ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನ್ ದಾಸ್ ಅವರು, "ರಾಜ್ಯಾದ್ಯಂತ ಸಮೀಕ್ಷೆಯ ಮಾಹಿತಿ ಕ್ರೂಢೀಕರಿಸಲಾಗುತ್ತಿದೆ. ನಾವು ಇಂದು ನಿರ್ಣಾಯಕ ಹಂತದಲ್ಲಿದ್ದೇವೆ. ಸಮೀಕ್ಷೆಯ ವ್ಯತ್ಯಾಸಗಳ ಕುರಿತು ಯಾರೂ ಕೂಡ ನಮ್ಮನ್ನು ಪ್ರಚೋದಿಸಬೇಡಿ, ಒಳ ಮೀಸಲಾತಿ ಹಂಚಿಕೆಯನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಲಾಗುತ್ತಿದೆ. ದತ್ತಾಂಶ ವಿಶ್ಲೇಷಣೆ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಯಾವುದೇ ಮಾಹಿತಿ ನೀಡುವುದಿಲ್ಲ" ಎಂದು ಹೇಳಿದರು.
ತಾಂತ್ರಿಕ ಸಮಸ್ಯೆ ಎದುರಾಗಿತ್ತೇ?
ರಾಜ್ಯದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಆರಂಭದಲ್ಲೇ ತಂತ್ರಾಂಶದಲ್ಲಿ ಸಮಸ್ಯೆ ಕಾಣಿಸಿತ್ತು. ಅದಾದ ಬಳಿಕ ಮತದಾರರ ಗುರುತಿನ ಚೀಟಿಯನ್ನು ಮಾತ್ರ ಮಾನದಂಡವಾಗಿ ಬಳಸಿದ ಕ್ರಮ ಕೂಡ ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಇದರಿಂದ ಮತದಾನ ಹಕ್ಕಿಗೆ ಅರ್ಹರಲ್ಲದ 18ವರ್ಷದ ಒಳಗಿನವರು ಸಮೀಕ್ಷೆಯಿಂದ ದೂರ ಉಳಿದರು ಎಂಬುದು ದಲಿತ ಸಂಘಟನೆಗಳ ಆರೋಪ.
ಬೆಂಗಳೂರಿನ ಕೆಲವು ಕಡೆ ಗಣತಿದಾರರಿಂದ ಅವೈಜ್ಞಾನಿಕವಾಗಿ ಸಮೀಕ್ಷೆ ನಡೆದಿದೆ. ಬಯ್ಯಪ್ಪನಹಳ್ಳಿ, ನಾಗದೇನಹಳ್ಳಿ, ಗಂಗೇನಹಳ್ಳಿ ಸೇರಿದಂತೆ ಹಲವೆಡೆ ಹೊಲೆಯ ಹಾಗೂ ಮಾದಿಗ ಸಮುದಾಯಗಳ ಸಮೀಕ್ಷೆ ನಿಖರವಾಗಿ ನಡೆದಿಲ್ಲ. ಹೊಲೆಯ ಹಾಗೂ ಮಾದಿಗರು ಇರುವ ಗ್ರಾಮಗಳಲ್ಲಿ ಒಂದೇ ಸಮುದಾಯದವರು ಎಂಬ ಜಾತಿ ಸಂಖ್ಯೆಯನ್ನು ಗಣತಿದಾರರು ದಾಖಲಿಸಿದ್ದಾರೆ. ಎಡ ಹಾಗೂ ಬಲದಲ್ಲಿ ಸಂಖ್ಯಾಬಲದ ಸ್ಪರ್ಧೆಯಿಂದಲೇ ಇಂತಹ ಅಚಾತುರ್ಯ ನಡೆದಿದೆ. ಆದರೆ, ನಾವು ಮೊದಲು ಒಳ ಮೀಸಲಾತಿ ದಕ್ಕಿಸಿಕೊಳ್ಳುವ ಒಂದೇ ಉದ್ದೇಶದಿಂದ ವ್ಯತ್ಯಾಸಗಳನ್ನು ಮರೆತಿದ್ದೇವೆ ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟದ ಪ್ರಧಾನ ಸಂಚಾಲಕರ ಸಮಿತಿಯ ಸದಸ್ಯ ಹಾಗೂ ಹಿರಿಯ ದಲಿತ ಹೋರಾಟಗಾರ ಕೇಶವಮೂರ್ತಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸಮೀಕ್ಷೆಯಿಂದ ದೂರ ಉಳಿದ ಅಧಿಕಾರಿ ವರ್ಗ
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಒಕ್ಕೂಟದಿಂದ ಪ್ರತ್ಯೇಕ ತಂಡಗಳನ್ನು ರಚಿಸಿ ಜಾಗೃತಿ ಮೂಡಿಸಲಾಯಿತು. ಎಲ್ಲ ಪರಿಶಿಷ್ಟ ಜಾತಿಯ ಕಾಲೊನಿಗಳಲ್ಲಿ ಅರಿವು ಮೂಡಿಸಿ, ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಆದರೆ, ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಅಧಿಕಾರಿ ವರ್ಗ ಹಾಗೂ ಮಧ್ಯಮ ವರ್ಗದವರು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸದಿರುವುದೇ ಸಮೀಕ್ಷೆಯ ಪ್ರಗತಿ ಕುಂಠಿತಕ್ಕೆ ಕಾರಣವಾಯಿತು ಎಂದು ಕೇಶವಮೂರ್ತಿ ದೂರಿದರು.
ಬೆಂಗಳೂರಿನಲ್ಲಿ ಸುಮಾರು 8ಲಕ್ಷ ಜನರು ಜಾತಿಸೂಚಕದ ಹೆಸರಿನಲ್ಲೇ ಮಾಹಿತಿ ಒದಗಿಸಿದ್ದಾರೆ. ಈ ಸಂಬಂಧ ಮರು ಸಮೀಕ್ಷೆ ನಡೆಸುವಂತೆ ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ, ಸುಪ್ರಿಂಕೋರ್ಟ್ ಮಾನದಂಡಗಳ ಪ್ರಕಾರ, ಸಮೀಕ್ಷೆಗೆ ಅಗತ್ಯವಾದ ದತ್ತಾಂಶ ಸಂಗ್ರಹವಾಗಿರುವುದರಿಂದ ಮರು ಸಮೀಕ್ಷೆ ನಿರಾಕರಿಸಿದರು. ಜಾತಿ ಸೂಚಕ ಬರೆಸಿರುವವರನ್ನು ಪ್ರತ್ಯೇಕ ಗುಂಪಾಗಿ ರಚಿಸುವ ಸಾಧ್ಯತೆ ಎಂದು ಹೇಳಿದರು.
ಈ ಹಿಂದೆ 2011ರ ಜನಗಣತಿಯಲ್ಲಿ 44ಲಕ್ಷ ಜನರು ಜಾತಿಸೂಚಕ ಪದಗಳನ್ನೇ ನಮೂದಿಸಿದ್ದರು. 2012 ರಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗದ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಈ ಸಂಖ್ಯೆಯು 34ಲಕ್ಷಕ್ಕೆ ಇಳಿಯಿತು. ಈಗ ನ್ಯಾ.ನಾಗಮೋಹನ್ ದಾಸ್ ಸಮೀಕ್ಷೆಯಲ್ಲಿ 8ಲಕ್ಷಕ್ಕೆ ಬಂದು ನಿಂತಿದೆ. ಸಮುದಾಯದ ಬೆಳವಣಿಗೆ ಹಾಗೂ ಜಾಗೃತಿ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಮುಂದಿನ ಸಮೀಕ್ಷೆಗಳಲ್ಲಿ ವ್ಯತ್ಯಾಸ ಸರಿಪಡಿಸಿಕೊಳ್ಳಬಹುದು
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಗಣತಿಗಳು ಇರುವುದರಿಂದ ಜಾತಿಸೂಚಕ ಬರೆಸಿರುವವರ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು ದಲಿತ ಮುಖಂಡರು ನಿರ್ಧರಿಸಿದ್ದಾರೆ. ಒಳ ಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಸಲಾಗಿದೆ. ಹೀಗಿರುವಾಗ ಜಾತಿ ಸೂಚಕ ಬರೆಸಿದವರನ್ನು ಮರು ಸಮೀಕ್ಷೆ ಮಾಡಲು ಆಯೋಗ ನಿರಾಕರಿಸಿದೆ. ಹಾಗಾಗಿ ಮೊದಲು ಒಳ ಮೀಸಲಾತಿ ಹಂಚಿಕೆಯಾದರೆ ಆ ನಂತರ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಕೇವಲ 10ಪರ್ಸೆಂಟ್ ಮಾತ್ರ ವ್ಯತ್ಯಾಸಗಳಿವೆ. ಸುಪ್ರೀಂಕೋರ್ಟ್ ಮಾನದಂಡದ ಪ್ರಕಾರ ಶೇ 15ರಷ್ಟು ವ್ಯತ್ಯಾಸವಾದರೆ ಮಾತ್ರ ಮರು ಸಮೀಕ್ಷೆ ನಡೆಸಬಹುದು. ಆದರೆ, ಇಲ್ಲಿ ಶೇ 10 ರೊಳಗೆ ಸಮೀಕ್ಷೆ ವ್ಯತ್ಯಾಸ ಇರುವುದರಿಂದ ಮರು ಸಮೀಕ್ಷೆ ಅಗತ್ಯವಿಲ್ಲ. ಒಳ ಮೀಸಲಾತಿ ಹಂಚಿಕೆಗೆ ಅಗತ್ಯವಾದ ವೈಜ್ಞಾನಿಕ ದತ್ತಾಂಶ ದೊರೆತಿದೆ ಎಂದು ತಿಳಿದು ಬಂದಿದೆ.
ಮೂವತ್ತೈದು ವರ್ಷದಿಂದ ಒಳ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡ ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಆದರೆ, ಕೆಲವರು ಸಮುದಾಯದಲ್ಲಿ ಕ್ರೌರ್ಯದ ಭಾವನೆ ಬಿತ್ತುವ ಮೂಲಕ ಆರ್‌ಎಸ್‌ಎಸ್ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಇಂತಹವರಿಂದಲೇ ಕಳೆದ 35ವರ್ಷಗಳಲ್ಲಿ ದಲಿತರಿಗೆ ರಾಜಕೀಯ ಅಧಿಕಾರ ಸಿಗದಂತಾಯಿತು ಎಂದು ಕೇಶವಮೂರ್ತಿ ಅವರು ಪರೋಕ್ಷವಾಗಿ ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಒಳ ಮೀಸಲಾತಿ ಸಮೀಕ್ಷೆ ಯಶಸ್ವಿಗೊಳಿಸಲು ಎಲ್ಲರೂ ಭಿನ್ನಾಭಿಪ್ರಾಯ ಮರೆತು ಹೊಂದಾದೆವು. ಇದು ಸಮುದಾಯದ ಏಕತೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ, ಕೆಲವರು ಒಳ ಮೀಸಲಾತಿ ಸಮೀಕ್ಷೆಯಲ್ಲಿ ರಾಜಕೀಯ ಮಾಡುತ್ತಾ ಯಾತ್ರೆ ನಡೆಸಿದರು. ಆರ್ ಎಸ್‌ಎಸ್ ಕೈಗೊಂಬೆಯಂತೆ ವರ್ತಿಸಿದರು ಎಂದು ಟೀಕಿಸಿದರು.