Internal reservation survey | Confusion created by survey sticker, BBMP strongly criticized for unscientific action
x
ನಗರದ ತೋಟದ ಮನೆಯ ಕಾಂಪೌಡ್‌ ಮೇಲೆ ಸಮೀಕ್ಷೆ ಮುಗಿದಿದೆ ಎಂದು ಸ್ಟಿಕ್ಕರ್‌ ಅಂಟಿಸಿರುವುದು.

Internal Reservation Part 2 | ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿ ಸಮೀಕ್ಷೆಯ ವಿಶ್ವಾಸಾರ್ಹತೆಗೆ ಕುತ್ತು ತಂದ ಬಿಬಿಎಂಪಿ ಸಿಬ್ಬಂದಿ

ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗದ ನಿರ್ದೇಶನದಂತೆ ಮನೆ ಮನೆಗೆ ಬಿಬಿಎಂಪಿ ಸಿಬ್ಬಂದಿ ಅಂಟಿಸಿದ ಸ್ಟಿಕ್ಕರ್‌ಗಳು ಇದೀಗ ಒಳ ಮೀಸಲಾತಿ ಸಮೀಕ್ಷೆಯನ್ನು ಅನುಮಾನದಿಂದ ನೋಡುವಂತೆ ಮಾಡಿವೆ.


ಪರಿಶಿಷ್ಟ ಜಾತಿಯಲ್ಲಿನ (ಎಸ್‌ಸಿ) ಉಪ-ಜಾತಿಗಳ ನಿಖರ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕುರಿತಂತೆ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಾಗಿದೆ.

ವೈಜ್ಞಾನಿಕ ಸಮೀಕ್ಷೆಗಾಗಿ ಏಕ ಸದ‌ಸ್ಯ ಆಯೋಗ ಸಾಕಷ್ಟು ಸಿದ್ಧತೆ ನಡೆಸಿದರೂ ಕಾಲಮಿತಿಯಲ್ಲಿ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಸಮೀಕ್ಷೆಯ ಅವಧಿ ಪದೇ ಪದೇ ವಿಸ್ತರಿಸಿತು. ಶಾಲಾ ಆರಂಭದ ಬಳಿಕ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಶಿಕ್ಷಕರು ಅಲಭ್ಯರಾಗಿದ್ದು ಸಮೀಕ್ಷೆಯನ್ನು ಇನ್ನಷ್ಟು ವಿಳಂಬಗೊಳಿಸಿತು. ಇನ್ನೇನು ಸಮೀಕ್ಷೆ ಮುಗಿಯಲಿದೆ ಎನ್ನುವಷ್ಟರಲ್ಲಿ ಆಯೋಗದ ನಿರ್ದೇಶನದಂತೆ ಮನೆ ಮನೆಗೆ ಬಿಬಿಎಂಪಿ ಸಿಬ್ಬಂದಿ ಅಂಟಿಸಿದ ಸ್ಟಿಕ್ಕರ್‌ಗಳು ಇದೀಗ ಇಡೀ ಸಮೀಕ್ಷೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿವೆ.

ಶಿಕ್ಷಕರ ಅಲಭ್ಯದಿಂದಾಗಿ ನ್ಯಾ, ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗವು ಪೌರ ಕಾರ್ಮಿಕರು ಹಾಗೂ ಜಲ ಮಂಡಳಿ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಂಡಿತು. ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣದ ಹಿನ್ನೆಲೆ ಹೊಸದಾಗಿ ನಡೆಸುವ ಮನೆ ಮನೆ ಗಣತಿಯಲ್ಲಿ ಸ್ಟಿಕ್ಕರ್‌ ಅಂಟಿಸುವ ಯೋಜನೆ ರೂಪಿಸಲಾಯಿತು. ಅಂತೆಯೇ ಗಣತಿ ಪೂರ್ಣಗೊಂಡ ಮನೆಗೆ ಬಿಬಿಎಂಪಿ ಹಾಗೂ ಜಲಮಂಡಳಿ ಸಿಬ್ಬಂದಿ " ಈ ಮನೆಯ ಸಮೀಕ್ಷೆ ಪೂರ್ಣವಾಗಿದೆ" ಎಂಬ ಬರಹದ ಸ್ಟಿಕ್ಕರ್‌ ಅಂಟಿಸುತ್ತಿದ್ದರು. ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸುವುದು ಇದರ ಉದ್ದೇಶವಾಗಿತ್ತು.

ಚರ್ಚೆಗೆ ಕಾರಣವಾದ ಸ್ಟಿಕ್ಕರ್‌

ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಒಳಪಟ್ಟ ಮನೆಯ ಗೋಡೆಗೆ ಅಂಟಿಸಿದ ಸ್ಟಿಕ್ಕರ್‌ಗಳೇ ಈಗ ವಿಶ್ವಾಸಾರ್ಹತೆಯ ಚರ್ಚೆಗೆ ಕಾರಣವಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆಗಾಗಿ ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು, ಪೌರ ಕಾರ್ಮಿಕರು ಹಾಗೂ ಜಲಮಂಡಳಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು. ಆದರೆ, ಸಮೀಕ್ಷೆಯ ಸೂಕ್ಷ್ಮತೆ ಅರಿಯದ ಸಿಬ್ಬಂದಿ ತ್ವರಿತವಾಗಿ ಗುರಿ ಮುಟ್ಟುವ ಭರದಲ್ಲಿ ಬೇಕಾಬಿಟ್ಟಿಯಾಗಿ ಪರಿಶಿಷ್ಟರು ಇಲ್ಲದ ಮನೆ, ಶಾಲೆ, ಖಾಲಿ ಜಾಗದ ಕಾಂಪೌಂಡ್‌ಗಳ ಮೇಲೂ ಸ್ಟಿಕ್ಕರ್‌ ಅಂಟಿಸಿದೆ. ಇದರಿಂದ ವೈಜ್ಞಾನಿಕವಾಗಿ ಕೈಗೊಂಡ ಸಮೀಕ್ಷೆಯ ಅಸಲಿಯೆತ್ತು ಏನು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಮೇ5 ರಿಂದ ಆರಂಭವಾದ ಸಮೀಕ್ಷೆಯಲ್ಲಿ ಶಿಕ್ಷಕರು ಗಣತಿದಾರರಾಗಿ ಭಾಗವಹಿಸಿದ್ದರು. ಜೂನ್‌ ತಿಂಗಳಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾದ ಬಳಿಕ ಸಮೀಕ್ಷೆಯಿಂದ ಬಿಡುಗಡೆಯಾಗಿದ್ದರು. ಅಷ್ಟೊತ್ತಿಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೇ.90 ಕ್ಕಿಂತ ಹೆಚ್ಚಿನ ಸಮೀಕ್ಷೆಯಾಗಿತ್ತು. ಆದರೆ, ಬಿಬಿಎಂಪಿಯಲ್ಲಿ ಸಮೀಕ್ಷೆ ಪ್ರಗತಿ ಶೇ. 50ಕೂಡ ದಾಟಿರಲಿಲ್ಲ.

ಬೇಕಾಬಿಟ್ಟಿ ಸ್ಟಿಕ್ಕರ್‌ ಅಂಟಿಸಿದ ಸಿಬ್ಬಂದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳಮೀಸಲಾತಿ ಸಮೀಕ್ಷೆ ನಡೆಸಿದ ಬಳಿಕ ಗಣತಿದಾರರು ಆ ಮನೆಯ ಬಾಗಿಲು ಅಥವಾ ಗೋಡೆಗೆ ಸ್ಟಿಕ್ಕರ್‌ ಅಂಟಿಸುತ್ತಿದ್ದರು. ಆದರೆ, ಸಮೀಕ್ಷೆ ಪೂರ್ಣಗೊಳಿಸುವ ಧಾವಂತದಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ಸಿಬ್ಬಂದಿ ಎಲ್ಲೆಂದರಲ್ಲಿ ಸ್ಟಿಕ್ಕರ್‌ ಅಂಟಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಗರದ ದಾಸರಹಳ್ಳಿ ಸಮೀಪವಿರುವ ಸಿಡೇದಹಳ್ಳಿ ಮುಖ್ಯರಸ್ತೆಯ ತೋಟದ ಮನೆಯು ಅನ್ಯ ಕೋಮಿನವರಿಗೆ ಸೇರಿದ್ದರೂ ಗೇಟ್‌ ಮುಂದೆ "ಈ ಮನೆಯ ಸಮೀಕ್ಷೆ ಪೂರ್ಣಗೊಂಡಿದೆ" ಎಂಬ ಸ್ಟಿಕ್ಕರ್‌ ಅಂಟಿಸಲಾಗಿದೆ. ಬಗಲುಗುಂಟೆಯ ಎಂಇಐ ಬಡಾವಣೆಯಲ್ಲಿ ಆರು ಮನೆಗಳಿರುವ ವಸತಿ ಸಮುಚ್ಚಯದ ಗೋಡೆಗೆ ಸ್ಟಿಕ್ಕರ್‌ ಅಂಟಿಸಲಾಗಿದೆ. ಈ ಕುರಿತು ʼದ ಫೆಡರಲ್‌ ಕರ್ನಾಟಕʼ ಮನೆಯ ಸದಸ್ಯರನ್ನು ಪ್ರಶ್ನಿಸಿದಾಗ, ಇಲ್ಲಿ ಯಾರೂ ಕೂಡ ಪರಿಶಿಷ್ಟ ಸಮುದಾಯದವರು ಇಲ್ಲ. ಈ ಬಗ್ಗೆ ಯಾರೂ ಕೂಡ ಬಂದು ವಿಚಾರಿಸಿಲ್ಲ. ಆದರೆ, ಮನೆಯ ಕಾಂಪೌಂಡ್‌ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ. ಬೇಕಾಬಿಟ್ಟಿಯಾಗಿ ಸಮೀಕ್ಷೆ ನಡೆಸಿದರೆ ವರದಿಗೆ ವಿಶ್ವಾಸಾರ್ಹತೆ ಇರಲಿದೆಯೇ ಎಂದು ಗೃಹಿಣಿಯೊಬ್ಬರು ಪ್ರಶ್ನಿಸಿದರು.

ಶಾಲಾ ಕಾಂಪೌಡ್‌ ಮೇಲೂ ಸ್ಟಿಕ್ಕರ್‌

ಬಗಲಗುಂಟೆಯ ಎಂಇಐ ಬಡಾವಣೆಯಲ್ಲಿರುವ ಖಾಸಗಿ ಶಾಲೆಯ ಗೋಡೆಗೂ ಸ್ಟಿಕ್ಕರ್‌ ಅಂಟಿಸಿರುವುದು ನಗೆಪಾಟಲಿಗೆ ಈಡಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಕಿಯನ್ನು ʼದ ಫೆಡರಲ್‌ ಕರ್ನಾಟಕʼ ಪ್ರಶ್ನಿಸಿದಾಗ, ಮನೆ ಮನೆ ತೆರಳಿ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಬೇಕಾದ ಗಣತಿದಾರರು ಶಾಲಾ ಕಾಂಪೌಡ್‌ ಗೋಡೆಗೂ ಸ್ಟಿಕ್ಕರ್‌ ಅಂಟಿಸಿದ್ದಾರೆ. ಶಾಲೆಯ ಪಕ್ಕದಲ್ಲೇ ಮನೆ ಇದ್ದರೂ ಬಂದು ವಿಚಾರಿಸಿಲ್ಲ. ಇದೆಲ್ಲವನ್ನೂ ನೋಡಿದರೆ ಕಾಟಾಚಾರದ ಸಮೀಕ್ಷೆ ಎಂಬುದು ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ

ನಗರದ ಹಲವು ಭಾಗಗಳಲ್ಲೂ ಪರಿಶಿಷ್ಟರು ವಾಸ ಮಾಡದ ಮನೆಗಳಿಗೂ ಗಣತಿದಾರರು ಸ್ಟಿಕ್ಕರ್‌ ಅಂಟಿಸಿ ಹೋಗಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ. ಬಿಬಿಎಂಪಿ ಸಿಬ್ಬಂದಿ ಈ ನಡೆಗೆ ಪರಿಶಿಷ್ಟ ಸಮುದಾಯದವರೂ ಸೇರಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆಗಳಲ್ಲಿ ಸ್ಟಿಕ್ಕರ್‌ ಅಂಟಿಸುವ ವಿಚಾರವಾಗಿಯೇ ಸ್ಥಳೀಯರು ಹಾಗೂ ಗಣತಿದಾರರ ಮಧ್ಯೆ ವಾಗ್ವಾದವೂ ನಡೆದಿದೆ.

ಗಣತಿದಾರರಿಂದ ಹಲ್ಲೆ, ದೂರು

ಒಳ ಮೀಸಲಾತಿ ಹಂಚಿಕೆ ಸಂಬಂಧ ಪರಿಶಿಷ್ಟ ಜಾತಿಯ ಉಪ ಜಾತಿಗಳ ಮಾಹಿತಿ ಸಂಗ್ರಹಿಸುತ್ತಿರುವ ಗಣತಿದಾರರು ಯಾವುದೇ ಸಮೀಕ್ಷೆ ನಡೆಸದೇ ಬಾಗಿಲಿಗೆ ಸ್ಟಿಕ್ಕರ್‌ ಅಂಟಿಸಿ ಹೋಗಿರುವ ಆರೋಪಗಳು ಕೇಳಿಬಂದಿವೆ.

ಬೆಂಗಳೂರಿನ ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದಲ್ಲಿ ಸ್ಟಿಕ್ಕರ್‌ ಅಂಟಿಸುವ ವಿಚಾರವಾಗಿಯೇ ಗಲಾಟೆ ನಡೆದಿರುವ ಘಟನೆಯೂ ನಡೆದಿದೆ. ಸಮೀಕ್ಷೆಗೆ ಬಂದಿದ್ದ ಬಿಬಿಎಂಪಿ ಸಿಬ್ಬಂದಿಯು ನಂದೀಶ್‌ ಎಂಬುವವರ ಮನೆಗೆ ಹೋಗಿ ಸ್ಟಿಕ್ಕರ್‌ ಅಂಟಿಸಿದ್ದಾರೆ. ಈ ಕುರಿತು ಪ್ರಶ್ನಿಸಿದ್ದಕ್ಕೆ ಇದು ನನಗೆ ನೀಡಿರುವ ಕೆಲಸ ಎಂದು ಆವಾಜ್‌ ಹಾಕಿ ಹೋಗಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಇದೇ ಸಿಬ್ಬಂದಿ ತಮ್ಮ ಮೇಲ್ವಿಚಾರಕರನ್ನು ಕರೆತಂದು ನಂದೀಶ್‌ ಹಲ್ಲೆ ಮಾಡಿದ್ದಾರೆ. ನಾವು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದೆವು. ಆಗ ಬಿಬಿಎಂಪಿ ಸಿಬ್ಬಂದಿ ಬಂದು ಕ್ಷಮೆ ಕೇಳಿದ್ದರಿಂದ ದೂರು ಕೊಡದೇ ವಾಪಸ್‌ ಬಂದೆವು ಎಂದು ನಂದೀಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕರ್ತವ್ಯ ಲೋಪ; ಮೂವರ ಅಮಾನತು

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಮನೆ ಮನೆಗೆ ಸ್ಟಿಕ್ಕರ್‌ ಅಂಟಿಸಿರುವುದನ್ನು ಖಾತರಿಪಡಿಸಿಕೊಳ್ಳಲು ನಿಯೋಜಿಸಿದ್ದ ಎಚ್‌ಬಿಆರ್‌ ಬಡಾವಣೆಯ ಕಂದಾಯ ಪರಿವೀಕ್ಷಕ ರಮೇಶ್‌, ಕಂದಾಯ ವಸೂಲಿಗಾರ ಪೆದ್ದರಾಜು ಹಾಗೂ ಹೆಮ್ಮಿಗೆಪುರ ವಾರ್ಡ್‌ನ ಕಂದಾಯ ವಸೂಲಿ ಅಧಿಕಾರಿ ಸಿ. ಸೆಂದಿಲ್‌ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದಲ್ಲಿ ಮನೆಯ ಮಾಲೀಕರೊಂದಿಗೆ ಗಲಾಟೆ ಮಾಡಿದ್ದ ಸಿಬ್ಬಂದಿ ವಿರುದ್ದವೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಸಮೀಕ್ಷೆಯಲ್ಲಿ ಯಾವುದೇ ಪ್ರಗತಿ ಸಾಧಿಸದ ಜಯನಗರದ ಆರೋಗ್ಯ ವೈದ್ಯಾಧಿಕಾರಿ ಶ್ರೀಜೇಶ್‌, ಮಹಾಲಕ್ಷ್ಮಿಪುರ ವಿಭಾಗದ ಆರೋಗ್ಯ ಪರಿವೀಕ್ಷಕ ವಿಜಯ್‌ ಕುಮಾರ್‌, ಅಂಜನಪುರ ವಿಭಾಗದ ಕಂದಾಯ ವಸೂಲಿಗಾರ ಶಿವರಾಜ್‌ ಹಾಗೂ ಗ್ರೂಪ್‌ ʼಡಿʼ ನೌಕರ ಶಂಕರ್‌, ಸರ್.ಸಿ.ವಿ. ರಾಮನ್‌ ನಗರದ ಕಂದಾಯ ವಸೂಲಿಗಾರ ಮಹದೇವ ಅವರನ್ನು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಅಮಾನತು ಮಾಡಿ ಆದೇಶಿಸಿದ್ದರು.

ರಾಜ್ಯದಲ್ಲಿ ಶೇ. 91 ರಷ್ಟು ಪ್ರಗತಿ

ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಹಾಗೂ ರಾಜ್ಯ ಸರ್ಕಾರವು ಒಳ ಮೀಸಲಾತಿ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ52 ರಷ್ಟು ಸಮೀಕ್ಷೆಯಾಗಿದೆ. ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಜಿಲ್ಲಾ ವ್ಯಾಪ್ತಿಗಳಲ್ಲಿ ಹಾವೇರಿಯಲ್ಲಿ ಅತಿ ಹೆಚ್ಚು ಶೇ.111 ಜನರು ಮಾಹಿತಿ ನೀಡಿದ್ದು, ರಾಜ್ಯದ 12 ಜಿಲ್ಲೆಗಳಲ್ಲಿ ಶೇ.100 ರಷ್ಟು, ಒಂಬತ್ತು ಜಿಲ್ಲೆಗಳಲ್ಲಿ ಶೇ.95 ಹಾಗೂ ಏಳು ಜಿಲ್ಲೆಗಳಲ್ಲಿ ಶೇ. 91 ರಷ್ಟು ಸಮೀಕ್ಷೆಯಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಶೇ.91 ರಷ್ಟು ಪ್ರಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Read More
Next Story