Massive protest across the state on August 1 demanding implementation of internal reservation
x

ಮಾಜಿ ಸಂಸದ ಎ. ನಾರಾಯಣಸ್ವಾಮಿ ಮಾತನಾಡಿದರು.

ಒಳ ಮೀಸಲಾತಿ: ಸರ್ಕಾರದ ವಿಳಂಬಕ್ಕೆ ಮಾದಿಗ ಸಮುದಾಯ ಕೆಂಡ; ಅಸಹಕಾರ ಚಳವಳಿಗೆ ಕರೆ

ಒಳ ಮೀಸಲಾತಿ ಜಾರಿ ಮಾಡದಿದ್ದಕ್ಕೆ ಕಾಂಗ್ರೆಸ್ ಸೋತಿದ್ದಾಗಿ ಸಿಎಂ ಸಿದ್ದರಾಮಯ್ಯ ಹಿಂದೆ ಹೇಳಿದ್ದರು. ಅದು ಮತ್ತೊಮ್ಮೆ ಮರುಕಳಿಸುವ ನಿಟ್ಟಿನಲ್ಲಿ ಮಾದಿಗ ಸಮುದಾಯ ಮುಂದಾಗಲಿದೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.


ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಾದಿಗ ಸಮುದಾಯದ ಸಂಘಟನೆಗಳು, ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಸಜ್ಜಾಗಿವೆ. ಆಗಸ್ಟ್ 1ರಂದು ರಾಜ್ಯಾದ್ಯಂತ ಪ್ರತಿಭಟನೆ ಮತ್ತು ನಂತರದ ದಿನಗಳಲ್ಲಿ 'ಕರ್ನಾಟಕ ಬಂದ್' ಹಾಗೂ 'ಅಸಹಕಾರ ಚಳವಳಿ' ನಡೆಸುವುದಾಗಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮತ್ತು ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ವೈಜ್ಞಾನಿಕ ದತ್ತಾಂಶಗಳಿದ್ದರೆ ರಾಜ್ಯಗಳು ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆಗಸ್ಟ್ 1ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಗಮನ ಸೆಳೆಯಲು ಅಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಮಾದಿಗ ಸಂಘಟನೆಗಳು ತೀರ್ಮಾನಿಸಿವೆ.

"ಆಗಸ್ಟ್ 10ರೊಳಗೆ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಯ ಬಗ್ಗೆ ತೀರ್ಮಾನ ಕೈಗೊಂಡು, ಸದನದಲ್ಲಿ ಮಂಡಿಸದಿದ್ದರೆ, ಕರ್ನಾಟಕ ಬಂದ್ ಮಾಡುವ ಬಗ್ಗೆ ಸಮುದಾಯದ ಐದು ಸಾವಿರ ಮುಖಂಡರು ಸಭೆ ಸೇರಿ ತೀರ್ಮಾನಿಸಲಿದ್ದೇವೆ" ಎಂದು ಎ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ. "ಒಳ ಮೀಸಲಾತಿ ಜಾರಿ ಮಾಡದಿದ್ದಕ್ಕೆ ಈ ಹಿಂದೆ ಕಾಂಗ್ರೆಸ್ ಸೋತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದರು. ಅದು ಮತ್ತೊಮ್ಮೆ ಮರುಕಳಿಸುವಂತೆ ಮಾದಿಗ ಸಮುದಾಯ ಮಾಡಲಿದೆ" ಎಂದು ಅವರು ಹೇಳಿದರು.

ಸರ್ಕಾರದ ಮೀನಮೇಷ ಮತ್ತು ಸಮುದಾಯದ ಆರೋಪ

ಒಳ ಮೀಸಲಾತಿ ಜಾರಿಗೆ ವೈಜ್ಞಾನಿಕ ದತ್ತಾಂಶದ ಅಗತ್ಯವಿದೆ ಎಂಬ ಕಾರಣ ನೀಡಿ, ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಿತ್ತು. ಆದರೆ, ಈ ಸಮೀಕ್ಷೆ ಪೂರ್ಣಗೊಂಡು ಏಳು ತಿಂಗಳು ಕಳೆದರೂ ಆಯೋಗವು ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.

"ಐದು ತಿಂಗಳ ಹಿಂದೆ ಬೆಳಗಾವಿಯಲ್ಲಿ ಹೋರಾಟ ನಡೆಸಿದಾಗ, ಮೂರು ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಆಯೋಗ ರಚಿಸಿ ಕಾಲಹರಣ ಮಾಡಲಾಗುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್‌ಗಳಲ್ಲಿ ಒಳ ಮೀಸಲಾತಿ ಜಾರಿಯಾಗಿದೆ, ಆದರೆ ಕರ್ನಾಟಕದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ" ಎಂದು ನಾಯಕರು ಆರೋಪಿಸಿದ್ದಾರೆ.

ಅಸಹಕಾರ ಚಳವಳಿಯ ಎಚ್ಚರಿಕೆ

ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, "ಒಳ ಮೀಸಲಾತಿ ಜಾರಿ ಮಾಡದೆ ಸರ್ಕಾರವು ಮಾದಿಗ ಸಮುದಾಯಕ್ಕೆ ದ್ರೋಹ ಎಸಗುತ್ತಿದೆ. ಆಗಸ್ಟ್ 16ರೊಳಗೆ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ, ಸಮುದಾಯದಿಂದ ಅಸಹಕಾರ ಚಳವಳಿ ಆರಂಭಿಸಲಾಗುವುದು" ಎಂದು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

Read More
Next Story