Internal Reservation |  ಮತಾಂತರಗೊಂಡ ಪರಿಶಿಷ್ಟರನ್ನು ಒಳ ಮೀಸಲಾತಿ ವ್ಯಾಪ್ತಿಗೆ ಸೇರಿಸದಂತೆ ಆಯೋಗದ ಮೇಲೆ ಒತ್ತಡ
x

Internal Reservation | ಮತಾಂತರಗೊಂಡ ಪರಿಶಿಷ್ಟರನ್ನು ಒಳ ಮೀಸಲಾತಿ ವ್ಯಾಪ್ತಿಗೆ ಸೇರಿಸದಂತೆ ಆಯೋಗದ ಮೇಲೆ ಒತ್ತಡ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟರನ್ನು ಒಳ ಮೀಸಲಾತಿ ಸಮೀಕ್ಷೆಗೆ ಪರಿಗಣಿಸದಂತೆ ಹಲವು ದಲಿತ ಸಂಘಟನೆಗಳು ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗವನ್ನು ಒತ್ತಾಯಿಸಿವೆ.


ಒಳ ಮೀಸಲಾತಿ ಹಂಚಿಕೆ ಸಂಬಂಧ ನ್ಯಾ.ನಾಗಮೋಹನದಾಸ್‌ ನೇತೃತ್ವದ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ದಲಿತ ಸಂಘಟನೆಗಳಿಂದ ಮೆಚ್ಚುಗೆಯ ಜೊತೆಗೆ ಆಕ್ಷೇಪವೂ ವ್ಯಕ್ತವಾಗಿದೆ.

ಮೂರು ದಶಕಗಳ ಬಳಿಕ ಒಳ ಮೀಸಲಾತಿ ಹೋರಾಟವು ತಾರ್ಕಿಕ ಅಂತ್ಯ ಕಾಣುತ್ತಿರುವುದು ಸಹಜವಾಗಿ ಖುಷಿ ತಂದುಕೊಟ್ಟಿದೆ. ಆದರೆ, ಒಳ ಮೀಸಲಾತಿ ವ್ಯಾಪ್ತಿಗೆ ಅನ್ಯಧರ್ಮಗಳಿಗೆ ಮತಾಂತರವಾದವರನ್ನು ಪರಿಗಣಿಸಿರುವುದು ದಲಿತರ ವಿರೋಧಕ್ಕೆ ಕಾರಣವಾಗಿದೆ.

ರಾಜ್ಯವ್ಯಾಪಿ ಮೇ 5 ರಿಂದ ಮನೆ ಮನೆ ಸಮೀಕ್ಷೆ ಆರಂಭವಾಗಿದೆ. ಮತಾಂತರವಾದವರನ್ನು ಒಳ ಮೀಸಲಾತಿಯಿಂದ ಹೊರಗಿಡಬೇಕು ಎಂಬ ಸಾಕಷ್ಟು ಒತ್ತಾಯಗಳನ್ನು ಆಯೋಗ ಪರಿಗಣಿಸಲೇ ಇಲ್ಲ. ಹೀಗಾಗಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮೂಲ ಜಾತಿಗಳನ್ನು ದಾಖಲಿಸುವಾಗ ಧರ್ಮವನ್ನೂ ಉಲ್ಲೇಖಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ರಾಷ್ಟ್ರಪತಿಗಳ ಪರಿಶಿಷ್ಟ ಜಾತಿ ಪಟ್ಟಿಯಲ್ಲಿಲ್ಲದ ಸಮುದಾಯಗಳನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಬೇಕೆಂಬ ಸ್ಪಷ್ಟವಾಗಿ ಹೇಳಿದ್ದರೂ ಆಯೋಗ ಅದನ್ನು ಮಾನ್ಯ ಮಾಡದಿರುವುದು ದಲಿತ ನಾಯಕರ ಅತೃಪ್ತಿಗೆ ಕಾರಣವಾಗಿದೆ.

ಆಯೋಗದ ವಾದವೇನು?

ಬೇರೆ ಧರ್ಮಕ್ಕೆ ಮತಾಂತರಗೊಂಡವರು ಆಚರಣೆಯಲ್ಲಿ ಆ ಧರ್ಮವನ್ನು ಅನುಸರಿಸಿ, ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಉಪ ಜಾತಿ ನಮೂದಿಸಿದ್ದರೆ ಅಂತವರು ಒಳ ಮೀಸಲಾತಿ ಸಮೀಕ್ಷೆಗೆ ಒಳಪಡಬಹುದು ಎಂದು ನ್ಯಾ. ನಾಗಮೋಹನ ದಾಸ್ ಆಯೋಗ ಹೇಳಿದೆ.

ಮತಾಂತರವಾದ ಎಲ್ಲರೂ ಬಡತನ ರೇಖೆಯಿಂದ ಇಂದಿಗೂ ಹೊರಬಂದಿಲ್ಲ. ಸಮರ್ಪಕ ಶಿಕ್ಷಣ, ಉದ್ಯೋಗ ಸಿಕ್ಕಿಲ್ಲ. ಹೀಗಾಗಿ ಅವರನ್ನೂ ಒಳ ಮೀಸಲಾತಿಯಲ್ಲಿ ಪರಿಗಣಿಸುವುದು ಅಗತ್ಯ ಎಂಬುದು ಆಯೋಗದ ವಾದವಾಗಿದೆ.

ಸಂಘಟನೆಗಳ ವಿರೋಧವೇನು?

ರಾಷ್ಟ್ರಪತಿ ಪಟ್ಟಿಯಲ್ಲಿ ಇಲ್ಲದ ಜಾತಿಗಳನ್ನು ಮೀಸಲಾತಿಗೆ ಸೇರಿಸುವುದು ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆ. ಸಂವಿಧಾನದ ಕಲಂ 341(1) ರಡಿ ರಾಷ್ಟ್ರಪತಿಯವರು ಹೊರಡಿಸಿರುವ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950ರ ತಿದ್ದುಪಡಿ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ದೂರಲಾಗಿದೆ.

ರಾಷ್ಟ್ರಪತಿಯವರ ಆದೇಶದಲ್ಲಿ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮ ಆಚರಿಸುವವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಅವಕಾಶ ಇಲ್ಲ. ಆದರೆ, ರಾಜ್ಯದಲ್ಲಿ ಬಹಳಷ್ಟು ಪರಿಶಿಷ್ಟರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದು, ಅವರನ್ನು ಒಳ ಮೀಸಲಾತಿಗೆ ಸೇರಿಸಬಾರದು ಎಂಬುದು ದಲಿತ ಸಂಘಟನೆಗಳ ಆಗ್ರಹವಾಗಿದೆ.

ಧರ್ಮದ ಕಾಲಂ ಸೇರಿಸಲು ಒತ್ತಡ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟರನ್ನು ಒಳ ಮೀಸಲಾತಿ ಸಮೀಕ್ಷೆಗೆ ಪರಿಗಣಿಸದಂತೆ ಹಲವು ದಲಿತ ಸಂಘಟನೆಗಳು ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗವನ್ನು ಒತ್ತಾಯಿಸಿವೆ.

ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯ ಎರಡರಲ್ಲೂ ಬೇರೆ ಬೇರೆ ಧರ್ಮಗಳಿಗೆ ಮತಾಂತರವಾದವರು ಇದ್ದಾರೆ. ಅಂತವರನ್ನು ಒಳ ಮೀಸಲಾತಿಗೆ ಸೇರಿಸುವುದರಿಂದ ಮೂಲ ಜಾತಿಗಳ ಜನರಿಗೆ ಪೆಟ್ಟು ಬೀಳಲಿದೆ. ಹಾಗಾಗಿ ಸಮೀಕ್ಷೆಯಲ್ಲಿ 42 ಪ್ರಶ್ನಾವಳಿಗಳ ಜೊತೆಗೆ ಧರ್ಮದ ಕಾಲಂ ಸೇರಿಸಬೇಕು. ಆಗ ಮೂಲಜಾತಿಗಳಿಗಷ್ಟೇ ಮೀಸಲಾತಿ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಕ್ರಿಶ್ಚಿಯನ್ ಧರ್ಮಿಯರನ್ನು ಎಚ್‌. ಕಾಂತರಾಜು ಆಯೋಗದ ವರದಿಯಲ್ಲಿ ಪ್ರವರ್ಗ-1 ಕ್ಕೆ ಸೇರಿಸಲಾಗಿತ್ತು. ಆದರೆ, ಜಯಪ್ರಕಾಶ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಕ್ರಿಶ್ಚಿಯನ್ನರನ್ನು ʼ3ಬಿʼ ಗೆ ಸ್ಥಳಾಂತರಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ 3ಬಿ ಗೆ ಶೇ 8 ರಷ್ಟು ಮೀಸಲಾತಿ ಒದಗಿಸಿದೆ. ಹೀಗಿರುವಾಗ, ಮತಾಂತರವಾದವರನ್ನು ಪರಿಶಿಷ್ಟರ ಒಳ ಮೀಸಲಾತಿ ವ್ಯಾಪ್ತಿಗೆ ತರಬಾರದು ಎಂದು ಒತ್ತಾಯಿಸಿವೆ.

ಕ್ರಿಶ್ಚಿಯನ್/ಇಸ್ಲಾಂ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ನೀಡಬಾರದು ಎಂದು ಇತ್ತೀಚೆಗಷ್ಟೇ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ನಮ್ಮ ರಾಜ್ಯದಲ್ಲೂ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ವೇಳೆ ಧರ್ಮದ ಹೆಸರು ನೋಂದಾಯಿಸಲು ಪ್ರತ್ಯೇಕ ಕಾಲಂ ಇಡಬೇಕು ಎಂದು ಆಗ್ರಹಿಸಿದೆ.

ಮತಾಂತರವಾದ ಪರಿಶಿಷ್ಟರಿಗೆ ಮೀಸಲಾತಿ ಅಗತ್ಯವೇ?

ಬೌದ್ಧ, ಸಿಖ್, ಜೈನ ಧರ್ಮಗಳು ಹಿಂದೂ ಧರ್ಮದ ಭಾಗವೇ ಆಗಿವೆ ಎಂದು 1994ರಲ್ಲಿ ಆದೇಶ ಹೊರಡಿಸಿತ್ತು. ಆದರೆ, ಕಿಶ್ಚಿಯನ್ ಧರ್ಮಕ್ಕೆ ಕೆಲವರು ಅನಿವಾರ್ಯ ಕಾರಣಗಳಿಂದ ಮತಾಂತರವಾಗಿದ್ದಾರೆ. ಇಂತಹವರನ್ನು ಧರ್ಮದ ದೃಷ್ಟಿಯಿಂದ ನೋಡುವ ಬದಲು ಬಡತನ, ಶಿಕ್ಷಣ, ಉದ್ಯೋಗ ದೃಷ್ಟಿಯಲ್ಲಿ ನೋಡಬೇಕು. ಅನ್ಯ ಧರ್ಮಗಳ ಆಚರಣೆ ಪಾಲಿಸಿದರೂ ಬಡತನ ದೂರವಾಗಿಲ್ಲ. ಅಂತಹವರು ಮೂಲ ಜಾತಿಗಳ ಹೆಸರಲ್ಲಿ ಮೀಸಲಾತಿ ಪಡೆದರೆ ಜೀವನ ಮಟ್ಟ ಸುಧಾರಿಸಬಹುದಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಹಿಂದುಳಿದ ಪ್ರದೇಶಗಳಲ್ಲಿ ಸಾಕಷ್ಟು ಪರಿಶಿಷ್ಟರು ಕ್ರಿಶ್ಚಿಯನ್, ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇಂತಹವರನ್ನು ಒಳ ಮೀಸಲಾತಿ ಸಮೀಕ್ಷೆಯಿಂದ ಹೊರಗಿಡಬೇಕು ಎಂಬ ಆಗ್ರಹ ಮೊದಲಿನಿಂದಲೂ ಇದೆ. ಕೆಲವರು ಪೂರ್ಣ ಪ್ರಮಾಣದಲ್ಲಿ ಮತಾಂತರವಾಗಿ ದಾಖಲೆಗಳಲ್ಲೂ ಧರ್ಮ ಬದಲಿಸಿಕೊಂಡಿದ್ದಾರೆ. ಆದರೆ, ಬಹುತೇಕರು ಅನ್ಯ ಧರ್ಮಗಳನ್ನು ಆಚರಣೆಗಳಿಗಷ್ಟೇ ಅವಲಂಬಿಸಿದ್ದಾರೆ. ಹಾಗಾಗಿ ಜೀವನಮಟ್ಟ ಆಧರಿಸಿ ಮೀಸಲಾತಿ ಒದಗಿಸುವುದು ಉತ್ತಮ ಎಂದು ದಲಿತ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

Read More
Next Story