Interview: ಹಳೆ ಪಿಂಚಣಿ ಜಾರಿ ಮಾಡದಿದ್ದರೆ ನೌಕರರಿಂದ ಪೆನ್- ​ಡೌನ್: ಸಿ ಎಸ್​​ ಷಡಾಕ್ಷರಿ  ಎಚ್ಚರಿಕೆ
x

ಸಂಗ್ರಹ ಚಿತ್ರ.

Interview: ಹಳೆ ಪಿಂಚಣಿ ಜಾರಿ ಮಾಡದಿದ್ದರೆ ನೌಕರರಿಂದ 'ಪೆನ್- ​ಡೌನ್': ಸಿ ಎಸ್​​ ಷಡಾಕ್ಷರಿ ಎಚ್ಚರಿಕೆ

ಸಿ.ಎಸ್. ಷಡಾಕ್ಷರಿ ಅವರು 'ದ ಫೆಡರಲ್ ಕರ್ನಾಟ' ಕ್ಕೆ ವಿಶೇಷ ಸಂದರ್ಶನ ನೀಡಿ ಮಾತನಾಡಿ, ಸರ್ಕಾರದ ಉದಾಸೀನ ಧೋರಣೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಅಂತಿಮ ಗಡುವು ಕೊಟ್ಟಿದ್ದಾರೆ.


ಹಳೆ ಪಿಂಚಣಿ ವ್ಯವಸ್ಥೆ (OPS) ಜಾರಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಆಲಸ್ಯ ಮಾಡುತ್ತಿರುವುದಾಗಿ ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಇನ್ನೂ ಹೆಚ್ಚು ವಿಳಂಬವಾದಲ್ಲಿ ನೌಕರರು 'ಪೆನ್​- ಡೌನ್​' ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.


ಸಿ.ಎಸ್. ಷಡಾಕ್ಷರಿ ಅವರು 'ದ ಫೆಡರಲ್ ಕರ್ನಾಟ' ಕ್ಕೆ ವಿಶೇಷ ಸಂದರ್ಶನ ನೀಡಿ ಮಾತನಾಡಿ, ಸರ್ಕಾರದ ಉದಾಸೀನ ಧೋರಣೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಈ ವಿಷಯವನ್ನು "ಸಹಾನುಭೂತಿಯಿಂದ ಪರಿಗಣಿಸುತ್ತೇವೆ" ಎಂದು ಸರ್ಕಾರ ಹೇಳಿದ್ದರೂ, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಷಡಾಕ್ಷರಿ ಆರೋಪಿಸಿದರು.

"ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ಸರ್ಕಾರವು ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಿರುವ ಬೇರೆ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿಯನ್ನು ತಯಾರಿಸಿದೆ. ಆದರೆ, ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದು ಮಾತ್ರ ಬಾಕಿ ಉಳಿದಿದೆ," ಎಂದು ಅವರು ತಿಳಿಸಿದರು.

ಸಮಿತಿ ಅಧ್ಯಕ್ಷರ ಭೇಟಿ

ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ನಾವು ಅವರನ್ನು ಭೇಟಿ ಮಾಡಿ, ಆದಷ್ಟು ಬೇಗ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ವಿನಂತಿ ಮಾಡಿದ್ದೇವೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಮೇಲೆ, ನಾವು ತಕ್ಷಣವೇ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯ ಕೈಗೊಳ್ಳುತ್ತೇವೆ ಎಂದು ಷಡಾಕ್ಷರಿ ಸ್ಪಷ್ಟಪಡಿಸಿದರು.

ಸರ್ಕಾರ ಈ ವಿಷಯದಲ್ಲಿ ಇನ್ನೂ ಹೆಚ್ಚು ವಿಳಂಬ ಮಾಡಿದರೆ ಅಥವಾ "ನಾವು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದಲ್ಲಿ, ಸಂಘಟನೆ ತನ್ನ ಅಂತಿಮ ಅಸ್ತ್ರವನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.

ಬಹಿಷ್ಕಾರವೇ ಅಂತಿಮ

"ನಮ್ಮ ಮುಂದೆ ಇರುವ ಅಂತಿಮ ಅಸ್ತ್ರವೇ ಹೋರಾಟ. ಕೆಲಸ ಬಹಿಷ್ಕಾರ ಮತ್ತು 'ಪೆನ್ ಡೌನ್' ಮಾಡಿ ಪ್ರತಿಭಟನೆ ನಡೆಸುವ ಹಂತಕ್ಕೆ ಬರುವುದು ಅನಿವಾರ್ಯವಾಗಬಹುದು. ಆ ಹೋರಾಟದ ಹೆಜ್ಜೆ ಇಡಲು ನಮ್ಮ ಸಂಘಟನೆ ಯಾವತ್ತೂ ಹಿಂದೆ ಬಿದ್ದಿಲ್ಲ," ಎಂದು ಷಡಾಕ್ಷರಿ ದೃಢವಾಗಿ ಹೇಳಿದರು.

2023ರಲ್ಲಿ ರಾಜ್ಯಾದ್ಯಂತ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಒಂದು ದಿನ ಕೆಲಸ ಬಹಿಷ್ಕಾರ ನಡೆಸಿದ್ದ ಸಂಘದ ಶಕ್ತಿ ಸರ್ಕಾರಕ್ಕೂ ಚೆನ್ನಾಗಿ ಗೊತ್ತಿದೆ ಎಂದು ಅವರು ನೆನಪಿಸಿದರು. "ರಾಜ್ಯ ಸರ್ಕಾರಿ ನೌಕರರ ಸಂಘ ಎಂದರೆ ಏನು ಎಂಬುದು ಸರ್ಕಾರಕ್ಕೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಸರ್ಕಾರವು ಅಷ್ಟು ಸುಲಭವಾಗಿ ನಮ್ಮನ್ನು ಎದುರುಹಾಕಿಕೊಳ್ಳುವುದಿಲ್ಲ. ಆದರೆ, ಹಳೆ ಪಿಂಚಣಿ ವಿಚಾರದಲ್ಲಿ ಅನಿವಾರ್ಯವಾದಲ್ಲಿ ನಾವು ಹೋರಾಟ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು.

ಹೋರಾಟಕ್ಕೆ ಅವಕಾಶ ಕೊಡಬೇಡಿ

ಅಂತಿಮವಾಗಿ ಷಡಾಕ್ಷರಿ ಸರ್ಕಾರಕ್ಕೆ ಮನವಿಯನ್ನೂ ಮಾಡಿದರು. "ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ. ನಿಮ್ಮ ಪ್ರಣಾಳಿಕೆಯ ಭರವಸೆಯನ್ನು ಪೂರೈಸಿ. ಇದು ಕೇವಲ ಚುನಾವಣಾ ಘೋಷಣೆಯಾಗಿ ಉಳಿಯಬಾರದು. ಲಕ್ಷಾಂತರ ಸರ್ಕಾರಿ ನೌಕರರ ಭವಿಷ್ಯಕ್ಕೆ ಸಂಬಂಧಿಸಿದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿ," ಎಂದು ಅವರು ಮನವಿ ಮಾಡಿದರು.

ಹಳೆ ಪಿಂಚಣಿ ವ್ಯವಸ್ಥೆಯಡಿ, ನೌಕರರು ನಿವೃತ್ತಿಯ ನಂತರ ತಮ್ಮ ಕೊನೆಯ ಸಂಬಳದ 50 ಶೇಕಡಾ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಆದರೆ ಪ್ರಸ್ತುತ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಡಿ, ನೌಕರರೇ ತಮ್ಮ ಸಂಬಳದಲ್ಲಿ ನಿರ್ದಿಷ್ಟ ಮೊತ್ತವನ್ನು ಕೊಡುಗೆಯಾಗಿ ನೀಡಬೇಕಾಗುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗುವುದರಿಂದ ಅನಿಶ್ಚಿತತೆ ಇರುತ್ತದೆ ಎಂಬುದು ನೌಕರರ ಆಕ್ಷೇಪವಾಗಿದೆ.

Read More
Next Story