
ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಸಂತೋಷ್ ಲಾಡ್
ಮರ್ಯಾದಾ ಹತ್ಯೆ| ಸಂತ್ರಸ್ತ ಕುಟುಂಬಕ್ಕೆ ಸಚಿವ ಲಾಡ್ ಸಾಂತ್ವನ; ಪಿಡಿಒ ಅಮಾನತು
ಗಾಯಾಳುಗಳ ಆರೋಗ್ಯ ಪರಿಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಉತ್ತಮ ಆರೈಕೆ ಒದಗಿಸಲು ಸೂಚಿಸಿದರು. ಸರ್ಕಾರದಿಂದ ಭದ್ರತೆ, ನೆರವು, ಪರಿಹಾರ ನೀಡುವ ಬಗ್ಗೆ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು.
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಚಿವ ಸಂತೋಷ್ ಲಾಡ್ ಸಾಂತ್ವನ ಹೇಳಿದ್ದಾರೆ. ಗರ್ಭಿಣಿ ಹತ್ಯೆ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಕೆ ವಿವೇಕಾನಂದ ದೊಡ್ಡಮನಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಶನಿವಾರ (ಡಿ.27)ರಂದು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಗಾಯಾಳುಗಳ ಆರೋಗ್ಯ ಪರಿಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಉತ್ತಮ ಆರೈಕೆ ಒದಗಿಸಲು ಸೂಚಿಸಿದರು. ಸರ್ಕಾರದಿಂದ ಭದ್ರತೆ, ನೆರವು, ಪರಿಹಾರ ನೀಡುವ ಭರವಸೆ ನೀಡಿದರು. "ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ" ತಿಳಿಸಿದರು.
ಗ್ರಾಮಕ್ಕೆ ಭೇಟಿ
ಮರ್ಯಾದ ಹತ್ಯೆ ನಡೆದಿದ್ದ ಗ್ರಾಮಕ್ಕೂ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು. ಈ ವೇಳೆ ಹಲ್ಲೆಗೊಳಗಾಗಿದ್ದ ಮರೇಪ್ಪ ದೊಡ್ಡಮನಿ, ಸುನೀಲ್ ಹರಿಜನ, ಸಂಗೀತಾ ಹರಿಜನ, ರೇಣವ್ವ, ಅನನ್ಯಾ ದೊಡ್ಡಮನಿ, ಯಲ್ಲಪ್ಪ ದೊಡ್ಡಮನಿ, ಹೂವಮ್ಮ ದೊಡ್ಡಮನಿ ಹಾಗೂ ವಿವೇಕಾನಂದ ದೊಡ್ಡಮನಿ ಅವರ ಆರೋಗ್ಯ ವಿಚಾರಿಸಿದರು.
ಪಿಡಿಒ ಅಮಾನತು
ಇನಾಂ ವೀರಾಪುರದಲ್ಲಿ ನಡೆದ ಗರ್ಭಿಣಿ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿದ ಆರೋಪದಲ್ಲಿ ಬೆಳಗಲಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಜ ಗಿರಿಯಪ್ಪನವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಮಾನತಗೊಳಿಸಿ ಆದೇಶಿಸಿದ್ದಾರೆ. ಯುವತಿ ಅಂತ್ಯ ಸಂಸ್ಕಾರ ಸೇರಿದಂತೆ ಇತರೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದ್ದ ಪಿಡಿಒ ನಿರ್ಲಕ್ಷ್ಯವಹಿಸಿದ್ದು, ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಧರಣಿ ನಡೆಸಿದ್ದರು.
ಏನಿದು ಘಟನೆ ?
ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಮೃತ ಯುವತಿ ಮಾನ್ಯ ಮತ್ತು ಅದೇ ಗ್ರಾಮದ ದಲಿತ ಯುವಕ ವಿವೇಕಾನಂದ ಸುಮಾರು ಏಳು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಇಬ್ಬರ ಮನೆಯವರ ಕಡೆಯಿಂದಲೂ ಭಾರೀ ವಿರೋಧವಿತ್ತು. ಬಳಿಕ ಪೊಲೀಸರು ಸಮ್ಮುಖದಲ್ಲಿ ಎರಡು ಕುಟುಂಬದವರನ್ನು ರಾಜಿ ಪಂಚಾಯತಿ ಕೂಡ ಮಾಡಿಸಿದ್ದರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದವಳಾದ್ದರಿಂದ ಮಗಳು ದಲಿತ ಯುವಕನನ್ನ ಪ್ರೀತಿಸಿ ಮದುವೆಯಾಗಿರುವ ಬಗ್ಗೆ ಯುವತಿ ಕುಟುಂಬಸ್ಥರಿಗೆ ಅಸಮಾಧಾನ ಇದ್ದೇ ಇತ್ತು.
ಯುವತಿ ಮತ್ತು ಯುವಕ ಮದುವೆಯ ನಂತರ ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಕಳೆದ ಡಿಸೆಂಬರ್ 8ರಂದು ಯುವತಿ ಮತ್ತು ವಿವೇಕಾನಂದ ಊರಿಗೆ ಮರಳಿದ್ದರು. ಆದರೆ ಮನೆಗೆ ಬಂದ ಯುವತಿಯ ಕುಟುಂಬಸ್ಥರು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಗೆ ಪೈಪ್ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಜಗಳ ಬಿಡಿಸಲು ಬಂದ ಸಂಬಂಧಿಗಳ ಮೇಲೆ ಹಲ್ಲೆಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಕೊನೆಯುಸಿರೆಳೆದಿದ್ದಳು.

