ರಾಜ್ಯದಲ್ಲಿ ಮರ್ಯಾದಾ ಹತ್ಯೆಗೆ ಕೊನೆಯೇ ಇಲ್ಲವೇ? ಪ್ರತ್ಯೇಕ ಕಾನೂನು ರಚನೆ ಯಾವಾಗ?
x

ರಾಜ್ಯದಲ್ಲಿ ಮರ್ಯಾದಾ ಹತ್ಯೆಗೆ ಕೊನೆಯೇ ಇಲ್ಲವೇ? ಪ್ರತ್ಯೇಕ ಕಾನೂನು ರಚನೆ ಯಾವಾಗ?

ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಹೀನ ಕೃತ್ಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ.


Click the Play button to hear this message in audio format

ಮನುಕುಲವೇ ತಲೆ ತಗ್ಗಿಸುವಂತಹ ಮರ್ಯಾದಾ ಹತ್ಯೆ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ಭಾನುವಾರ ನಡೆದಿದೆ. ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಹೀನ ಕೃತ್ಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ. ಇನ್ನು ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುವುದು ಇದೇ ಮೊದಲೇನಲ್ಲ. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ಮರ್ಯಾದಾ ಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೂ ಇದಕ್ಕೆ ಕಡಿವಾಣ ಬೀಳುತ್ತಲೇ ಇಲ್ಲ.

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ (2020-2025) ಹಲವಾರು ಮರ್ಯಾದಾ ಹತ್ಯೆ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಅಂತರ್ಜಾತಿ ಅಥವಾ ಅನ್ಯಧರ್ಮದ ಪ್ರೇಮ ಸಂಬಂಧಗಳನ್ನು ವಿರೋಧಿಸಿ ಪೋಷಕರು ಅಥವಾ ಸಂಬಂಧಿಕರೇ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಕೆಲವು ಪ್ರಮುಖ ಪ್ರಕರಣಗಳ ವಿವರ ಇಲ್ಲಿವೆ:

ಕಲಬುರಗಿ ಪ್ರಕರಣ (ಆಗಸ್ಟ್ 2025)

ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು (ಕುರುಬ ಸಮುದಾಯ) ಪ್ರೀತಿಸಿದ ಕಾರಣಕ್ಕೆ ಕವಿತಾ ಕೊಳ್ಳೂರ್ ಎಂಬ ಯುವತಿಯನ್ನು ಆಕೆಯ ತಂದೆ ಶಂಕರ್ ಕೊಳ್ಳೂರ್ ಮತ್ತು ಸಂಬಂಧಿಕರು ಕತ್ತು ಹಿಸುಕಿ ಕೊಂದಿದ್ದ. ನಂತರ ಇದು ಆತ್ಮಹತ್ಯೆ ಎಂದು ಬಿಂಬಿಸಲು ಶವಕ್ಕೆ ಕ್ರಿಮಿನಾಶಕ ಸುರಿದು, ಪೊಲೀಸರಿಗೆ ತಿಳಿಸದೆ ಹೊಲದಲ್ಲಿ ಸುಟ್ಟು ಹಾಕಿದ್ದ.

ಕೋಲಾರ ಪ್ರಕರಣ (ಮೇ/ಡಿಸೆಂಬರ್ 2023)

ಮುಳಬಾಗಲು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದ 17 ವರ್ಷದ ಅಪ್ರಾಪ್ತ ಮಗಳನ್ನು ತಂದೆ ರವಿ ಹತ್ಯೆ ಮಾಡಿ ಸುಟ್ಟು ಹಾಕಿದ್ದ. ನಂತರ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆಯೇ ದೂರು ನೀಡಿದ್ದ. ಆದರೆ ತನಿಖೆಯ ನಂತರ ಇದು ಮರ್ಯಾದಾ ಹತ್ಯೆ ಎಂದು ಬೆಳಕಿಗೆ ಬಂತು.

ಕೆಜಿಎಫ್ ಪ್ರಕರಣ (ಜೂನ್ 2023)

ಬಂಗಾರಪೇಟೆಯ ಕಾಮಸಮುದ್ರದಲ್ಲೂ ಇಂತಹದ್ದೇ ಒಂದು ಘಟನೆ 2023ರಲ್ಲಿ ನಡೆದಿತ್ತು. ಅನ್ಯಜಾತಿಯ ಯುವಕ ಗಂಗಾಧರ್ ಎಂಬುವವರನ್ನು ಪ್ರೀತಿಸುತ್ತಿದ್ದ ಕೀರ್ತಿ (19) ಎಂಬ ಯುವತಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ ಕತ್ತು ಹಿಸುಕಿ ಕೊಂದಿದ್ದ. ಈ ವಿಷಯ ತಿಳಿದ ಪ್ರಿಯಕರ ಗಂಗಾಧರ್ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು.

ವಿಜಯಪುರ ಪ್ರಕರಣ (ಜೂನ್ 2021)

ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲು ರಾಜೇಶ್ವರಿ (19) ಮತ್ತು ಸಿದ್ದರಾಮಪ್ಪ (22) ಎಂಬ ಪ್ರೇಮಿಗಳನ್ನು ಯುವತಿಯ ಕುಟುಂಬಸ್ಥರು ಬರ್ಬರವಾಗಿ ಹತ್ಯೆ ಮಾಡಿದ್ದರು. ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರು.

ದಕ್ಷಿಣ ಕನ್ನಡ ಪ್ರಕರಣ (2020)

ಮಂಗಳೂರಿನಲ್ಲಿ 2020ರಲ್ಲಿ ಅನ್ಯಧರ್ಮದ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಶಂಕೆ ವ್ಯಕ್ತವಾಗಿತ್ತು. ಕರಾವಳಿ ಭಾಗದಲ್ಲಿ ಇಂತಹ ಘಟನೆಗಳನ್ನು ಸಮಾಜದ ನೈತಿಕ ಪೊಲೀಸ್‌ಗಿರಿ ಅಥವಾ ಮರ್ಯಾದಾ ಹತ್ಯೆಯ ಹಿನ್ನೆಲೆಯಲ್ಲಿ ನೋಡಲಾಗುತ್ತದೆ.

ಕಾನೂನು ಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 2017ರಲ್ಲಿ ನಡೆದಿದ್ದ ಬಾನುಬೇಗಂ ಎಂಬ 9 ತಿಂಗಳ ಗರ್ಭಿಣಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, 2024ರ ಮೇ ತಿಂಗಳಿನಲ್ಲಿ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು.

ಪ್ರತ್ಯೇಕ ಕಾನೂನುಗಳಿಲ್ಲ

ಪ್ರಸ್ತುತ ಭಾರತದಲ್ಲಿ 'ಮರ್ಯಾದಾ ಹತ್ಯೆ' (Honor Killing) ಎಂದು ಪ್ರತ್ಯೇಕವಾಗಿ ಗುರುತಿಸುವ ಯಾವುದೇ ವಿಶೇಷ ಕಾನೂನು ಕೇಂದ್ರ ಮಟ್ಟದಲ್ಲಿ ಜಾರಿಯಲ್ಲಿಲ್ಲ. ಆದರೆ, ಇಂತಹ ಕೃತ್ಯಗಳನ್ನು ತಡೆಯಲು ಮತ್ತು ಶಿಕ್ಷಿಸಲು ಅಸ್ತಿತ್ವದಲ್ಲಿರುವ ಭಾರತೀಯ ನ್ಯಾಯ ಸಂಹಿತೆ (BNS) ಅಥವಾ ಹಳೆಯ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಕಲಂಗಳನ್ನು ಬಳಸಲಾಗುತ್ತದೆ.

ಮರ್ಯಾದಾ ಹತ್ಯೆಯಾದಾಗ ಪೊಲೀಸರು ಈ ಕೆಳಗಿನ ಕಾನೂನುಗಳ ಅಡಿಯಲ್ಲಿ ಕೇಸ್ ದಾಖಲಿಸುತ್ತಾರೆ:

ಕೊಲೆ: ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಹಳೆಯ IPC 302). ಇದಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ.

ಕೊಲೆಗೆ ಸಂಚು: ಸೆಕ್ಷನ್ 61 (ಹಳೆಯ IPC 120B). ಕೊಲೆಯಲ್ಲಿ ಭಾಗಿಯಾದ ಕುಟುಂಬದ ಸದಸ್ಯರು ಅಥವಾ ಹಳ್ಳಿಯ ಹಿರಿಯರ ವಿರುದ್ಧ ಇದನ್ನು ಬಳಸಲಾಗುತ್ತದೆ. ಶವವನ್ನು ಗುಟ್ಟಾಗಿ ಸುಡುವುದು ಅಥವಾ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದರೆ ಈ ಸೆಕ್ಷನ್ ಹಾಕಲಾಗುತ್ತದೆ.

ರಾಜಸ್ಥಾನದ ಪ್ರತ್ಯೇಕ ಕಾನೂನು

ಭಾರತದಲ್ಲಿ ಮರ್ಯಾದಾ ಹತ್ಯೆ ವಿರುದ್ಧ ಪ್ರತ್ಯೇಕ ಕಾನೂನನ್ನು ತಂದ ಮೊದಲ ರಾಜ್ಯ ರಾಜಸ್ಥಾನ. ರಾಜಸ್ಥಾನ ಮರ್ಯಾದಾ ಹತ್ಯೆ ನಿಷೇಧ ಮಸೂದೆ, 2019 (Rajasthan Prohibition of Interference with the Freedom of Matrimonial Alliances in the Name of Honour and Tradition Bill)ಯನ್ನು ಅಂಗೀಕರಿಸಲಾಗಿತ್ತು. ಇದರ ಅಡಿಯಲ್ಲಿ, ಮರ್ಯಾದಾ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯ ಜೊತೆಗೆ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶವಿದೆ.

ಪ್ರತ್ಯೇಕ ಕಾನೂನಿನ ಅವಶ್ಯಕತೆ ಏಕೆ?

ಮರ್ಯಾದಾ ಹತ್ಯೆಯು ಕೇವಲ ಒಂದು ಕೊಲೆಯಲ್ಲ, ಇದರಲ್ಲಿ ಒಂದು ಸಮುದಾಯ ಅಥವಾ ಇಡೀ ಕುಟುಂಬವೇ ಶಾಮೀಲಾಗಿರುತ್ತದೆ. ಆದ್ದರಿಂದ ಕೃತ್ಯಕ್ಕೆ ಪ್ರಚೋದನೆ ನೀಡುವ ಹಳ್ಳಿಯ ಹಿರಿಯರನ್ನು ಅಥವಾ ಪೋಷಕರನ್ನು ಶಿಕ್ಷಿಸಲು ಬಲವಾದ ಕಾನೂನು ಬೇಕು. ಸಾಕ್ಷ್ಯ ನಾಶಪಡಿಸುವುದು ಇಂತಹ ಪ್ರಕರಣಗಳಲ್ಲಿ ಹೆಚ್ಚು, ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಬೇಕು.

ಸಹಾಯವಾಣಿಗೆ ಕರೆ ಮಾಡಿ

ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹವಾಗಿ ಜೀವಭಯವಿದ್ದರೆ ಅಥವಾ ಕಿರುಕುಳ ಅನುಭವಿಸುತ್ತಿದ್ದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬಹುದು. ಸಹಾಯವಾಣಿ 112 ಗೆ ಕರೆ ಮಾಡಬಹುದು. ಅಥವಾ ಕರ್ನಾಟಕ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು.

ಶಕ್ತಿವಾಹಿನಿ

ಇನ್ನು ಇಂತಹ ಮರ್ಯಾದಾ ಹತ್ಯೆ ಪ್ರಕರಣಗಳನ್ನು ತಡೆಯಲು ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಶಕ್ತಿವಾಹಿನಿ ಎಂಬ ವಿಶೇಷ ಘಟಕವನ್ನು ರಚಿಸಿದೆ. ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ನೀಡಲು ಘಟಕಗಳನ್ನು ಸ್ಥಾಪಿಸಲಾಗಿದೆ.

Read More
Next Story