
ಸಾಂದರ್ಭಿಕ ಚಿತ್ರ
ಬೆಂಗಳೂರು| ಹಿಟ್ ಅಂಡ್ ರನ್ ಪ್ರಕರಣ ; ಬಿಕಾಂ ವಿದ್ಯಾರ್ಥಿನಿ ಬಲಿ
ಬೂದಿಗೆರೆ ಕ್ರಾಸ್ ಬಳಿ ಸ್ಕೂಟಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ಹಿಟ್ ಅಂಡ್ ರನ್ಗೆ ಕಾಲೇಜು ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ದ್ವಿತೀಯ ವರ್ಷದ ಬಿ.ಕಾಂ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬೂದಿಗೆರೆ ಕ್ರಾಸ್ ಬಳಿ ಸ್ಕೂಟಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದರು. ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಹರಿದಿದೆಯೋ ಅಥವಾ ಟಿಪ್ಪರ್ ಡಿಕ್ಕಿಯಾಗಿ ಮೃತಪಟ್ಟಿದ್ದಾಳೆಯೋ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆ.ಆರ್ ಪುರಂ ಸಂಚಾರಿ ಪೊಲೀಸರು ಮತ್ತು ಆವಲಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಮೃತದೇಹ ಆಸ್ಪತ್ರೆಗೆ ಸಾಗಿಸಲಾಗಿದೆ. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಅಪಘಾತಕ್ಕೆ ಮೂವರು ಬಲಿ
ಇನ್ನೊಂದೆಡೆ ತುಮಕೂರಿನ ಶಿರಾ ನಗರ ಹೊರವಲಯದ ಸಾಯಿ ಡಾಬಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ಘಟನೆ ನಡೆದಿದೆ. ಶಿರಾ ತಾಲೂಕಿನ ಎಮ್ಮೇರಹಳ್ಳಿ ತಾಂಡದ ವಿಷ್ಣು ಎನ್. ನಾಯ್ಕ್ (24), ರಾಮನಗರ ಜಿಲ್ಲೆಯ ಕೊಳಗೊಂಡನಹಳ್ಳಿ ಗ್ರಾಮದ ಮುತ್ತುರಾಜ್ (36) ಮತ್ತು ವೆಂಕಟಧನಶೆಟ್ಟಿ (64) ಮೃತಪಟ್ಟಿದ್ದಾರೆ.