
ರಿಯಲ್ ಎಸ್ಟೇಟ್ ಉದ್ಯಮಿ ದಂಪತಿ ಅಪಹರಣ|15 ನಿಮಿಷದಲ್ಲೇ ಆರೋಪಿಗಳ ಬಂಧನ
ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಸೇರಿದ ಆರೋಪಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮ ದಂಪತಿಯ ಹಣಕಾಸು ವ್ಯವಹಾರದ ಮಾಹಿತಿ ಮೊದಲೇ ಇತ್ತು ಎಂಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ರಿಯಲ್ ಎಸ್ಟೇಟ್ ಉದ್ಯಮ ದಂಪತಿ ಸೇರಿ ಮೂವರನ್ನು ಅಪಹರಿಸಿ 1.1 ಕೋಟಿ ರೂ. ದರೋಡೆ ಮಾಡಿದ್ದ ಎಂಟು ಮಂದಿ ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ 15ನಿಮಿಷದಲ್ಲೇ ಬಂಧಿಸಿದ್ದಾರೆ. ಆರೋಪಿಗಳಿಂದ ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ನರಸಿಂಹ (30), ಜೀವನ್ (28), ಕುಮಾರ್ (33), ವೆಂಕಟರಾಜು (32), ಕಿಶೋರ್ (32), ನಮನ್ (19), ರವಿಕಿರಣ್ (30) ಮತ್ತು ಚಂದ್ರು (34) ಎಂದು ಗುರುತಿಸಲಾಗಿದೆ. ಬಂಧಿತರಿಂದ 1.1 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಘಟನೆ ಏನು?
ಬನ್ನೇರುಘಟ್ಟ ರಸ್ತೆಯ ಸಮೀಪವಿರುವ ಅಕ್ಷಯನಗರದ ಅಕ್ಷಯ ಪಾರ್ಕ್ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಮೋಟಾರಾಮ್, ಅವರ ಪತ್ನಿ ಲಕ್ಷ್ಮೀದೇವಿ, ತುಮಕೂರಿನ ಅಡಿಕೆ ವ್ಯಾಪಾರಿ ಮೋಹನ್ ಅವರ ನೌಕರ ಹೇಮಂತ್ ಅವರಿಗೆ ಭೂ ವ್ಯವಹಾರದ ಸಲುವಾಗಿ ಹಣ ನೀಡಲು ಬಂದಿದ್ದರು.
ರಾಮ್ ದಂಪತಿ ಹಣ ತುಂಬಿದ್ದ ಎರಡು ಚೀಲಗಳನ್ನು ಹೇಮಂತ್‌ಗೆ ತೋರಿಸುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ವ್ಯವಹಾರವನ್ನು ವಿಡಿಯೊದಲ್ಲಿ ದಾಖಲಿಸಬೇಕು ಎಂದು ಹೇಳಿ, ವಾಹನ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಬಲವಂತವಾಗಿ ಕಾರಿನ ಬಾಗಿಲುಗಳನ್ನು ತೆರೆಯಲು ಯತ್ನಿಸಿದ್ದಾರೆ. ದಂಪತಿ ವಿರೋಧಿಸಿದಾಗ ದಾಳಿಕೋರರು ಹಲ್ಲೆಗೆ ಮುಂದಾಗಿದ್ದಾರೆ. ಆಗ ರಾಮ್ ದಂಪತಿ ಹಾಗೂ ಹೇಮಂತ್ ಕಾರಿನೊಂದಿಗೆ ತಪ್ಪಿಸಿಕೊಂಡಿದ್ದಾರೆ.
ಬೆನ್ನಟ್ಟಿ ಅಪಹರಿಸಿದ ಆರೋಪಿಗಳು
ದಾಳಿಕೋರರು ಕಾರನ್ನು ಬೆನ್ನಟ್ಟಿ ಒಂದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿ, ಹತ್ತಿರದ ಶೆಡ್‌ಗೆ ಎಳೆದೊಯ್ದಿದ್ದಾರೆ. ಈ ವೇಳೆ ಅವರೊಂದಿಗೆ ಇತರೆ ಸಹಚರರೂ ಸೇರಿಕೊಂಡು ಸಂತ್ರಸ್ತರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಅಲ್ಲದೇ ಹತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ಹೇಮಂತ್ ಅವರು ದರೋಡೆಕೋರರ ಮನವೊಲಿಸಿ, ತಮ್ಮ ಮಾಲೀಕ ಮೋಹನ್‌ಗೆ ಕರೆ ಮಾಡಲು ಅನುಮತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಗೋ ರಹಸ್ಯವಾಗಿ ಮೋಹನ್‌ಗೆ ಘಟನೆಯ ವಿವರ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಮೋಹನ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಹಿರಿಯ ಅಧಿಕಾರಿಗಳು, ಸಮೀಪದಲ್ಲೇ ಗಸ್ತಿನಲ್ಲಿದ್ದ ಹುಳಿಮಾವು ಠಾಣಾ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ಉದ್ಯಮ ದಂಪತಿ ಹಾಗೂ ಮೂವರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಸೇರಿದ ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ಹಣದ ವ್ಯವಹಾರದ ಬಗ್ಗೆ ಮೊದಲೇ ತಿಳಿದುಕೊಂಡು ದರೋಡೆ ಎಸಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.