
ಕರ್ನಾಟಕ ಹೈಕೋರ್ಟ್
ಒಳ ಮೀಸಲಾತಿ ನಿರ್ಣಯಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್ ಜಾರಿ
ಎಡಗೈ ಮತ್ತು ಬಲಗೈ ಸಮುದಾಯಗಳಿಗೆ (ಗುಂಪು ಎ ಮತ್ತು ಬಿ) ತಲಾ ಶೇ. 6ರಷ್ಟು, ಹಾಗೂ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಇತರ ಅಲೆಮಾರಿ ಜಾತಿಗಳನ್ನೊಳಗೊಂಡ ಸ್ಪೃಶ್ಯ ಗುಂಪುಗಳಿಗೆ (ಗುಂಪು ಸಿ) ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಲಾಗಿತ್ತು.
ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ವರ್ಗೀಕರಣ ಮತ್ತು ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಕೈಗೊಂಡಿದ್ದ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಸಂಬಂಧ, ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಎ.ಎಚ್. ನಾಗಮೋಹನ ದಾಸ್ ಆಯೋಗದ ವರದಿಗಳನ್ನು ಆಧರಿಸಿ, ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ (ಎಡಗೈ, ಬಲಗೈ ಮತ್ತು ಇತರ ಸ್ಪೃಶ್ಯ ಸಮುದಾಯಗಳು) ವರ್ಗೀಕರಿಸಿ, ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಲಾದ ಶೇ. 17ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲು 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟವು ನಿರ್ಣಯ ಕೈಗೊಂಡಿತ್ತು.
ಈ ನಿರ್ಣಯದ ಪ್ರಕಾರ, ಎಡಗೈ ಮತ್ತು ಬಲಗೈ ಸಮುದಾಯಗಳಿಗೆ (ಗುಂಪು ಎ ಮತ್ತು ಬಿ) ತಲಾ ಶೇ. 6ರಷ್ಟು, ಹಾಗೂ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಇತರ ಅಲೆಮಾರಿ ಜಾತಿಗಳನ್ನೊಳಗೊಂಡ ಸ್ಪೃಶ್ಯ ಗುಂಪುಗಳಿಗೆ (ಗುಂಪು ಸಿ) ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಲಾಗಿತ್ತು.
ಅರ್ಜಿದಾರರ ಆಕ್ಷೇಪ
ಸಚಿವ ಸಂಪುಟದ ಈ ನಿರ್ಣಯವನ್ನು ಆಕ್ಷೇಪಿಸಿ, ಬಂಜಾರ, ಭೋವಿ, ಕೊರಮ, ಕೊರಚ ಸಮಾಜ ಕಲ್ಯಾಣ ಸಂಘದ ಪರವಾಗಿ ಶಾಮರಾವ್ ಕೆ. ಪವಾರ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವರ್ಗೀಕರಣವು ಅವೈಜ್ಞಾನಿಕವಾಗಿದೆ ಮತ್ತು ತಮ್ಮ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.
ಸೋಮವಾರ, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆಯನ್ನು ನಡೆಸಿತು. ಅರ್ಜಿದಾರರ ಪರ ವಕೀಲರು, "ಇದು ಮೀಸಲಾತಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನಾಗಮೋಹನ ದಾಸ್ ಸಮಿತಿ ವರದಿಯ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಲಾಗಿದೆ," ಎಂದು ವಾದ ಮಂಡಿಸಿದರು.
ವಾದವನ್ನು ಆಲಿಸಿದ ಪೀಠವು, ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಮತ್ತು ಜಂಟಿ ಕಾರ್ಯದರ್ಶಿಗಳು, ಆಯುಕ್ತರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿತು.
ಮಧ್ಯಂತರ ತಡೆಗೆ ನಿರಾಕರಣೆ
ಈ ಹಂತದಲ್ಲಿ, ಅರ್ಜಿದಾರರ ಪರ ವಕೀಲರು ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಬೇಕೆಂದು ಕೋರಿದರು. ಆದರೆ, ಪೀಠವು ಈ ಕೋರಿಕೆಯನ್ನು ತಿರಸ್ಕರಿಸಿತು. "ಒಳ ಮೀಸಲಾತಿ ನಿರ್ಣಯದ ಅನ್ವಯ ಹೊಸ ನೇಮಕಾತಿಗಳನ್ನು ಮಾಡದಂತೆ ಈ ಹಿಂದೆಯೇ ತಡೆ ನೀಡಲಾಗಿದೆ. ಆದ್ದರಿಂದ, ಈ ಅರ್ಜಿಯಲ್ಲಿ ಮತ್ತೊಮ್ಮೆ ಮಧ್ಯಂತರ ಆದೇಶವನ್ನು ಪರಿಗಣಿಸುವ ಅಗತ್ಯವಿಲ್ಲ. ಇದು ಅನಗತ್ಯವಾದ ಕೋರಿಕೆಯಾಗಿದೆ," ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಈಗಾಗಲೇ ತಡೆ ನೀಡಲಾಗಿರುವ ಅರ್ಜಿಯ ಜೊತೆಗೇ ಈ ಹೊಸ ಅರ್ಜಿಯನ್ನೂ ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠವು ಆದೇಶಿಸಿತು.

