
ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ, ಮುಂದಿನ 5 ವರ್ಷ ನಾವೇ: ಸದನದಲ್ಲಿ ಸಿದ್ದರಾಮಯ್ಯ
ಅಶೋಕ್ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, "ನಮಗೆ 140 ಜನ ಶಾಸಕರ ಬೆಂಬಲವಿದೆ. ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಸ್ವಪಕ್ಷೀಯ ಶಾಸಕರೊಬ್ಬರು ಅನುದಾನ ತಾರತಮ್ಯದ ಬಗ್ಗೆ ಎತ್ತಿದ ಪ್ರಶ್ನೆ, ಅಂತಿಮವಾಗಿ ಮುಖ್ಯಮಂತ್ರಿಗಳ ಕುರ್ಚಿಯ ಭದ್ರತೆಯ ಚರ್ಚೆಗೆ ತಿರುಗಿದ ಪ್ರಸಂಗ ವಿಧಾನಮಂಡಲದ ಅಧಿವೇಶನದಲ್ಲಿ ಇಂದು ಬೆಳಗಿನ ಅವಧಿಯಲ್ಲಿ ನಡೆಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ "ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ, 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ" ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ಚರ್ಚೆಯ ಆರಂಭವಾಗಿದ್ದು ಅನುದಾನದ ವಿಚಾರದಿಂದ. ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ತಮ್ಮದೇ ಸರ್ಕಾರದ ವಿರುದ್ಧ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. "ಮಧುಗಿರಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ನೀಡಿದ್ದೀರಿ, ಆದರೆ ನನ್ನ ಕ್ಷೇತ್ರಕ್ಕೆ ಯಾಕೆ ಅನುದಾನ ಕೊಡುತ್ತಿಲ್ಲ?" ಎಂದು ಸಿಎಂ ಸಿದ್ದರಾಮಯ್ಯನವರತ್ತ ಬೊಟ್ಟು ಮಾಡಿ ಪ್ರಶ್ನಿಸಿದರು. ಅಲ್ಲದೆ, "ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಒಂದು ಸಾವಿರ ಕೋಟಿ ರೂ. ಅನುದಾನವನ್ನು ತಡೆಹಿಡಿಯಲಾಗಿದೆ" ಎಂದು ರಂಗನಾಥ್ ಗಂಭೀರ ಆರೋಪ ಮಾಡಿದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, "ಯಾರಿಗೂ ಅನುದಾನ ಕಡಿತ ಮಾಡಿಲ್ಲ. ಒಂದು ವೇಳೆ ಹೆಚ್ಚು ಕಡಿಮೆಯಾಗಿದ್ದರೆ ಪರಿಶೀಲಿಸುತ್ತೇನೆ" ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಪ್ರತಿಪಕ್ಷ ನಾಯಕ ಅಶೋಕ್ ಲೇವಡಿ
ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡಿದ್ದನ್ನು ಅಸ್ತ್ರವಾಗಿ ಬಳಸಿಕೊಂಡ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಒಳಜಗಳದ ಬಗ್ಗೆ ಲೇವಡಿ ಮಾಡಿದರು. "ಅವರಿಗೆ (ರಂಗನಾಥ್) ಹೊಟ್ಟೆ ಉರಿಯುತ್ತಿದೆ. ಸಿಎಂ ಕುರ್ಚಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಥವಾ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರೋದ್ರಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ" ಎಂದು ಕಾಲೆಳೆದರು. ಮುಂದುವರಿದು, "ನೀವು ಐದು ವರ್ಷ ಪೂರ್ತಿ ಅಧಿಕಾರದಲ್ಲಿ ಇರುತ್ತೀರಾ?" ಎಂದು ಸಿಎಂಗೆ ನೇರ ಪ್ರಶ್ನೆ ಹಾಕಿದರು.
ಸಿಎಂ ಖಡಕ್ ಉತ್ತರ
ಅಶೋಕ್ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, "ನಮಗೆ 140 ಜನ ಶಾಸಕರ ಬೆಂಬಲವಿದೆ. ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಐದು ವರ್ಷ ನಾನೇ ಇರುತ್ತೇನೆ. ಅಷ್ಟೇ ಅಲ್ಲ, 2028ರ ಚುನಾವಣೆಯಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಮುಂದೆಯೂ ಜನ ನಿಮಗೆ ಅವಕಾಶ ಕೊಡುವುದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಜಿ. ಪರಮೇಶ್ವರ್, "140 ಶಾಸಕರು ಬೆಂಬಲ ನೀಡಿರುವುದರಿಂದಲೇ ಅವರು ಐದು ವರ್ಷ ನಾನೇ ಸಿಎಂ ಎನ್ನುತ್ತಿದ್ದಾರೆ" ಎಂದು ಸಿಎಂ ಮಾತಿಗೆ ದನಿಗೂಡಿಸಿದರು. ಇದಕ್ಕೆ ಟಾಂಗ್ ನೀಡಿದ ಅಶೋಕ್, "ನೋಡಿ, ಸಿದ್ದರಾಮಯ್ಯನವರ ಪರ ಪರಮೇಶ್ವರ್ ಮಾತ್ರ ಇದ್ದಾರೆ" ಎಂದು ವ್ಯಂಗ್ಯವಾಡಿದರು.
ಚರ್ಚೆಯ ಅಂತ್ಯದಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, "ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ" ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

