
ಸಿಎಂ ಬದಲಾವಣೆ ವಿಚಾರ| ಶಾಸಕ ರಂಗನಾಥ್, ಮಾಜಿ ಸಂಸದ ಶಿವರಾಮೇಗೌಡಗೆ ನೋಟಿಸ್; ಚರ್ಚೆ ನಿಷಿದ್ಧ ಎಂದ ಡಿಕೆಶಿ
ಡಿಕೆಶಿ ಬೆಂಬಲಿಗರ ಈ “ನವೆಂಬರ್ ಕ್ರಾಂತಿ"ಯ ಹೇಳಿಕೆಗಳು ಸಿಎಂ ಬಣದ ಶಾಸಕರು ಹಾಗೂ ಸಚಿವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಧ್ಯಮಗಳ ಮುಂದೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಇಬ್ಬರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಗಳು ಕೇಳಿ ಬಂದಿದ್ದವು.
ಕಾಂಗ್ರೆಸ್ ಪಕ್ಷದಲ್ಲಿ ʼಸಿಎಂ ಬದಲಾವಣೆʼ ವಿಚಾರವಾಗಿ ನವೆಂಬರ್ ಕ್ರಾಂತಿಯ ಹೇಳಿಕೆಗಳು ಮತ್ತೆ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿವೆ. ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಬಳಿಕವೂ ಕೆಲವರು ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿರುವುದು ಹಿರಿಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ಬುಧವಾರ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಡಿ.ಕೆ.ಶಿ ಅವರಿಗೆ ಹೈಕಮಾಂಡ್ ಸಿಎಂ ಸ್ಥಾನ ನೀಡಬೇಕು. ನವೆಂಬರ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಇತ್ಯರ್ಥವಾಗಲಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿರುಗೇಟು ನೀಡಿದ್ದರು. ಡಿಕೆಶಿ ಬೆಂಬಲಿಗರ ಈ “ನವೆಂಬರ್ ಕ್ರಾಂತಿ"ಯ ಹೇಳಿಕೆಗಳು ಸಿಎಂ ಬಣದ ಶಾಸಕರು ಹಾಗೂ ಸಚಿವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಧ್ಯಮಗಳ ಮುಂದೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಇಬ್ಬರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಗಳು ಕೇಳಿ ಬಂದಿದ್ದವು.
ಇಬ್ಬರಿಗೂ ನೋಟಿಸ್ ಜಾರಿ
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿರುವ ಎಲ್.ಆರ್. ಶಿವರಾಮೇಗೌಡ ಹಾಗೂ ಡಾ. ರಂಗನಾಥ್ ಅವರಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಅಧಿಕಾರ ಹಂಚಿಕೆ ಕುರಿತಂತೆ ಚರ್ಚೆ ಮಾಡುವುದು ಸಂಪೂರ್ಣ ನಿಷೇಧ. ಈ ಕುರಿತು ಚರ್ಚೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇಂತಹ ವರ್ತನೆಗಳಿಂದ ಪಕ್ಷಕ್ಕೆ ಹಾನಿಯಾಗಲಿದೆ. ಕುಣಿಗಲ್ ಶಾಸಕ ರಂಗನಾಥ್ ಹಾಗೂ ಶಿವರಾಮೇಗೌಡ ಅವರಿಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಯಾರೂ ಕೂಡ ನನ್ನ ಪರವಾಗಲಿ, ಸಿಎಂ ಸಿದ್ದರಾಮಯ್ಯ ಅವರ ಪರವಾಗಲಿ ಮಾತನಾಡಿದರೆ ಅದು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ಕುರಿತು ಯಾರೂ ಮಾತನಾಡಬಾರದು ಎಂದು ಹೇಳಿದ್ದಾರೆ. ಹೈಕಮಾಂಡ್ ಕೂಡ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಾವೆಲ್ಲರೂ ಪಕ್ಷದ ಆದೇಶಕ್ಕೆ ಬದ್ಧವಾಗಿರಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಮಾಧ್ಯಮದವರು ಯಾರೋ ಹೇಳಿದ ಮಾತನ್ನು ನನ್ನ ಬಾಯಲ್ಲಿ ಹಾಕಲು ಹೋಗಬೇಡಿ. ನಾನು ಮೂರ್ಖನಲ್ಲ ಎಂದು ಕಿಡಿಕಾರಿದ್ದಾರೆ.
ಸಿಎಂ ಹೇಳಿಕೆ ಪುನರುಚ್ಚರಿಸಿದ ಡಿಸಿಎಂ
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ. ಎಲ್ಲರೂ ಅದಕ್ಕೆ ಬದ್ಧವಾಗಿರಬೇಕು. ಹೈಕಮಾಂಡ್ ಆದೇಶಕ್ಕೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ
ನವೆಂಬರ್ ತಿಂಗಳಿಗೆ ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ. ಹಾಗಾಗಿ ನವೆಂಬರ್ ಕ್ರಾಂತಿ ಕುರಿತು ವಿಪಕ್ಷಗಳು ಹೇಳುತ್ತಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಬಿಜೆಪಿ ತಮ್ಮ ಪಕ್ಷದಲ್ಲಿ ಬೇಕಿದ್ದರೆ ಕ್ರಾಂತಿ ಮಾಡಿಕೊಳ್ಳಲಿ. ನಾನು ಸೂಜಿ, ದಾರ ಬೇಕಾದರೆ ಕಳಿಸಿಕೊಡುತ್ತೇನೆ, ಹೊಲೆದುಕೊಂಡು ಅವರ ಪಕ್ಷವನ್ನು ಸರಿ ಮಾಡಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಡಾ.ರಂಗನಾಥ್, ಶಿವರಾಮೇಗೌಡ ಏನು ಹೇಳಿದ್ದರು?
"ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲುವಲ್ಲಿ ಡಿ.ಕೆ.ಶಿವಕುಮಾರ್ ಅವರ ಶ್ರಮವಿದೆ. ಅವರು ಒಂದಲ್ಲ, ಒಂದು ದಿನ ಸಿಎಂ ಆಗಲಿದ್ದಾರೆ ಎಂಬ ವಿಶ್ವಾಸವಿದೆ. ಡಿಸಿಎಂ ಡಿ.ಕೆ.ಶಿ ಅವರು ನನ್ನ ರಾಜಕೀಯ ಗುರು, ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಸಾಕಷ್ಟು ಕಾರ್ಯಕರ್ತರು ಆಪೇಕ್ಷೆ ಪಡುತ್ತಿದ್ದಾರೆ" ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಬೆಂಗಳೂರಿನಲ್ಲಿ ಹೇಳಿದ್ದರು.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ಡಿಕೆಶಿ ಅವರು ಸಿಎಂ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ, ನವೆಂಬರ್ ತಿಂಗಳಲ್ಲಿ ಶೇ 100ರಷ್ಟು ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮ ವಹಿಸಿದ ಅವರನ್ನು ಸಿಎಂ ಮಾಡಬೇಕೆಂಬುದು ನಮ್ಮೆಲ್ಲರ ಆಪೇಕ್ಷೆ. ಈ ಕುರಿತು ಹೈಕಮಾಂಡ್ ನಿರ್ಧಾರ ಮಾಡಬೇಕಿದೆ ಎಂದು ಹೇಳಿದ್ದರು.